ಗುರುವಾರ , ಸೆಪ್ಟೆಂಬರ್ 19, 2019
26 °C
ಚೀನಾ ಓಪನ್‌ ಟೆನಿಸ್‌; ಸಿಮೊನಾ ಹಲೆಪ್‌ಗೆ ಸೋಲು

ಕರೊಲಿನಾ ಗ್ರೇಸಿಯಾಗೆ ಪ್ರಶಸ್ತಿ

Published:
Updated:
ಕರೊಲಿನಾ ಗ್ರೇಸಿಯಾಗೆ ಪ್ರಶಸ್ತಿ

ಬೀಜಿಂಗ್‌: ಶ್ರೇಯಾಂಕ ರಹಿತ ಆಟಗಾರ್ತಿ ಕರೊಲಿನಾ ಗ್ರೇಸಿಯಾ ಚೀನಾ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಡಬ್ಲ್ಯುಟಿಎ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸಿಮೊನಾ ಹಲೆಪ್‌ಗೆ ಆಘಾತ ನೀಡುವ ಮೂಲಕ ಪ್ರಶಸ್ತಿ ಎತ್ತಿಹಿಡಿದಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್‌ ಪಂದ್ಯದಲ್ಲಿ ಕರೊಲಿನಾ 6–4, 7–6ರಲ್ಲಿ ಹಲೆಪ್‌ಗೆ ಸೋಲುಣಿಸಿದರು. ವೃತ್ತಿಜೀವನದಲ್ಲಿ ಫ್ರೆಂಚ್‌ ಆಟಗಾರ್ತಿಗೆ ಸಿಕ್ಕ ಪ್ರಮುಖ ಪ್ರಶಸ್ತಿ ಇದಾಗಿದೆ.

ಗ್ರೇಸಿಯಾ ಸತತವಾಗಿ 11 ಪಂದ್ಯಗಳನ್ನು ಗೆದ್ದಿದ್ದಾರೆ. ಹೋದ ವಾರ ವುಹಾನ್ ಓಪನ್‌ನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು. ಪ್ರಸಕ್ತ ವಿಶ್ವ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನದಲ್ಲಿ ಇದ್ದಾರೆ. ಸೋಮವಾರದ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅವರು ಒಂಬತ್ತನೇ ಸ್ಥಾನಕ್ಕೆ ಏರಲಿದ್ದಾರೆ.

ಮೊದಲ ಬಾರಿಗೆ ಅಗ್ರ 10ರೊಳಗಿನ ಸ್ಥಾನದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಮೊದಲ ಗೇಮ್‌ನಲ್ಲಿ ಹಲೆಪ್‌ ಎದುರಾಳಿಯ ಸರ್ವ್‌ ಮುರಿದು ಪಂದ್ಯ ಗೆಲ್ಲುವ ಸೂಚನೆ ನೀಡಿದರು. ಆದರೆ ಬಳಿಕ ಆಟದ ಚಿತ್ರಣ ಸಂಪೂರ್ಣ ಬದಲಾಯಿತು. 23 ವರ್ಷದ ಗ್ರೇಸಿಯಾ ಅಮೋಘವಾಗಿ ತಿರುಗೇಟು ನೀಡಿದರು. ಎದುರಾಳಿಯ ಎರಡು ಸರ್ವ್‌ಗಳನ್ನು ಮುರಿದು ಅವರು ಪ್ರತ್ಯುತ್ತರ ನೀಡಿದರು.

ಎರಡನೇ ಸೆಟ್‌ನಲ್ಲಿ 3–3ರಲ್ಲಿ ಇಬ್ಬರು ಆಟಗಾರ್ತಿಯರು ಸಮಬಲ ಹೊಂದಿದ್ದರು. ಆದರೆ ಗ್ರೇಸಿಯಾ ಸತತ ಒಂಬತ್ತು ಬ್ರೇಕ್‌ಪಾಯಿಂಟ್ಸ್‌ಗಳನ್ನು ಪಡೆಯುವ ಏಳನೇ ಗೇಮ್‌ ಗೆದ್ದುಕೊಂಡರು. 4–3ರ ಹಿನ್ನಡೆಯ ಬಳಿಕ ಹಲೆಪ್‌ ಪಂದ್ಯವನ್ನು ಟೈಬ್ರೇಕರ್‌ಗೆ ಕೊಂಡೊಯ್ದರು.

ವುಹಾನ್ ಹಾಗೂ ಬೀಜಿಂಗ್‌ನಲ್ಲಿ ಸತತವಾಗಿ ಪ್ರಶಸ್ತಿ ಗೆದ್ದ ಮೊದಲ ಆಟಗಾರ್ತಿ ಎಂಬ ಶ್ರೇಯ ಗ್ರೇಸಿಯಾ ಅವರಿಗೆ ಸಿಕ್ಕಿದೆ. ಹಲೆಪ್‌ ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿ ಬಳಿಕ ಯಾವುದೇ ಪ್ರಶಸ್ತಿ ಗೆದ್ದುಕೊಂಡಿಲ್ಲ.

ನಡಾಲ್‌ಗೆ ಪ್ರಶಸ್ತಿ: ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರಫೆಲ್ ನಡಾಲ್‌ ಇಲ್ಲಿ ಆರನೇ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್‌ನಲ್ಲಿ ಅವರು 6–2, 6–1ರಲ್ಲಿ ನೇರ ಸೆಟ್‌ಗಳಿಂದ ನಿಕ್‌ ಕಿರ್ಗಿಸ್ ಅವರನ್ನು ಮಣಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ 31 ವರ್ಷದ ಸ್ಪೇನ್‌ ಆಟಗಾರ ನಡಾಲ್‌ ಸುಲಭದಲ್ಲಿ ಪಂದ್ಯ ಗೆದ್ದುಕೊಂಡರು. ಆಸ್ಟ್ರೇಲಿಯಾದ ಕಿರ್ಗಿಸ್‌ ಪ್ರಯಾಸದಿಂದ ಒಟ್ಟು ಮೂರು ಗೇಮ್‌ಗಳನ್ನು  ಮಾತ್ರ ಗೆದ್ದರು. 92 ನಿಮಿಷದ ಪಂದ್ಯ ಇದಾಗಿತ್ತು.

Post Comments (+)