ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ತಿತ್ವ ಕಳೆದುಕೊಳ್ಳುತ್ತಿರುವ ಗುಂಡ್ಲಹಳ್ಳಿ ದೊಡ್ಡಕೆರೆ

Last Updated 11 ಅಕ್ಟೋಬರ್ 2017, 9:40 IST
ಅಕ್ಷರ ಗಾತ್ರ

ಪಾವಗಡ: ರಾಜ್ಯದ ಅತ್ಯಂತ ಹಳೆಯ ಪ್ರಮುಖ ಕೆರೆಗಳಲ್ಲಿ ಒಂದಾದ ಗುಂಡ್ಲಹಳ್ಳಿ ದೊಡ್ಡಕೆರೆ ಒತ್ತುವರಿ, ಮರಳು ಗಣಿಗಾರಿಕೆಯಿಂದಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ.
ಸೂಳೆಕೆರೆಯಷ್ಟೇ ಮಹತ್ವ ಪಡೆದಿದ್ದ ಗುಂಡ್ಲಹಳ್ಳಿ ದೊಡ್ಡ ಕೆರೆಯನ್ನು ನೂರಾರು ವರ್ಷಗಳ ಹಿಂದೆ ವೇಶ್ಯೆ ಅಕ್ಕಲೇಟಿ ಕಟ್ಟಿಸಿದ್ದಾಳೆ ಎಂದು ಕೆರೆ ಕಟ್ಟೆ ಮೇಲಿನ ಶಾಸನದಲ್ಲಿ ತಿಳಿದು ಬರುತ್ತದೆ.

ಕಿರಿಯ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆರೆಗೆ ಇತ್ತೀಚೆಗೆ ಸುರಿದ ಮಳೆ ನೀರು ಹರಿದು ಬಂದಿಲ್ಲ. ತಾಲ್ಲೂಕಿನ ಸಾಕಷ್ಟು ಕೆರೆಗಳಿಗೆ ನೀರು ಬಂದಿದೆ. ಆದರೆ ದೊಡ್ಡ ಕೆರೆಗೆ ನೀರು ಹೊತ್ತು ತರುವ ಹಳ್ಳ, ರಾಜ ಕಾಲುವೆಗಳ ಒತ್ತುವರಿ, ಮರಳು ಗಣಿಗಾರಿಕೆಗಾಗಿ ತೋಡಿರುವ ಬೃಹತ್ ಗಾತ್ರದ ಗುಂಡಿಗಳಿಂದ ನೀರು ಬಂದಿಲ್ಲ.

ಮರಳು ಗಣಿಗಾರಿಕೆಗಾಗಿ 2ರಿಂದ 3 ಮಟ್ಟಿನಷ್ಟು ಆಳದ ಗುಂಡಿಗಳನ್ನು ಕೆರೆ ಅಂಗಳದಲ್ಲಿ ತೋಡಿ ಹಾಳುಗೆಡವಲಾಗಿದೆ. ಸಮೀಪದ ಇಟ್ಟಿಗೆ ಕಾರ್ಖಾನೆಗಳಿಗೆ, ಕಟ್ಟಡಗಳ ನಿರ್ಮಾಣಕ್ಕಾಗಿ ನಿತ್ಯ 100ಲೋಡ್ ಗಳಷ್ಟು ಮರಳು, ಮಣ್ಣನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಕೆರೆಯಲ್ಲಿ ಸೀಮೆಜಾಲಿ ಇತ್ಯಾದಿ ಗಿಡಗಳು ಬೆಳೆದು ನಿಂತಿವೆ.

ಕಳೆದ ಮೂರು ವರ್ಷಗಳ ಹಿಂದೆ ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಾಗಿತ್ತು. ಕೆಲ ಮರಳು ಗಣಿಕಾರಿಕೆ ನಡೆಸುವ ಕಿಡಿಗೇಡಿಗಳು ಮರಳು ಎತ್ತಲು ಕೆರೆ ತೂಬನ್ನು ಒಡೆದು ಇದ್ದ ನೀರನ್ನು ಹೊರಬಿಟ್ಟಿದ್ದರು ಎಂದು ಕುರಿ ಮೇಯಿಸುತ್ತಿದ್ದ ಗೋರಸಮಾವು ಗ್ರಾಮದ ಕುರಿಗಾಹಿ ಹನುಮಪ್ಪ ವಿವರಿಸಿದರು.

ದೇವಲಕೆರೆ ಪ್ರದೇಶದಿಂದ ಗುಜ್ಜನಡು, ಕೋಣನಕುರಿಕೆ, ದೇವರಬೆಟ್ಟ, ಆರ್ಲಹಳ್ಳಿ ಮಾರ್ಗವಾಗಿ ಹಳ್ಳಗಳು, ಕಾಲುವೆ, ಕುಂಟೆಗಳ ಮುಖಾಂತರ ನೀರು ಹರಿದು ಬರುತ್ತಿತ್ತು. ದೊಡ್ಡ ಕೆರೆ ತುಂಬಿ ಕೋಡಿ ಬಿದ್ದ ನೀರು ಪಳವಳ್ಳಿ ಕೆರೆಗೆ ಹೋಗುತ್ತಿತ್ತು.

ಕೋಡಿ ಬಿದ್ದು 40 ವರ್ಷಗಳಾಗಿವೆ ಎಂದು ಗುಂಡ್ಲಹಳ್ಳಿ ಗ್ರಾಮಸ್ಥರೊಬ್ಬರು ನೆನಪು ಹಂಚಿಕೊಂಡರು.
ಇತ್ತೀಚಿನ ದಿನಗಳಲ್ಲಿ ಒತ್ತುವರಿ ಜತೆಗೆ ಅವೈಜ್ಞಾನಿಕವಾಗಿ ಹಳ್ಳಗಳಿಗೆ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ. ಒಂದರ ಪಕ್ಕದಲ್ಲಿ ಮತ್ತೊಂದು ಚೆಕ್ ಡ್ಯಾಂ ಕಟ್ಟುವುದರಿಂದ ಕೆರೆಗಳಿಗೆ ನೀರು ಹರಿಯುತ್ತಿಲ್ಲ. ಜಾಲಿ, ಹೊಂಗೆ ಗಿಡಗಳು ಬೆಳೆದು ಕೆರೆ ಕಟ್ಟೆ, ಕೆರೆ ಪ್ರದೇಶವನ್ನು ಆವರಿಸಿಕೊಂಡಿವೆ.

ಶಾಸನ, ಐತಿಹಾಸಿಕ ಗ್ರಂಥಗಳ ಪ್ರಕಾರ ದೊಡ್ಡ ಕೆರೆಯ ವಿಸ್ತೀರ್ಣ 200 ಎಕರೆ ಇತ್ತು. ಸುಮಾರು 300 ಎಕರೆ ಕೆರೆ ಆಶ್ರಿತ ಪ್ರದೇಶದಲ್ಲಿ ರೈತರು ಬೆಳೆ ಬೆಳೆಯುತ್ತಿದ್ದರು. ಮೈಸೂರು ಅರಸರ ಕಾಲದಲ್ಲಿ ದೊಡ್ಡ ಕೆರೆಯ ಜೀರ್ಣೋದ್ಧಾರ ಮಾಡಲಾಗಿತ್ತು ಎಂದು ಇತಿಹಾಸ ತಜ್ಞ ಚೆಲುವರಾಜನ್ ಮಾಹಿತಿ ನೀಡಿದರು.

ಅಂಕಿ–ಅಂಶ
ಕ್ರಿ.ಶ 872 ರಲ್ಲಿ ಕೆರೆ ನಿರ್ಮಾಣ
200 ಎಕರೆ ಕೆರೆ ವಿಸ್ತೀರ್ಣ
300 ಎಕರೆ ಅಚ್ಚುಕಟ್ಟು ಪ್ರದೇಶ
75 ಎಕರೆ ಪ್ರಸ್ತುತ ಕೆರೆ ವಿಸ್ತೀರ್ಣ
ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳು-93
ಕಿರಿಯ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳು-38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT