ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಗಲಿಡಿದ ಪಡಿತರ; ಪ್ರತಿಭಟನೆ

Last Updated 11 ಅಕ್ಟೋಬರ್ 2017, 9:05 IST
ಅಕ್ಷರ ಗಾತ್ರ

ಬನ್ನೂರು: ನ್ಯಾಯಬೆಲೆ ಅಂಗಡಿ, ಸರ್ಕಾರಿ ಶಾಲೆಗಳಿಗೆ ಸರಬರಾಜು ಆಗಬೇಕಿದ್ದ ಪಡಿತರ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋದಾಮಿನಲ್ಲಿ ಕೊಳೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘ಮೈಸೂರು ರಾಸಾಯನಿಕ ಮುಕ್ತ ಕೃಷಿ ಜಿಲ್ಲೆ’ ಅಭಿಯಾನದ ಅಂಗವಾಗಿ ಪಾದಯಾತ್ರೆ ಸಾಗುವಾಗ ಮಾರ್ಗಮಧ್ಯೆ ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಆಹಾರ ಸರಬರಾಜು ನಿಗಮದ ಗೋದಾಮಿಗೆ ಭೇಟಿ ನೀಡಿದರು. ಈ ವೇಳೆ ಗೋದಾಮಿನಲ್ಲಿ ಗೋಧಿ ಮತ್ತು ಅಕ್ಕಿ ಹುಳು ಹಿಡಿದು ಹಾಳಾಗುತ್ತಿರುವುದು ಕಂಡುಬಂದಿತು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಎನ್.ಪ್ರಸನ್ನ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರಸನ್ನ ಮಾತನಾಡಿ, ಇಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಪಡಿತರ ಕೊಳೆಯುತ್ತಿದೆ. ಆದರೆ, ಸ್ಥಳೀಯ ಶಾಸಕರೂ ಆದ ಲೋಕೋ ಪಯೋಗಿ ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಹೊಟ್ಟೆಗೆ ಕಿಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.

ಮಾಜಿ ಶಾಸಕ ಸಿ.ರಮೇಶ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮ್ಯ ಅವರು ಕರ್ನಾಟಕವನ್ನು ಹಸಿವುಮುಕ್ತ ರಾಜ್ಯವಾಗಿ ಮಾಡುತ್ತೇವೆ ಎಂದು ವಿಷಯುಕ್ತ ರಾಜ್ಯವಾಗಿ ಮಾಡುತ್ತಿದ್ದಾರೆ. ಬನ್ನೂರು ಹೋಬಳಿಯಲ್ಲಿಯೇ ಇಷ್ಟೊಂದು ಪ್ರಮಾಣದ ಪಡಿತರ ನಷ್ಟವಾಗಿದ್ದರೆ ಉಳಿದ ಗೋದಾಮಿನಲ್ಲಿ ಇನ್ನೆಷ್ಟು ಆಹಾರ ನಷ್ಟವಾಗಿರಬಹುದು ಎಂದು ಪ್ರಶ್ನಿಸಿದರು.

ಸ್ಥಳೀಯ ಮಾಹಿತಿ ಪ್ರಕಾರ 100 ಮೂಟೆಗೆ 20 ಮೂಟೆಯಂತೆ ಕೊಳೆತ ಪಡಿತರ ಬೆರಸಿ ವಿವಿಧ ದಾಸ್ತಾನು ಮಳಿಗೆಗೆ ಕಳುಹಿಸಲಾಗುತ್ತಿದೆ ಎಂದರು. ಸುಮಾರು 3 ಗಂಟೆ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಂಬಂಧಿಸಿದ ಅಧಿಕಾರಿ ಸ್ಥಳಕ್ಕೆ ಆಗಮಿಸುವವರೆಗೂ ಪ್ರತಿಭಟನೆ ನಡೆಸಿದರು. ಇದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ಜಿಲ್ಲಾ ಘಟಕ ಉಪಾಧ್ಯಕ್ಷ ಎಸ್.ಸಿ ಅಶೋಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂರ್ತಿ, ಜಿಲ್ಲಾ ಮಹಿಳಾ ಮೋರ್ಚಾ ಸದಸ್ಯೆ ಲಕ್ಷ್ಮಿ, ಮುಖಂಡರಾದ ಬಿ.ಎನ್.ಸುರೇಶ್, ಮಾರ್ಬಳ್ಳಿ ಮೂರ್ತಿ, ಎಂ.ರಾಮು, ವೀಣಾ ಶಿವಕುಮಾರ್, ಶಿವಕುಮಾರ್, ಆರ್.ರಘು, ನಂಜೇಶ, ಶಿವರಾಮು, ಅನಿತಾ, ಮಲ್ಲಿಕಾರ್ಜುನ, ಮಹೇಶ್, ಮೋಹನ್, ವೆಂಕಟರಮಣಶೆಟ್ಟಿ, ಚಂದ್ರಶೇಖರ್, ವನಿತಾ ಸದಾನಂದ್, ಮಹದೇವಸ್ವಾಮಿ, ಪರಶಿವಮೂರ್ತಿ, ಹುಚ್ಚೇಗೌಡ, ಗಣೇಶ್, ಅಶೋಕ್, ಕಾಳೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT