ಭಾರಿ ಮಳೆ: ಕೆರೆಯಂತಾದ ಕಾಲೇಜು ಆವರಣ

ಸೋಮವಾರ, ಜೂನ್ 24, 2019
24 °C

ಭಾರಿ ಮಳೆ: ಕೆರೆಯಂತಾದ ಕಾಲೇಜು ಆವರಣ

Published:
Updated:

ಸೇಡಂ: ಪಟ್ಟಣದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಆವರಣ ಮಳೆನೀರಿನಿಂದ ಜಲಾವೃತ್ತಗೊಂಡಿದ್ದು, ವಿದ್ಯಾರ್ಥಿಗಳ ನಿತ್ಯ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಸಾಮಾನ್ಯ ಮಳೆ ಸುರಿದರೆ ಸಂಪೂರ್ಣ ಕೆಸರು ಗದ್ದೆಯಂತಾಗುವ ಸಂಯುಕ್ತ ಪದವಿಪೂರ್ವ ಕಾಲೇಜು ಆವರಣ, ಭಾನುವಾರ ಸುರಿದ ಭಾರಿ ಮಳೆಯಿಂದ ಸಂಪೂರ್ಣ ಕೆರೆಯಾಗಿ ಮಾರ್ಪಟ್ಟಿದೆ.

ನಿಂತ ನೀರಲ್ಲಿಯೇ ವಿದ್ಯಾರ್ಥಿಗಳು ಸೋಮವಾರ ಕಾಲೇಜಿಗೆ ತೆರಳಿದರು. ಕೆಲವು ವಿದ್ಯಾರ್ಥಿನಿಯರು ಕಾಲು ಜಾರಿ, ಬಿದ್ದು ಪುಸ್ತಕ ಒದ್ದೆ ಮಾಡಿಕೊಂಡು ಮನೆಗೆ ತೆರಳಿದ ಪ್ರಸಂಗ ನಡೆದಿದೆ. ಮೈದಾನದಲ್ಲಿ ಬೈಕ್ ತಂದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಬೈಕ್ ಸ್ಕಿಡ್ ಆಗಿ ಪ್ರಾಣದಿಂದ ಪಾರಾಗಿದ್ದಾರೆ. ಕಾಲೇಜು ಹಾಗೂ ಪ್ರೌಢಶಾಲೆಯ ವಿವಿಧ ಕೋಣೆಗಳಲ್ಲಿ ನೀರು ನಿಂತಿವೆ.

ಇದರಿಂದ ವಿದ್ಯಾರ್ಥಿಗಳ ಪಾಠಕ್ಕೆ ಸೋಮವಾರ ಸಮಸ್ಯೆಯಾಯಿತು. ಕಟ್ಟಡದ ಗೋಡೆಗಳಲ್ಲಿ ನೀರು ಹರಿದ ಪರಿಣಾಮ ಗೋಡೆಗಳು ತೇವಾಂಶಗೊಂಡಿವೆ. ಕೋಣೆಯಲ್ಲಿ ಪಾಠ ಕೇಳುತ್ತಿದ್ದರೂ ವಿದ್ಯಾರ್ಥಿಗಳಿಗೆ ಕಟ್ಟಡದಲ್ಲಿ ಹರಿದ ನೀರಿನ ತೇವಾಂಶದ ವಾಸನೆಯೇ ಕಿರಿಕಿರಿಯಾಗಿ ಪರಿಣಮಿಸಿತು.

ತಾಲ್ಲೂಕಿನ ವಿವಿಧೆಡೆಯಿಂದ ಕಾಲೇಜಿಗೆ ಕಲಾ-537, ವಾಣಿಜ್ಯ-190 ಮತ್ತು ವಿಜ್ಞಾನ-169 ವಿಭಾಗ ಸೇರಿದಂತೆ ಒಟ್ಟು 896 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಾರೆ. ಅಲ್ಲದೆ, ಸರ್ಕಾರಿ ಪ್ರೌಢಶಾಲೆಯೂ ಆವರಣದಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಆಗಮಿಸುತ್ತಾರೆ. ಕಾಲೇಜಿನ ಆವರಣ ನೋಡಿ ಪಾಲಕರು, ಉಪನ್ಯಾಸಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಒಳಗಡೆ ತೆರಳಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

‘ಕಾಲೇಜು ಆವರಣ ದುರಸ್ತಿಗೊಳಿಸುವಂತೆ ಕಾಲೇಜಿನ ವಿದ್ಯಾರ್ಥಿಗಳು ಅದೆಷ್ಟೋ ಬಾರಿ ಪ್ರತಿಭಟನೆ ಮಾಡಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕಾಲೇಜು ಆಡಳಿತ ಮಂಡಳಿಯವರು ಸಹ ಸ್ಥಳೀಯ ಪುರಸಭೆ ಹಾಗೂ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯ ಪ್ರತಿಫಲ ಸಿಕ್ಕಿಲ್ಲ. ಕಿಂಚಿತ್ತೂ ಸಹ ಅಭಿವೃದ್ಧಿ ಕಾರ್ಯ ನಡೆದಿಲ್ಲ’ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಾರೆ.

‘ಕೆಲ ತಿಂಗಳ ಹಿಂದೇಯೇ ಕಾಲೇಜು ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಆದರೆ, ಇಲ್ಲಿಯವರೆಗೂ ಸಹ ಕಾಂಪೌಂಡ್‌ಗೆ ಬಾಗಿಲು ಅಳವಡಿಸಿಲ್ಲ. ಅಲ್ಲದೆ, ಕೆಲವು ಕಡೆಗಳಲ್ಲಿ ಅಂತರ ಬಿಟ್ಟಿರುವುದರಿಂದ ಕಿಡಿಗೇಡಿಗಳು ಹಾಗೂ ದನಕರುಗಳು ಆವರಣಕ್ಕೆ ಆಗಮಿಸಿ ಹೊಲಸು ಮಾಡುತ್ತಿವೆ. ಕಾಲೇಜು ರಜೆ ಇದ್ದಾಗಲಂತೂ ಶಾಲಾ ಮತ್ತು ಕಾಲೇಜಿನ ಕಟ್ಟಡದಲ್ಲಿ ಎಮ್ಮೆಗಳು, ದನಗಳು ಹಾಗೂ ಕುರಿಗಳು ಸಗಣಿ, ಹಿಕ್ಕಿ ಇಟ್ಟು ಹೊಲಸು ಮಾಡುವುದು ಸರ್ವೆಸಾಮಾನ್ಯವಾಗಿದೆ. ಉಪನ್ಯಾಸದ ಅವಧಿಯಲ್ಲಿಯೂ ಕೂಡ ಕುರಿಗಳು ಕೋಣೆಗೆ ನುಗ್ಗಿದ ಅನೇಕ ಘಟನೆಗಳು ನಡೆದಿವೆ’ ಎಂದು ಉಪನ್ಯಾಸಕ ಮಹ್ಮದ್ ಅಬ್ದುಲ್ಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜು ಆವರಣ ಪೂರ್ತಿ ಹಸಿರಿನಿಂದ ನಿರ್ಮಾಣವಾಗಿದೆ. ಆವರಣದಲ್ಲಿ ಹಾವು, ಚೇಳು ಕ್ರಿಮಿಕೀಟಗಳು ನಿತ್ಯ ಸಂಚರಿಸುತ್ತವೆ. ಅದರಲ್ಲಿ ಎಮ್ಮೆಗಳು ನಿತ್ಯ ಹೊರಳಾಡಿ ಗಲೀಜು ಮಾಡಿ ನಮಗೆ ತೊಂದರೆ ಮಾಡುತ್ತಿವೆ. ಆವರಣದಲ್ಲಿ ಕೆಂಪು ಮರಳು ಹಾಕಿ ದುರಸ್ತಿಗೊಳಿಸಬೇಕು’ ಎಂದು ವಿದ್ಯಾರ್ಥಿಗಳಾದ ರಮೇಶ ಹಾಗೂ ಬಸವರಾಜ ಆಗ್ರಹಿಸುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry