ಸೋಮವಾರ, ಸೆಪ್ಟೆಂಬರ್ 16, 2019
22 °C

ಬಿಡುವು ಕೊಡದ ಮಳೆ; ಹತ್ತಿ ಬೆಳೆಗಾರರು ಕಂಗಾಲು

Published:
Updated:
ಬಿಡುವು ಕೊಡದ ಮಳೆ; ಹತ್ತಿ ಬೆಳೆಗಾರರು ಕಂಗಾಲು

ಅಫಜಲಪುರ: ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ನಾಟಿ ಮಾಡಿರುವ ಹತ್ತಿ ಬೆಳೆ ಕಾಯಿ ಒಡೆದು ಹತ್ತಿ ಹೊರಹಾಕಿದ್ದು, ಅದನ್ನು ಬಿಡಿಸಲು ಮಳೆ ಅಡ್ಡಿಯಾಗಿದ್ದರಿಂದ ರೈತರು ಕಂಗಾಲಾಗಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ನಲ್ಲಿ ರೈತರು ಹತ್ತಿ ನಾಟಿ ಮಾಡಿದ್ದಾರೆ. ಹತ್ತಿ ಬೆಳೆಗೆ ತಾಮ್ರ ರೋಗ ಕಾಣಿಸಿಕೊಂಡಿದ್ದರಿಂದ ಅದು ಬೆಳವಣಿಗೆಯಾಗದೇ ಇಳುವರಿ ಕಡಿಮೆಯಾಗುತ್ತಿದೆ. ಇನ್ನೊಂದು ಕಡೆ ಒಡೆದಿರುವ ಹತ್ತಿಯನ್ನು ಬಿಡಿಸಲು ಮಳೆ ಬಿಡುತ್ತಿಲ್ಲ. ಜತೆಗೆ, ಕೃಷಿ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಹೀಗಾಗಿ, ರೈತರು ಒಡೆದಿರುವ ಹತ್ತಿ ನೋಡಿ ಮರುಗುವಂತಾಗಿದೆ.

ಈ ಕುರಿತು ಬಳೂರ್ಗಿ ರೈತರಾದ ಸುರೇಶ ನಂದಿಕೋಲ, ಈರಣ್ಣ ಸೋಮಜಾಳ ಅವರು ‘ಹತ್ತಿ ಬೆಳೆಗೆ ಈ ವರ್ಷ ರೋಗಬಾಧೆ ಹೆಚ್ಚಾಗಿದೆ. ಒಂದು ವಾರದಿಂದ ಹಗಲು ರಾತ್ರಿ ಹೊಗೆ ಮಂಜು ಬೀಳುತ್ತಿರುವುದರಿಂದ ಹತ್ತಿ ಕಾಯಿಗಳು ಮತ್ತು ಹೂಗಳು ಉದರುತ್ತಿವೆ. ಅದರಲ್ಲಿ ಹತ್ತಿ ಒಡೆದು ಅರಳೆ ಹೊರಗೆ ಬಂದು ಮಳೆಗೆ ಹಾಳಾಗುತ್ತಿದೆ.

ಮಳೆ ಬಿಡುವು ಕೊಡುತ್ತಿಲ್ಲ. ಮಳೆಗೆ ಒದ್ದೆಯಾದ ಹತ್ತಿಗೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಹತ್ತಿಗೆ ₹2 ಸಾವಿರ ಕಡಿಮೆಯಿದೆ. ಹೀಗಾಗಿ, ನಮಗೆ ಹತ್ತಿಯಿಂದ ಹಾನಿಯಾಗುತ್ತಿದೆ. ಕಳೆದ ವರ್ಷ ತೊಗರಿ ಬೆಳೆದು ಯೋಗ್ಯ ಬೆಲೆ ದೊರೆಯದೇ ಹಾಳಾಗಿ ಹೋದೆವು’ ಎಂದು ಹೇಳುತ್ತಾರೆ.

ಈ ಕುರಿತು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶರಣಗೌಡ ಅವರು ಸೋಮವಾರ ಮಾಹಿತಿ ನೀಡಿ ಹತ್ತಿ ಬೆಳೆಗೆ ಬರುವ ರೋಗಗಳನ್ನು ನಿಯಂತ್ರಣ ಮಾಡಲು ಅತನೂರ, ಅಫಜಲಪುರ, ಕರಜಗಿ ರೈತ ಸಂಪರ್ಕ ಕೇಂದ್ರದಲ್ಲಿ ಔಷಧಗಳು ಲಭ್ಯವಿರುತ್ತವೆ. ರೈತರು ಸಹಾಯಧನದಲ್ಲಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Post Comments (+)