ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಕಣಜದಲ್ಲಿ ಕುಸಿದ ಹಿಂಗಾರು ಬಿತ್ತನೆ

Last Updated 8 ಅಕ್ಟೋಬರ್ 2017, 10:17 IST
ಅಕ್ಷರ ಗಾತ್ರ

ಯಾದಗಿರಿ: ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಂಗಾಮು ಬಿತ್ತನೆ ಕುಸಿದಿದೆ. ಮುಂಗಾರು ಆರಂಭಕ್ಕೆ ಸಕಾಲದಲ್ಲಿ ಭೂಮಿ ಹದಗೊಳ್ಳುವಂತೆ ಸುರಿದ ಮಳೆ, ನಂತರ ಕಣ್ಮರೆಗೊಂಡಿತು. ಜಡಿಮಳೆಯಲ್ಲಿ ಉಸಿರು ಬಿಗಿ ಹಿಡಿದು ಬೆಳೆ ಹೆಸರು ಪೈರು ಕಟಾವು ಸಂದರ್ಭದಲ್ಲಿ ನಿರಂತರ ಸುರಿದಿದ್ದರಿಂದ ಜಿಲ್ಲೆಯಲ್ಲಿ ಬೆಳೆಹಾನಿ ಸೃಷ್ಟಿಗೊಂಡಿತು. ಮುಂಗಾರು ಕೈಕೊಟ್ಟಿದ್ದರಿಂದ ಹಿಂಗಾರು ಹಂಗಾಮನ್ನೇ ನೆಚ್ಚಿಕೊಂಡಿದ್ದ ರೈತರಿಗೆ ನಿರಂತರ ಮಳೆ ನಿರಾಶೆ ಉಂಟು ಮಾಡಿದೆ.

ಶಹಾಪುರ ತಾಲ್ಲೂಕಿನಲ್ಲಿ ಒಟ್ಟು 57,075 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ 500 ಹೆಕ್ಟೇರ್ (ಶೇ 0.88ರಷ್ಟು), ಸುರಪುರ ತಾಲ್ಲೂಕಿನಲ್ಲಿ ಒಟ್ಟು ಬಿತ್ತನೆಯ ಗುರಿ 60,700 (ಶೇ 0.58) ಹೆಕ್ಟೇರ್‌ ನಲ್ಲಿ ಕೇವಲ 350 ಹೆಕ್ಟೇರ್ ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ ಒಟ್ಟು 58,800 ಹೆಕ್ಟೇರ್ ಪ್ರದೇಶದಲ್ಲಿ ಕೇವಲ 1,150 (ಶೇ1.96) ಹೆಕ್ಟೇರ್ ನಷ್ಟು ಬಿತ್ತನೆಯಾಗಿದೆ. ಇದರಿಂದ ಕೃಷಿ ಉತ್ಪನ್ನ ಕುಸಿಯುವ ಭೀತಿ ಕಾಡುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2,69, 210 ಹೆಕ್ಟೇರ್ ಪ್ರದೇಶದಲ್ಲಿ ಒಟ್ಟು 2,11,418 ಹೆಕ್ಟೇರ್ ಬಿತ್ತನೆ ನಡೆಸಿದ್ದು, ಶೇ 78.53ರಷ್ಟು ಬಿತ್ತನೆ ಗುರಿ ಸಾಧಿಸಲಾಗಿತ್ತು. ಆದರೆ, ಮಳೆ ಅನಿಶ್ಚಿತಗೊಂಡ ಕಾರಣ ಅರ್ಧ ಬೆಳೆ ಬಾಡಿದರೆ; ಅಂತಿಮದಲ್ಲಿ ಕೈಗೆ ಬಂದ ಅಷ್ಟಿಷ್ಟು ಬೆಳೆ ಕೂಡ ನಿರಂತರ ಮಳೆಗೆ ಈಡಾಯಿತು.

ಹೀಗೆ ಮುಂಗಾರು ಸಂಪೂರ್ಣ ರೈತರನ್ನು ಬರಿಗೈ ಮಾಡಿತು. ರೈತರು ಮುಂಗಾರು ನಷ್ಟವನ್ನು ಹಿಂಗಾರು ಹಂಗಾಮಿನಲ್ಲಿ ಭರಿಸಿಕೊಳ್ಳುವ ತವಕದಲ್ಲಿದ್ದರು. ಆದರೆ, ನಿರಂತರ ಮಳೆ ರೈತರ ಲೆಕ್ಕಾಚಾರ ಬುಡಮೇಲು ಮಾಡಿದೆ ಎನ್ನುತ್ತಾರೆ ಸುರಪುರ ತಾಲ್ಲೂಕಿನ ಬಿಜಾಸಪುರದ ಶಿವಪ್ಪ ನಾಯಕ, ಶರಣಪ್ಪ ದೇಸಾಯಿ, ಅಯ್ಯಪ್ಪಗೌಡ, ಶಿವರಾಯ ಹೊಸಮನಿ.

ಜಿಲ್ಲೆಯಲ್ಲಿ ಇಲ್ಲಿವರೆಗೂ ವಾಡಿಕೆ 700 ಮಿಲಿ ಮೀಟರ್ ಮಳೆಯಾಗಬೇಕಿದೆ. ಆದರೆ, ಕೃಷಿ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅಕ್ಟೋಬರ್ 6ರವರೆಗೆ ಒಟ್ಟು 516 ಮಿಲಿ ಮೀಟರ್ ಮಳೆ ಬಿದ್ದಿದೆ. ಅಂದರೆ ಶೇ 26ರಷ್ಟು ಮಳೆ ಕೊರತೆ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಆದರೆ, ಸಕಾಲದಲ್ಲಿ ಮಳೆಯಾಗದೇ ಅಕಾಲಿಕವಾಗಿ ನಿರಂತರ ಮಳೆ ಸುರಿದಿರುವುದರಿಂದ ಕೃಷಿ ಚುಟವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ ಎಂಬುದಾಗಿ ಕೃಷಿ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT