ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರಲ್ಲ: ದೇವೇಗೌಡ ಸ್ಪಷ್ಟನೆ

Last Updated 7 ಅಕ್ಟೋಬರ್ 2017, 9:43 IST
ಅಕ್ಷರ ಗಾತ್ರ

ಮೈಸೂರು: ‘ನಾನು ಕಾಂಗ್ರೆಸ್‌ ಸೇರುತ್ತಿ ದ್ದೇನೆ ಎಂಬ ಸುದ್ದಿ ಹಬ್ಬಿಸಲಾಗಿದೆ. ಇದು ಸುಳ್ಳು’ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದರು. ‘ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸೇರಲ್ಲ. ಅದರಲ್ಲೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ಗೆ ಜೆಡಿಎಸ್‌ ಪಕ್ಷದ ಯಾರೂ ಹೋಗುವುದಿಲ್ಲ. ಕಾರ್ಯ ಕರ್ತರಲ್ಲಿ ಗೊಂದಲ ಮೂಡಿಸಲು ಊಹಾಪೋಹ ಎಬ್ಬಿಸಲಾಗುತ್ತಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕಾಂಗ್ರೆಸ್‌ ಸೇರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನೊಂದಿಗೆ ಮಾತನಾಡಿದ್ದಾರೆ ಎಂಬ ಸುಳ್ಳು ಹರಡಲಾಗಿದೆ. ಕಾಂಗ್ರೆಸ್‌ನ ಯಾವುದೇ ಮುಖಂಡರು ನನ್ನ ಜತೆ ಮಾತನಾಡಿಲ್ಲ. ಮುಂಬರುವ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ರಾಜಕಾರಣದಲ್ಲಿ ಮರು ಜನ್ಮ ನೀಡಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಅಂತ್ಯವಾಗಲಿದೆ’ ಎಂದು ಭವಿಷ್ಯ ನುಡಿದರು.

ಕಳೆದ ಹಲವು ವರ್ಷಗಳಿಂದ ಚಾಮುಂಡೇಶ್ವರಿ ಕ್ಷೇತ್ರದ ಕಡೆ ಕಣ್ಣೆತ್ತಿಯೂ ನೋಡದ ಸಿದ್ದರಾಮಯ್ಯ ಅವರಿಗೆ ಏಕಾಏಕಿ ಈ ಕ್ಷೇತ್ರದ ಮೇಲೆ ಪ್ರೀತಿ ಮೂಡಿದೆ. ಕ್ಷೇತ್ರದ ಜೊತೆ ಭಾವನಾತ್ಮಕ ಸಂಬಂಧ ಇದೆ ಎನ್ನುತ್ತಿದ್ದಾರೆ. ಇವೆಲ್ಲ ಬರೀ ನಾಟಕ ಎಂದು ಟೀಕಿಸಿದರು.

‘ಸಿದ್ದರಾಮಯ್ಯ ಕಳೆದ ಚುನಾ ವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ವರುಣಾ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಾಗ ಅದರ ಹಿಂದೆ ನನ್ನ ಶ್ರಮ ಅಡಗಿತ್ತು. ಸಿದ್ದರಾಮಯ್ಯ ಅವರಿಗೆ ಸ್ವಂತ ಶಕ್ತಿಯಿಂದ ಚುನಾವಣೆ ಗೆಲ್ಲುವ ಸಾಮರ್ಥ್ಯ ಹಿಂದೆಯೂ ಇರಲಿಲ್ಲ. ಈಗಲೂ ಇಲ್ಲ. ಮುಂದೆಯೂ ಇರುವುದಿಲ್ಲ’ ಎಂದು ವ್ಯಂಗ್ಯ ವಾಡಿದರು.

ಕೆಪಿಸಿಸಿ ಅಧ್ಯಕ್ಷರು ಚುನಾವಣೆಯ ನೇತೃತ್ವ ವಹಿಸುವುದು ಸಂಪ್ರದಾಯ. ಆದರೆ ದಲಿತ ಎಂಬ ಕಾರಣಕ್ಕೆ ಪರಮೇಶ್ವರ ಅವರನ್ನು ಮೂಲೆಗುಂಪು ಮಾಡಲಾಗಿದೆ. ಮುಂದಿನ ಚುನಾವಣೆ ತನ್ನ ನೇತೃತ್ವದಲ್ಲಿ ನಡೆಯಲಿದೆ ಎಂದು ಸಿದ್ದರಾಮಯ್ಯ ಹೋದಲ್ಲೆಲ್ಲಾ ಹೇಳುತ್ತಿದ್ದಾರೆ. ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಲಿಲ್ಲ ಎಂದು ದೂರಿದರು.

ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಹಾಗೂ ಈಗ ಮುಖ್ಯಮಂತ್ರಿಯಾದ ಬಳಿಕವೂ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಅವರು ಯಾವುದೇ ಕೊಡುಗೆ ನೀಡಿಲ್ಲ. ಜೆಡಿಎಸ್‌ ಪಕ್ಷದವರು ಆರಂಭಿಸಿದ್ದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅದರ ಶ್ರೇಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದರು.

100 ಕೋಟಿ ಡೀಲ್‌: ‘ನನ್ನನ್ನು ಕಾಂಗ್ರೆಸ್‌ಗೆ ಸೆಳೆಯಲು ₹ 100 ಕೋಟಿ ಆಮಿಷ ಒಡ್ಡಲಾಗಿದೆ ಎಂಬ ಸುದ್ದಿ ಪಕ್ಷದ ಕಾರ್ಯಕರ್ತರ ನಡುವೆ ಹರಿದಾಡುತ್ತಿದೆ’ ಎಂದು ಜಿ.ಟಿ.ದೇವೇಗೌಡ ಹೇಳಿದರು. ‘ನನ್ನ ಖರೀದಿಗೆ ಕ್ರಯ ಫಿಕ್ಸ್‌ ಆಗಿದೆ. ಅಗ್ರಿಮೆಂಟ್‌ ಆಗಿದೆಯೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಸೇರಿಲ್ಲ- ನರಸಿಂಹಸ್ವಾಮಿ ಸ್ಪಷ್ಟನೆ: ‘ನಾನು ಕಾಂಗ್ರೆಸ್‌ ಸೇರಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಸುಳ್ಳು. ಜೆಡಿಎಸ್‌ ಬಿಟ್ಟು ಎಲ್ಲೂ ಹೋಗಲ್ಲ’ ಎಂದು ಪಕ್ಷದ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಸ್ಪಷ್ಟಪಡಿಸಿದರು. ‘ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಕೊನೆ ಉಸಿರು ಇರುವವರೆಗೂ ಜೆಡಿಎಸ್‌ನಲ್ಲೇ ಇರುತ್ತೇನೆ’ ಎಂದು ಸ್ಪಷ್ಟಪಡಿಸಿದರು. ಮೇಯರ್‌ ಎಂ.ಜೆ.ರವಿಕುಮಾರ್‌ ಮತ್ತು ಜೆಡಿಎಸ್‌ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT