ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಪ್ರಕರಣ; ಇಬ್ಬರ ಬರ್ಬರ ಹತ್ಯೆ

Last Updated 7 ಅಕ್ಟೋಬರ್ 2017, 19:32 IST
ಅಕ್ಷರ ಗಾತ್ರ

ಬೆಂಗಳೂರು: ‌ಬಾಣಸವಾಡಿ ಹಾಗೂ ಕಾಟನ್‌ಪೇಟೆ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಹೋಟೆಲ್ ನೌಕರ ಹಾಗೂ ಜೇಬುಗಳವು ಪ್ರಕರಣದ ಆರೋಪಿ ಕೊಲೆಯಾಗಿದ್ದಾರೆ.

ಬಾಣಸವಾಡಿ ಸಮೀಪದ ರಾಮಯ್ಯ ಲೇಔಟ್‌ನಲ್ಲಿ ದುಷ್ಕರ್ಮಿಗಳು ಸಂಜಯ್ ತಮಂಗ್ (39) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.

ಅಸ್ಸಾಂನ ತಮಂಗ್, ಆರು ತಿಂಗಳ ಹಿಂದೆ ನಗರಕ್ಕೆ ಬಂದಿದ್ದರು. ರಾಮಯ್ಯಲೇಔಟ್‌ನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಹೋಟೆಲ್‌ನ 11 ನೌಕರರ ಜತೆ  ಕಮ್ಮನಹಳ್ಳಿ ಮುಖ್ಯರಸ್ತೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ತಮಂಗ್ ಅವರು ಕೆಲಸ ಮುಗಿಸಿಕೊಂಡು ರಾತ್ರಿ 11.30ರ ಸುಮಾರಿಗೆ ಮನೆಗೆ ನಡೆದು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ಯುವಕರು, ಎದೆ ಹಾಗೂ ಹೊಟ್ಟೆಗೆ ನಾಲ್ಕೈದು ಬಾರಿ ಚಾಕುವಿನಿಂದ ಇರಿದಿದ್ದಾರೆ. ಅಲ್ಲದೆ, ಕಬ್ಬಿಣದ ಸಲಾಕೆಯಿಂದ ತಲೆಗೆ ಹೊರೆದು ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡುರಸ್ತೆಯಲ್ಲಿ ಬಿದ್ದಿದ್ದ ಮೃತದೇಹ ಕಂಡು ಸ್ಥಳೀಯರೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದರು. ಸುತ್ತಮುತ್ತಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದೇವೆ. ಹೋಟೆಲ್‌ ನೌಕರರನ್ನೂ ವಿಚಾರಣೆಗೆ ಒಳಪಡಿಸಿದ್ದೇವೆ ಎಂದು ಬಾಣಸವಾಡಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರತೀಕಾರಕ್ಕೆ ಹತ್ಯೆ: ಆರು ತಿಂಗಳ ಹಿಂದೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರತೀಕಾರವಾಗಿ ಯುವಕರಿಬ್ಬರು ಬಾಲ್ಯ ಸ್ನೇಹಿತ ಅಜಿತ್ (19) ಎಂಬಾತನನ್ನು ಹತ್ಯೆಗೈದಿದ್ದಾರೆ.

ಅಂಜನಪ್ಪಗಾರ್ಡನ್‌ ನಿವಾಸಿಯಾದ ಅಜಿತ್, ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ಮನೆ ಹತ್ತಿರ ನಿಂತಿದ್ದ. ಈ ವೇಳೆ ಬೈಕ್‌ನಲ್ಲಿ ಅಲ್ಲಿಗೆ ಬಂದ ಅರವಿಂದ ಹಾಗೂ ಗುಂಡ ಎಂಬುವರು, ಕಾಲಿಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತನಾಳ ತುಂಡಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ಆತ ರಾತ್ರಿ 7.30ರ ಸುಮಾರಿಗೆ ಕೊನೆಯುಸಿರೆಳೆದ ಎಂದು ಕಾಟನ್‌ಪೇಟೆ ಪೊಲೀಸರು ತಿಳಿಸಿದ್ದಾರೆ.

‘ಅಜಿತ್ ಹಾಗೂ ಆರೋಪಿಗಳು ಬಾಲ್ಯ ಸ್ನೇಹಿತರಾಗಿದ್ದು, ಬಸ್‌ಗಳಲ್ಲಿ ಪ್ರಯಾಣಿಕರ ಪರ್ಸ್‌ಗಳನ್ನು ಕಳವು ಮಾಡುತ್ತಿದ್ದರು. ಕಾಟನ್‌ಪೇಟೆ ಪೊಲೀಸರು ಇವರನ್ನು ಬಂಧಿಸಿ ಜೈಲಿಗೂ ಕಳುಹಿಸಿದ್ದರು’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಹಿಂದೆ ಹಣ ಹಂಚಿಕೊಳ್ಳುವ ವಿಚಾರಕ್ಕೆ ಜಗಳವಾಗಿ ಅಜಿತ್ ಸಹಚರರ ಮೇಲೆ ಹಲ್ಲೆ ನಡೆಸಿದ್ದ. ಆ ನಂತರ ಅವರ ಗೆಳೆತನದಲ್ಲಿ ಬಿರುಕು ಉಂಟಾಗಿತ್ತು. ಆರೋಪಿಗಳು ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಸುಳಿವು ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT