ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾವಿಷನ್‌ ಸ್ಟೋರ್‌ಗಳಲ್ಲಿ ಪಟಾಕಿ ಮಾರಾಟ ಬೇಡ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಾವಿಷನ್‌ ಸ್ಟೋರ್‌ಗಳಲ್ಲಿ ಪಟಾಕಿಗಳ ಚಿಲ್ಲರೆ ಮಾರಾಟ ಮಾಡುವುದರಿಂದ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ’ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ಪಟಾಕಿ ಚಿಲ್ಲರೆ ಮಾರಾಟ ಪರವಾನಗಿ ನವೀಕರಣ ಮಾಡಲು ನಿರಾಕರಿಸಿದೆ.

ಈ ಸಂಬಂಧ ಪುತ್ತೂರಿನ ಬಿ.ಹರೀಶ್ ಪೈ ಸೇರಿದಂತೆ ಒಂಬತ್ತು ಜನ ಸಲ್ಲಿಸಿರುವ ಪ್ರತ್ಯೇಕ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಗೃಹ ಇಲಾಖೆ ಕಾರ್ಯದರ್ಶಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲ ಕೆ.ಪಿ.ಯೋಗಣ್ಣ, ‘ಸ್ಫೋಟಕ ಕಾಯ್ದೆ ಪ್ರಕಾರ ಎಲ್ಲೆಂದರಲ್ಲಿ ಪಟಾಕಿ ಮಾರಲು ಅವಕಾಶವಿಲ್ಲ. ಆದ್ದರಿಂದಲೇ ಪುತ್ತೂರು ಉಪ ವಿಭಾಗಾಧಿಕಾರಿ ಚಿಲ್ಲರೆ ಮಾರಾಟ ಪರವಾನಗಿ ನವೀಕರಣ ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಈ ರಿಟ್‌ ಅರ್ಜಿಗಳನ್ನು ಮಾನ್ಯ ಮಾಡಬಾರದು’ ಎಂದರು.

’ಸರ್ಕಾರ ಪ್ರಾವಿಷನ್‌ ಸ್ಟೋರ್‌ಗಳಲ್ಲಿ ಪಟಾಕಿ ಮಾರಾಟ ಮಾಡಬಾರದು ಎಂದು ಸೋಮವಾರವಷ್ಟೇ (ಅ.9) ಸುತ್ತೋಲೆ ಹೊರಡಿಸಿದೆ. ಈ ಸಂಬಂಧ ಪೊಲೀಸ್‌ ಮಹಾ ನಿರ್ದೇಶಕರ ಆದೇಶ ಇದೆ’ ಎಂದು ಈ ಕುರಿತ ದಾಖಲೆಗಳನ್ನು ನ್ಯಾಯಪೀಠಕ್ಕೆ ನೀಡಿದರು.

‘ಪರವಾನಗಿ ನವೀಕರಣ ಮಾಡುವುದಿಲ್ಲ ಎಂಬ  ಉಪ ವಿಭಾಗಾಧಿಕಾರಿ ಕ್ರಮ ಸರಿಯಾಗಿಯೇ ಇದೆ. ಈ ಹಂತದಲ್ಲಿ ಹೈಕೋರ್ಟ್‌ ಮಧ್ಯ ಪ್ರವೇಶಿಸಿ ಉಪ ವಿಭಾಗಾಧಿಕಾರಿ ಆದೇಶಕ್ಕೆ ತಡೆ ನೀಡಿದರೆ ಸಂಭಾವ್ಯ ಅನಾಹುತಗಳಿಗೆ ಯಾರು ಜವಾಬ್ದಾರಿ’ ಎಂದು ಬೋಪಣ್ಣ ಪ್ರಶ್ನಿಸಿದರು.

‘ಸುರಕ್ಷತೆ ಹೊಂದಿದ ಮೈದಾನದ ಪ್ರದೇಶಗಳಲ್ಲಿ ಮೂರು ತಿಂಗಳವರೆಗೆ ಮಾರಾಟ ಮಾಡಬಹುದು’ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT