ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೆ ಸಿದ್ಧವಾದ ಐಟಿಐ ಕಾಲೇಜು

Last Updated 8 ಅಕ್ಟೋಬರ್ 2017, 8:35 IST
ಅಕ್ಷರ ಗಾತ್ರ

ಚಿಂಚೋಳಿ: ಇಲ್ಲಿನ ಪೋಲಕಪಳ್ಳಿ ಬಳಿಯ ತಾಲ್ಲೂಕು ಕ್ರೀಡಾಂಗಣದ ಪಕ್ಕದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ)ಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ಉದ್ಘಾಟನೆಯ ಮುಹೂರ್ತಕ್ಕಾಗಿ ಕಾಯುತ್ತಿದೆ.

1998ರಲ್ಲಿ ಅಂದಿನ ಶಾಸಕರಾಗಿದ್ದ ವೈಜನಾಥ ಪಾಟೀಲ ಅವರು ಮಂಜೂರು ಮಾಡಿಸಿದ್ದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಕೈಗಾರಿಕಾ ವಸಾಹತುವಿನ 2 ಶೆಡ್‌ಗಳಲ್ಲಿ 2 ದಶಕಗಳಿಂದ ಕೇಂದ್ರ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇಲ್ಲಿನ ಪ್ರಶಿಕ್ಷಣಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ಕನಿಷ್ಠ ಮೂಲ ಸೌಕರ್ಯಗಳ ಕೊರತೆಯ ನಡುವೆ ಕೆಲಸ ನಿರ್ವಹಿಸುವಂತಾಗಿತ್ತು.

‘ಜೋಡಣೆ (ಫಿಟ್ಟರ್‌) ಹಾಗೂ ವಿದ್ಯುತ್‌ ಕರ್ಮಿ (ಎಲೆಕ್ಟ್ರಿಷಿಯನ್‌) ವಿಭಾಗದಲ್ಲಿ 42 ವಿದ್ಯಾರ್ಥಿಗಳು ಓದುತ್ತಿದ್ದು, ಇಲ್ಲಿವರೆಗೆ 18 ಬ್ಯಾಚ್‌ ಗಳ ಮೂಲಕ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆ ದುಕೊಂಡಿದ್ದಾರೆ’ ಎಂದು ಪ್ರಾಂಶುಪಾಲ ಗಣಪತಿ ತಿಳಿಸಿದರು.

‘ಕಟ್ಟಡದ ಛತ್ತಿನ ಮೇಲೆ ಕೆಲವು ಕಡೆ ಮಳೆ ನೀರು ನಿಲ್ಲುತ್ತಿದ್ದು ಅವುಗಳ ಛಾಯಾಚಿತ್ರ ತೆಗೆಸಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದೇನೆ. ಸೆಫ್ಟಿಕ್‌ ಟ್ಯಾಂಕ್‌, ವಿದ್ಯುತ್‌ ಸಂಪರ್ಕ ಮತ್ತು ಪರಿವರ್ತಕ ಅಳವಡಿಕೆ ಬಾಕಿಯಿದ್ದು, ಪೂರ್ಣಗೊಳಿಸಿದ ಮೇಲೆಯೇ  ಕಟ್ಟಡವನ್ನು ಸ್ವಾಧೀನಕ್ಕೆ ಪಡೆಯಲಾಗುವುದು’ ಎಂದು ಹೇಳಿದರು.

‘ನೂತನ ಕಟ್ಟಡದಲ್ಲಿ ಒಂದು ವರ್ಕ ಶಾಪ್‌ (ಪ್ರಾಯೋಗಿಕ ಕಾರ್ಯಕ್ಕಾಗಿ) ಕೋಣೆ ಹಾಗೂ ಇನ್ನೊಂದು ಕಟ್ಟಡದಲ್ಲಿ ದಾಸ್ತಾನು ಕೊಠಡಿ, ಪ್ರಾಂಶುಪಾಲರ ಕೊಠಡಿ, ಕಚೇರಿ ಕೊಠಡಿ, ಎರಡು ತರಗತಿ ಕೊಠಡಿ, ಕಂಪ್ಯೂಟರ್‌ ಕೊಠಡಿ, ಶೌಚಾಲಯ ನಿರ್ಮಿಸಲಾಗಿದೆ. ಆದರೆ ಮಂಜೂರಾದ ಅನುದಾನದಲ್ಲಿ ತಯಾರಿಸಿದ ಅಂದಾಜು ಪಟ್ಟಿಯಲ್ಲಿ ಕಾಲೇಜಿಗೆ ಆವರಣ ಗೋಡೆ ಸೇರಿಲ್ಲ. ಬಾಕಿ ಉಳಿದ ಚಿಕ್ಕಪುಟ್ಟ ಕೆಲಸ ಮಾಡಿಸಿಕೊಟ್ಟರೆ ಉದ್ಘಾಟನೆಗೆ ಶಾಸಕರ ಹಾಗೂ ಸಂಬಂಧಿಸಿದವರ ಬಳಿ ಮುಹೂರ್ತ ನಿಗದಿ ಪಡಿಸಲಾಗುವುದು’ ಎಂದರು.

‘ಕೆಲವು ಚಿಕ್ಕಪುಟ್ಟ ಕೆಲಸ ಬಾಕಿಯಿದ್ದು ಶೀಘ್ರವೇ ಪೂರ್ಣಗೊಳಿಸಿ ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗುವುದು’ ಎಂದು ರೈಟ್ಸ್‌ನ ತಾಂತ್ರಿಕ ಸಹಾಯಕ ಮನೋಜ ತಿಳಿಸಿದರು. ‘ಈಗ ಈ ಸಮಸ್ಯೆಗೆ ಮುಕ್ತಿ ದೊರಕಿದ್ದು ಪ್ರಶಿಕ್ಷಣಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.

ಹಳೆಯ ಕಟ್ಡದ ಸುತ್ತಲೂ ನೈರ್ಮಲ್ಯ, ಭದ್ರತೆ ಸೇರಿದಂತೆ ಅನನುಕೂಲಗಳೇ ಹೆಚ್ಚಾಗಿದ್ದವು. ಕಾರ್ಮಿಕ ಸಚಿವರಾಗಿದ್ದ ಪಿ.ಟಿ ಪರಮೇಶ್ವರ ನಾಯಕ್‌ ಅವರಿಗೆ ಚಿಂಚೋಳಿ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಸಮಸ್ಯೆ ಮನದಟ್ಟು ಮಾಡಿದ ಮೇಲೆ 2015ರಲ್ಲಿ ನಬಾರ್ಡ್‌ ಆರ್‌ಐಡಿಎಫ್‌–19 ಅಡಿಯಲ್ಲಿ ₹1.24 ಕೋಟಿ ವೆಚ್ಚದಲ್ಲಿ 2 ಕಟ್ಟಡ ನಿರ್ಮಿಸಲಾಗಿದೆ’ ಎಂದು ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್‌ ತಿಳಿಸಿದರು.

‘ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸ ಬೇಕಿತ್ತು. ಆದರೆ ಆಗ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ಕಾಮಗಾರಿ ವಿಳಂಬವಾಗುವುದು ಬೇಡ ಎಂದು ತಿಳಿಸಿ ರೇಲ್‌ ಇಂಡಿಯಾ ಟೆಕ್ನಿಕಲ್‌ ಆ್ಯಂಡ್‌ ಸರ್ವಿಸ್‌ (ರೈಟ್ಸ್‌) ಅಧಿಕಾರಿಗಳಿಗೆ ಕಾಮಗಾರಿ ಕೈಗೊಳ್ಳಲು ಸೂಚಿಸಿದ್ದೇನೆ. ಇದರಿಂದಾಗಿಯೇ ಈಗ ಕಟ್ಟಡ ಪ್ರಶಿಕ್ಷಣಾರ್ಥಿಗಳಿಗೆ ದೊರೆಯುವಂತಾಗಿದೆ’ ಎಂದು ಶಾಸಕರು ಹೇಳಿದರು.

ತಾಲ್ಲೂಕು ಕ್ರೀಡಾಂಗಣ (ಅಪೂರ್ಣ), ಆದರ್ಶ ವಿದ್ಯಾಲಯ (350 ವಿದ್ಯಾರ್ಥಿಗಳು) ಕಟ್ಟಡ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ನಡೆಯುತ್ತಿರುವ ಬಾಲಕಿಯರ ವಸತಿ ನಿಲಯ ಕಟ್ಟಡ ಐಟಿಐ ಕಾಲೇಜು ಅಕ್ಕಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಐಟಿಐ ಕಾಲೇಜು ಬೇಗ ಉದ್ಘಾಟಿಸಿ ಪ್ರಶಿಕ್ಷಣಾರ್ಥಿಗಳಿಗೆ ನೆರವಾಗಬೇಕು ಎಂದು ಪಾಲಕರು ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT