ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಮಳೆ ಅಬ್ಬರಕ್ಕೆ ಜನ ತತ್ತರ

Last Updated 11 ಅಕ್ಟೋಬರ್ 2017, 5:57 IST
ಅಕ್ಷರ ಗಾತ್ರ

ಹನೂರು: ಸಮೀಪದ ವಿವಿಧ ಗ್ರಾಮಗಳಲ್ಲಿ ಸೋಮವಾರ ಸಂಜೆಯಿಂದ ಸುರಿದ ಧಾರಾಕಾರ ಮಳೆಗೆ ಭಾರಿ ಹಾನಿ ಸಂಭವಿಸಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಡೆಯರಪಾಳ್ಯ ಹಾಗೂ ಪಿ.ಜಿ. ಪಾಳ್ಯ ಭಾಗದಲ್ಲಿ ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಲೊಕ್ಕನಹಳ್ಳಿ ಕೆರೆ ಸಂಪೂರ್ಣ ಭರ್ತಿಯಾಗಿದೆ.

ಕೆರೆ ಕೋಡಿ ಹರಿಯುವ ಹಂತ ತಲುಪಿದಾಗ ಗ್ರಾಮಸ್ಥರು ಸ್ವತಃ ಕಟ್ಟೆ ಒಡೆದಿದ್ದಾರೆ. ಇದರಿಂದ ಹೊರ ಬಂದ ಭಾರಿ ಪ್ರಮಾಣದ ನೀರು ತಟ್ಟಹಳ್ಳಕ್ಕೆ ಸೇರಿದ ಪರಿಣಾಮ ಹರಿವಿನ ಮಟ್ಟ ಹೆಚ್ಚಾಗಿ ಪಟ್ಟಣದ ದೇವಾಂಗ ಬಡಾವಣೆಯಲ್ಲಿರುವ ಹಲವು ಮನೆಗಳು ಜಲಾವೃತವಾದವು. ಕೂಡಲೇ ಅಧಿಕಾರಿಗಳು ತಳಮಟ್ಟ ದಲ್ಲಿರುವ ಮನೆಗಳ ನಿವಾಸಿಗಳು ಬೇರೆಡೆ ಸ್ಥಳಾಂತರ ವಾಗುವಂತೆ ಸೂಚಿಸಿ ಅನಾಹುತ ತಪ್ಪಿಸಿದರು.

ಶಾಸಕ ಆರ್. ನರೇಂದ್ರ ಮಂಗಳವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ನುಗ್ಗಿ ಹಾನಿಗೊಳಗಾಗಿರುವ ಮನೆಗಳ ಪಟ್ಟಿ ತಯಾರಿಸಿ ಕೂಡಲೇ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಉಪವಿಭಾಗಾಧಿಕಾರಿ ಎಂ.ಜೆ. ರೂಪಾ ಅವರಿಗೆ ಸೂಚಿಸಿದರು. ಅಲ್ಲದೆ, ಹಾನಿಯಾದ ಮನೆಗಳಿಗೆ ಜಿಲ್ಲಾಡಳಿತದಿಂದ ತಲಾ ₹5,200 ಪರಿಹಾರ ಮತ್ತು ತುರ್ತಾಗಿ 5 ಕೆ.ಜಿ ಅಕ್ಕಿ ವಿತರಿಸುವಂತೆ ನಿರ್ದೇಶಿಸಿದರು.

ಸಮೀಪದ ಹಲಗಾಪುರ ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಸಮೀಪದ ಮನೆಯ ಮೇಲ್ಛಾವಣಿ ಕುಸಿದು ಲಕ್ಷ್ಮಮ್ಮ ಎಂಬುವವರು ಗಾಯಗೊಂಡಿದ್ದಾರೆ. ಬೆಳಗಿನ ಜಾವ 5.30ರ ವೇಳೆ ಮನೆ ಮುಂಭಾಗ ಪಾತ್ರ ತೊಳೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅವರನ್ನು ಬಂಡಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಳೆಯ ಆರ್ಭಟಕ್ಕೆ ಕಾಂಚಳ್ಳಿ ಗ್ರಾಮದಲ್ಲಿ ಕೊಟ್ಟಿಗೆ ಗೋಡೆ ಕುಸಿದು ಹಸುವೊಂದು ಮೃತಪಟ್ಟಿದೆ. ಲೊಕ್ಕನಹಳ್ಳಿ ಬಳಿಯ ಕೌಳಿಹಳ್ಳ ಅಣೆಕಟ್ಟು ಸಣ್ಣ ಬಿರುಕು ಬಿಟ್ಟಿದೆ. ಇದರಿಂದ ಅಪಾರ ಪ್ರಮಾಣದ ನೀರು ಕಾಲುವೆ ಮೂಲಕ ಹರಿದು ಹೋಗುತ್ತಿದೆ.

ಚಂಗಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಹದಗೆಟ್ಟಿದೆ. ಇದರಿಂದ ಗ್ರಾಮಸ್ಥರು ಪರದಾಡು ವಂತಾಗಿದೆ. ಲೊಕ್ಕನಹಳ್ಳಿ ಭಾಗದಲ್ಲಿ ಹತ್ತಿ, ಆಲೂಗೆಡ್ಡೆ, ಬೆಳ್ಳುಳ್ಳಿ, ಈರುಳ್ಳಿ ಬೆಳೆಗಳು ಜಲಾವೃತಗೊಂಡಿವೆ. ಉಪವಿಭಾಗಾಧಿಕಾರಿ ಎಂ.ಜೆ. ರೂಪಾ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆಯಿತು.

ಮತ್ತೆ ಕೊಚ್ಚಿಹೋದ ರಸ್ತೆ: ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ವಡಕೆಹಳ್ಳದ ಸಮೀಪದ ರಸ್ತೆ ಮತ್ತೆ ಕೊಚ್ಚಿ ಹೋಗಿದೆ. ಇಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹಳೆಯ ಸೇತುವೆ ಸಮೀಪದಲ್ಲೇ ಮಣ್ಣಿನಿಂದ ಪರ್ಯಾಯ ರಸ್ತೆ ನಿರ್ಮಿಸಲಾಗಿತ್ತು. ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿ ವಾಹನ ಸವಾರರು ಪರದಾಡುವಂತಾಗಿತ್ತು. ಮಣ್ಣು ಹಾಕಿ ಮತ್ತೆ ರಸ್ತೆ ನಿರ್ಮಿಸಲಾಗಿತ್ತು. ಈಗ ಅದು ಪುನಃ ಕೊಚ್ಚಿ ಹೋಗಿದೆ.

ಭರ್ತಿಯಾದ ಉಡುತೊರೆ: 15 ದಿನ ಗಳಿಂದ ಬಿಳಗಿರಿ ರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯ ಹಾಗೂ ಮಲೆಮಹದೇಶ್ವರ ವನ್ಯಜೀವಿ ಧಾಮಗಳಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಡುತೊರೆ ಜಲಾಶಯ ಭರ್ತಿಯಾಗಿದೆ.

ಒಂದೇ ದಿನದಲ್ಲಿ ಜಲಾಶಯಕ್ಕೆ ಮೂರು ಅಡಿ ನೀರು ಬಂದಿದೆ. ಸಂಪೂರ್ಣ ಭರ್ತಿಯಾಗಲು ಕೇವಲ 6 ಅಡಿ ಬಾಕಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದಲ್ಲಿ ಮುಂದಿನ ದಿನಗಳಲ್ಲೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಲಾಶಯದ ತಳಭಾಗದಲ್ಲಿರುವ ಗ್ರಾಮಗಳ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಮಂಗಳವಾರ ಮಳೆ ನಿಂತಿದ್ದರಿಂದ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT