ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಹೆದ್ದಾರಿಗಳು ಶೀಘ್ರದಲ್ಲಿ ಚತುಷ್ಪಥ

Last Updated 7 ಅಕ್ಟೋಬರ್ 2017, 9:28 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಐದು ಪ್ರಮುಖ ರಸ್ತೆಗಳು ಭಾರತ್‌ ಮಾಲಾ ಯೋಜನೆಯಡಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗಳಾಗಿ ಶೀಘ್ರದಲ್ಲಿ ಮೇಲ್ದರ್ಜೆಗೇರಲಿವೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಕೇಂದ್ರ ಹೆದ್ದಾರಿ ಸಚಿವಾಲಯದಲ್ಲಿ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್‌ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ಶುಕ್ರವಾರ ಎನ್‌ಎಚ್‌ಎಐ ಮತ್ತು ರಾಜ್ಯ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಚತುಷ್ಪಥ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ ಎಂದರು.

ರಾಷ್ಟ್ರೀಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿವರೆಗೆ ಎಂಬ ಕಲ್ಪನೆಯಡಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಭಾರತ್‌ ಮಾಲಾ ಯೋಜನೆ ರೂಪಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಮೂಲ್ಕಿಯಿಂದ ಬಿ.ಸಿ.ರೋಡ್‌ವರೆಗೆ ಮತ್ತು ಮೆಲ್ಕಾರ್‌ನಿಂದ ತೊಕ್ಕೊಟ್ಟುವರೆಗಿನ ಮಾರ್ಗದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಸೋಮವಾರ (ಅಕ್ಟೋಬರ್ 9) ಸಮೀಕ್ಷೆಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಮೂಲ್ಕಿಯಿಂದ ಕಟೀಲು, ಪಡುಪೆರಾರ, ಪೊಳಲಿ ಕ್ರಾಸ್‌, ಕಲ್ಪನೆ ಮಾರ್ಗವಾಗಿ ಬಿ.ಸಿ.ರೋಡ್‌ವರೆಗೆ ಒಂದು ಚತುಷ್ಪಥ ಹೆದ್ದಾರಿ ನಿರ್ಮಾಣವಾಗಲಿದೆ. ಮೆಲ್ಕಾರ್‌ನಿಂದ ಮುಡಿಪು ಮಾರ್ಗವಾಗಿ ತೊಕ್ಕೊಟ್ಟುವರೆಗೆ ಇನ್ನೊಂದು ಮಾರ್ಗದಲ್ಲಿ ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡಲಾಗುತ್ತದೆ ಎಂದು ವಿವರಿಸಿದರು.

ಕಲ್ಲಡ್ಕದಿಂದ ವಿಟ್ಲ ಮಾರ್ಗವಾಗಿ ಚೆರ್ವತ್ತೂರುವರೆಗೆ ಮತ್ತು ಗುಂಡ್ಯದಿಂದ ಸುಬ್ರಹ್ಮಣ್ಯದವರೆಗೆ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ದೊರೆತಿದೆ. ಈ ಎರಡೂ ರಸ್ತೆಗಳ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯದಿಂದ ಈ ಕಾಮಗಾರಿ ನಡೆಯಲಿದೆ. ಬಂಟ್ವಾಳದಿಂದ ಸಿದ್ದಕಟ್ಟೆ ಮಾರ್ಗವಾಗಿ ಮೂಡುಬಿದಿರೆವರೆಗೆ ಮತ್ತೊಂದು ಚತುಷ್ಪಥ ರಸ್ತೆ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಇನ್ನೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಈ ಎಲ್ಲ ರಸ್ತೆಗಳೂ ವಿಭಜಕವಿಲ್ಲದ 35 ಮೀಟರ್‌ ಅಗಲದ ರಸ್ತೆಗಳಾಗಲಿವೆ ಎಂದು ನಳಿನ್‌ ತಿಳಿಸಿದರು.

ಭೂ ಸ್ವಾಧೀನ ಪ್ರಕ್ರಿಯೆ: ಬಿ.ಸಿ.ರೋಡ್‌ನಿಂದ ಗುಂಡ್ಯದವರೆಗೆ ಚತುಷ್ಪಥ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭೂಮಿ ಕಳದುಕೊಳ್ಳುವವರಿಗೆ ಪರಿಹಾರ ವಿತರಿಸುವ ಕೆಲಸವೂ ನಡೆಯುತ್ತಿದೆ. 2019ರ ಮೇ ಅಂತ್ಯದ ವೇಳೆಗೆ 15 ಕಿ.ಮೀ. ಉದ್ದದ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮುಗಿಯಲಿದೆ. 17 ಕಿ.ಮೀ. ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ತಕರಾರು ಸೇರಿದಂತೆ ಕೆಲವು ಸಮಸ್ಯೆಗಳಿವೆ. ಎಲ್ಲವನ್ನೂ ಶೀಘ್ರದಲ್ಲಿ ಪರಿಹರಿಸಲಾಗುವುದು ಎಂದರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಂಪ್‌ವೆಲ್‌ ಮತ್ತು ತೊಕ್ಕೊಟ್ಟು ಬಳಿ ಮೇಲುಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಎನ್‌ಎಚ್‌ಎಐ ಮತ್ತು ನವಯುಗ ಕಂಪೆನಿಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಾಮಗಾರಿ ಸ್ಥಳದಲ್ಲಿ ಹದಗೆಟ್ಟಿರುವ ಸರ್ವೀಸ್‌ ರಸ್ತೆಯಲ್ಲಿ ಗುಂಡಿಮುಚ್ಚಲು ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಜಿಲ್ಲೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಹುತೇಕ ರಸ್ತೆಗಳಲ್ಲಿ ಗುಂಡಿಬಿದ್ದಿರುವ ಕುರಿತು ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಕ್ಟೋಬರ್‌ ಅಂತ್ಯದೊಳಗೆ ಗುಂಡಿಮುಚ್ಚುವ ಕೆಲಸ ಮಾಡುವಂತೆ ನಿರ್ದೇಶನ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ವಿಜಯ್‌, ಎಂಜಿನಿಯರ್‌ ಅಜಿತ್‌ಕುಮಾರ್‌ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT