ಬಿಸಿಲು ಬಿದ್ದರಷ್ಟೇ ಬದುಕಲಿದೆ ದ್ರಾಕ್ಷಿ

ಭಾನುವಾರ, ಜೂನ್ 16, 2019
22 °C

ಬಿಸಿಲು ಬಿದ್ದರಷ್ಟೇ ಬದುಕಲಿದೆ ದ್ರಾಕ್ಷಿ

Published:
Updated:
ಬಿಸಿಲು ಬಿದ್ದರಷ್ಟೇ ಬದುಕಲಿದೆ ದ್ರಾಕ್ಷಿ

ವಿಜಯಪುರ: ಹದಿನೈದು ದಿನಗಳಿಂದ ದಟ್ಟೈಸಿರುವ ಮೋಡ, ಆಗಾಗ್ಗೆ ಸುರಿಯುವ ಮಳೆ, ಮುಂಜಾನೆ– ಮುಸ್ಸಂಜೆ ಕವಿಯುವ ಮಂಜಿನಿಂದಾಗಿ ದ್ರಾಕ್ಷಿ ಬೆಳೆ ರೋಗಕ್ಕೆ ತುತ್ತಾಗಿದೆ. ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಚಾಟ್ನಿ (ಗಿಡದ ಕಟಾವು) ನಡೆಸಿರುವ ಬೆಳೆಗಾರರು ಇದರಿಂದ ಆತಂಕಕ್ಕೀಡಾಗಿದ್ದಾರೆ.

ಈಗಾಗಲೇ ಅರ್ಧಕ್ಕೂ ಹೆಚ್ಚು ಭಾಗದ ಬೆಳೆ ಕೊಳೆ ರೋಗ, ದವಣೆ, ಕರ್ಪ ಬಾಧೆಗೀಡಾಗಿದೆ. ರಾಜ್ಯದಲ್ಲೇ ಉತ್ಕೃಷ್ಟ ಗುಣಮಟ್ಟದ ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಯ ತಿಕೋಟಾ ಭಾಗದಲ್ಲಿ ರೋಗ ಉಲ್ಬಣಿಸಿದ್ದು ಬೆಳೆಗಾರರನ್ನು ಕಂಗಾಲು ಮಾಡಿದೆ.

ಮಸುಕಾದ ಭವಿಷ್ಯ

‘ನಮ್‌ ಟೈಂ ಸರಳಿಲ್ಲ. ನಾವ್‌ ಏನ್‌ ಮಾಡಾಕ್‌ ಹ್ವಾದ್ರೂ ಪ್ರಕೃತಿ ಸಹಕಾರ ಸಿಗವಲ್ದು. ಒಂದಲ್ಲಾ ಒಂದ್‌ ಸಮಸ್ಯೇನ ಕೊಳ್ಳಿಗೆ ಸುತ್ತಿ ಹಾಕತೈತಿ. ಏನ್‌ ಮಾಡ್ಬೇಕು ಅನ್ನೋದ ತಿಳೀದಂಗ ಆಗೇತಿ. ನಮ್‌ ಭವಿಷ್ಯಾನ ಮಸುಕಾಗೇತಿ’ ಎಂದು ಉಪ್ಪಲದಿನ್ನಿಯ ದ್ರಾಕ್ಷಿ ಬೆಳೆಗಾರ ಸೋಮನಾಥ ಬಿರಾದಾರ ಅಸಹಾಯಕತೆ ವ್ಯಕ್ತಪಡಿಸಿದರು.

‘ಒಣ ದ್ರಾಕ್ಷಿಗೂ ಸೂಕ್ತ ಧಾರಣಿ ಸಿಗೋದಿಲ್ಲ. ಕೈ ಸುಟುಗೊಳ್ಳೋದಕ್ಕಿಂತ ಹಸಿ ದ್ರಾಕ್ಷೀನ... ಮಾರಿದ್ರಾತು ಅಂತ ಈ ಸಲ ಲಗೂನ ಚಾಟ್ನಿ ಮಾಡ್ದೆ. ಹೊಸ ಚಿಗುರೂ ಬಂತು. ಒಂದೊಂದ್‌ ಗಿಡದಾಗ 65–70 ಹೂವಿನ ಗೊಂಚಲಾ ಬಂದ್ವು. ಚೊಲೊ ಬೆಳೀ ಬರಬಹುದು ಅಂತ ಖುಷೀನೂ ಆಗಿತ್ತು. ಆದ್ರ ಮೂರ್ನಾಕ್‌ ದಿನದಿಂದ ಇರೋ ಈ ವಾತಾವರಣ ಎಲ್ಲಾ ಲುಕ್ಸಾನ್ ಮಾಡಾಕತ್ತೇತಿ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಪ್ರತೀ ಗಿಡದಲ್ಲಿ 15ರಿಂದ 20 ಗೊಂಚಲು ಕೊಳೆತು ಉದುರಿದ್ದು, ಎಲೆಗಳಿಗೆ ದವಣೆ, ಕರ್ಪೆ ಬಾಧಿಸುತ್ತಿದೆ. ಅವರೀಗ, ಒಂದು ಎಕರೆ ಬೆಳೆ ಉಳಿಸಿಕೊಳ್ಳಲು ಔಷಧಿಗಾಗಿ ನಿತ್ಯ ₹ 3,000 ಖರ್ಚು ಮಾಡಬೇಕಾಗಿ ಬಂದಿದೆ. ಆದರೂ ರೋಗವು ನಿಯಂತ್ರಣಕ್ಕೆ ಬರುತ್ತಿಲ್ಲ ಎಂಬುದು ಅವರ ಅಳಲು.

ರೋಗ ನಿಯಂತ್ರಣ ಕಷ್ಟ

‘ಸಂಕ್ರಾಂತಿ ಸಮಯದಲ್ಲಿ ಹೊರ ರಾಜ್ಯಗಳಲ್ಲಿ ಹಸಿ ದ್ರಾಕ್ಷಿಗೆ ಬೇಡಿಕೆ ಹೆಚ್ಚು. ಈ ಸಂದರ್ಭ ತೋಟದಲ್ಲೇ ಒಂದು ಕೆ.ಜಿ.ಗೆ ಕನಿಷ್ಠ ₹ 35–40ರ ಧಾರಣಿ ಸಿಗುತ್ತದೆ ಎಂಬ ನಿರೀಕ್ಷೆಯಿಂದ ಹೆಚ್ಚಿನ ರೈತರು ಆಗಸ್ಟ್‌ ಅಂತ್ಯದಿಂದಲೇ ಚಾಟ್ನಿ ನಡೆಸಿದ್ದರು.

ಇದೀಗ ವಾತಾವರಣ ವೈಪರೀತ್ಯದಿಂದ ರೋಗ ವ್ಯಾಪಿಸಿದೆ. ಮೋಡ ಕವಿದ ವಾತಾವರಣ ಮುಂದುವರಿದಿದ್ದು, ರೋಗ ನಿಯಂತ್ರಣ ಕಷ್ಟ ಸಾಧ್ಯ. ಹವಾಮಾನ ಇದೇ ರೀತಿ ಮುಂದುವರಿದರೆ ರೋಗ ಉಲ್ಬಣಿಸಲಿದೆ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಸತೀಶ ಬಡಿಗೇರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಒಣಹವೆ ವಾತಾವರಣದ ಜತೆಗೆ ಬಿಸಿಲೂ ಹೆಚ್ಚಬೇಕು. ಅಂದಾಗ ಮಾತ್ರ ರೋಗ ನಿಯಂತ್ರಣಕ್ಕೆ ಬರಲಿದೆ. ಇಲ್ಲದಿದ್ದರೆ ಎಷ್ಟೇ ಔಷಧಿ ಸಿಂಪಡಿಸಿದರೂ ಪ್ರಯೋಜನವಿಲ್ಲ’ ಎಂದು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry