ದೀಪಾವಳಿ ಸಂಭ್ರಮ ತಂದ ಜಿಎಸ್‌ಟಿ ಪರಿಷ್ಕರಣೆ

ಗುರುವಾರ , ಜೂನ್ 20, 2019
27 °C
ತೆರಿಗೆ ಸುಧಾರಣಾ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

ದೀಪಾವಳಿ ಸಂಭ್ರಮ ತಂದ ಜಿಎಸ್‌ಟಿ ಪರಿಷ್ಕರಣೆ

Published:
Updated:
ದೀಪಾವಳಿ ಸಂಭ್ರಮ ತಂದ ಜಿಎಸ್‌ಟಿ ಪರಿಷ್ಕರಣೆ

ದ್ವಾರಕಾ: ‘ದೇಶದ ಉದ್ಯಮಿಗಳು ಸರ್ಕಾರದ ಕಠಿಣ ನಿಯಮಗಳಲ್ಲಿ ಸಿಲುಕಿ ಒದ್ದಾಡುವುದು ನಮಗೆ ಬೇಕಿಲ್ಲ. ಶುಕ್ರವಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಷ್ಕರಣೆಯಿಂದಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ನಿಟ್ಟುಸಿರು ಬಿಟ್ಟಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ನೀವೆಲ್ಲರೂ ದೀಪಾವಳಿಗಾಗಿ ಭಾರಿ ಸಿದ್ಧತೆ ನಡೆಸುತ್ತಿರಬೇಕಲ್ಲವೇ. ಗುಜರಾತ್‌ನಲ್ಲಂತೂ ಅದರಲ್ಲೂ ಉದ್ಯಮಿಗಳು ದೀಪಾವಳಿಯನ್ನು ಭಾರಿ ಜೋರಾಗಿ ಆಚರಿಸುತ್ತಾರೆ. ದೀಪಾವಳಿ 15 ದಿನ ಮೊದಲೇ ಬಂದಿದೆಯೆಂಬಂತೆ ದೇಶದಾದ್ಯಂತ ಜನರು ಪರಿಷ್ಕೃತ ಜಿಎಸ್‌ಟಿಯನ್ನು ಸಂಭ್ರಮಿಸುತ್ತಿದ್ದಾರೆ’ ಎಂದಿದ್ದಾರೆ.

‘3 ತಿಂಗಳು ಜಿಎಸ್‌ಟಿಯನ್ನು ಅಧ್ಯಯನ ಮಾಡಿ ನ್ಯೂನತೆಗಳನ್ನು ಸರಿಪಡಿಸುತ್ತೇವೆ. ಅಗತ್ಯ ಬದಲಾವಣೆ ತರುತ್ತೇವೆ ಎಂದು ಮೊದಲೇ ಹೇಳಿದ್ದೆವು. ಅಗತ್ಯವಿದ್ದ ಬದಲಾವಣೆ ತರುವಂತೆ ಹಣಕಾಸು ಸಚಿವರು ಜಿಎಸ್‌ಟಿ ಸಮಿತಿಯಲ್ಲಿನ ಎಲ್ಲರ ಮನವೊಲಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಟೀಕೆ: ‘ದೇಶದಲ್ಲಿ ಅತ್ಯಂತ ಹೆಚ್ಚು ಉದ್ಯೋಗಾವಕಾಶ ಇರುವ ಕೃಷಿ ಮತ್ತು ಜವಳಿ ಕ್ಷೇತ್ರಗಳಿಗೆ ಜಿಎಸ್‌ಟಿಯಿಂದಾಗಿ ಯಾವುದೇ ಲಾಭ ಆಗಿಲ್ಲ. ನೇರ, ಪಾರದರ್ಶಕ ಮತ್ತು ಸರಳ ಜಿಎಸ್‌ಟಿಯನ್ನು ಯುಪಿಎ ಸರ್ಕಾರ ರೂಪಿಸಿತ್ತು. ಆದರೆ ಈ ಸರ್ಕಾರ ಜಿಎಸ್‌ಟಿಯನ್ನು ಗೊಂದಲಮಯ ಮತ್ತು ಸಂಕೀರ್ಣಗೊಳಿಸಿ ದೇಶದ ಆರ್ಥಿಕತೆಯನ್ನು ಕುಸಿತದ ಹಾದಿ ಹಿಡಿದಿದೆ’ ಎಂದು ಅವರು ಟೀಕಿಸಿದ್ದಾರೆ.

‘ಮೋದಿಯನ್ನು ಬೆಂಬಲಿಸಿದ್ದು ದೊಡ್ಡ ತಪ್ಪು’

‘ಆರಂಭದಲ್ಲಿ ಮೋದಿ ಅವರನ್ನು ಬೆಂಬಲಿಸಿದ್ದು ನನ್ನ ದೊಡ್ಡ ತಪ್ಪು’ ಎಂದು ಬಿಜೆಪಿಯ ಹಿರಿಯ ನಾಯಕ ಅರುಣ್ ಶೌರಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಜತೆಗೆ ಪ್ರಧಾನಿ ಮೋದಿ ಅವರನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹೋಲಿಸಿ ಲೇವಡಿ ಮಾಡಿದ್ದಾರೆ.

‘ಅಮೆರಿಕದ ಅಧ್ಯಕ್ಷ ಟ್ರಂಪ್ ‘ಮಾಧ್ಯಮಗಳು ನನ್ನನ್ನು ತಪ್ಪಾಗಿ ಬಿಂಬಿಸುತ್ತಿವೆ’ ಎಂದು ಆರೋಪಿಸುತ್ತಿರುತ್ತಾರೆ. ನೋಟು ರದ್ದತಿ ವೇಳೆ ‘ನನಗೆ ಜೀವ ಬೆದರಿಕೆ ಇದೆ. ನನ್ನನ್ನು ಕೊಂದರೂ ದಲಿತರ ಸೇವೆ ಮಾಡುವುದನ್ನು ನಾನು ಬಿಡುವುದಿಲ್ಲ’ ಎಂದು ನಮ್ಮ ಪ್ರಧಾನಿ ಹೇಳುತ್ತಿದ್ದರು. ಈ ಇಬ್ಬರು ನಾಯಕರೂ ತಾವು ಮಾಧ್ಯಮಗಳ ಸಂಚಿನ ಸಂತ್ರಸ್ತರು ಎಂದು ಹೇಳಿಕೊಳ್ಳುತ್ತಾರೆ. ಆ ಮೂಲಕ ಮತ್ತೇನೋ ಲಾಭ ಮಾಡಿಕೊಳ್ಳುತ್ತಾರೆ’ ಎಂದು ಶೌರಿ ಆರೋಪಿಸಿದ್ದಾರೆ.

* ಜನ ಲಕ್ಷ್ಮೀಪೂಜೆ ಮುಗಿಸುವಷ್ಟರಲ್ಲೇ ದೀಪಾವಳಿ ಬರುತ್ತಿದೆ. ಆದರೆ ಸರ್ಕಾರ ತೆರಿಗೆ ಮೇಲೆ ತೆರಿಗೆ ಏರಿ ಲೂಟಿ ಮಾಡಿರುವುದರಿಂದ ಜನರ ಬಳಿ ಈಗ ‘ಲಕ್ಷ್ಮಿ’ಯೇ ಇಲ್ಲ

- ಉದ್ಧವ್ ಠಾಕ್ರೆ, ಶಿವಸೇನಾ ಮುಖ್ಯಸ್ಥ

* ವೃತ್ತಿಪರವಲ್ಲದ, ದೂರದೃಷ್ಟಿಯಿಲ್ಲದ ಮತ್ತು ಸೊಕ್ಕಿನ ನಶೆಯೇರಿದ ಸರ್ಕಾರದಿಂದಾಗಿ ಜಿಎಸ್‌ಟಿ ‘ಗ್ರಾಸ್ಲಿ ಸ್ಕೇರೀ ಟ್ಯಾಕ್ಸ್’  (ಸಂಪೂರ್ಣ ಭಯ ಹುಟ್ಟಿಸುವ ತೆರಿಗೆ) ಆಗಿದೆ

-ರಣದೀಪ್‌ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry