ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಗೆ ನಿಮಿಷ ಮುಚ್ಚಲು ವರುಷ!

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೋಟೆ ಕೊಳ್ಳೆಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ನಗರದ ರಸ್ತೆ ಗುಂಡಿಗಳಲ್ಲಿ ಬಿದ್ದು ಮೂವರು ಬಲಿಯಾದ ಬಳಿಕ ಎಚ್ಚೆತ್ತ ಪಾಲಿಕೆ ಸಮರೋಪಾದಿಯಲ್ಲಿ ಅವುಗಳನ್ನು ಮುಚ್ಚಲು ಮುಂದಾಗಿದೆ.

‘ನಾಗವಾರದ ಎಚ್‌ಬಿಆರ್‌ ಬಡಾವಣೆ, ತಿಪ್ಪಸಂದ್ರ, ಮಾರುತಿ ಸೇವಾ ನಗರ ವಾರ್ಡ್‌ನ ಜೀವನಹಳ್ಳಿ ಮುಖ್ಯರಸ್ತೆ, ಕಾಚರಕನಹಳ್ಳಿ, ಆರ್‌ಬಿಐ ಬಡಾವಣೆ, ಕೋಣನಕುಂಟೆ, ಅಂಜನಾಪುರ, ವಸಂತಪುರ, ಹೊಯ್ಸಳ ನಗರ ಸೇರಿ ವಿವಿಧೆಡೆ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮಳೆಯನ್ನೂ ಲೆಕ್ಕಿಸದೆ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಪೈಥಾನ್‌ ಯಂತ್ರದ ಮೂಲಕ 300 ಕಿ.ಮೀ ಉದ್ದದ 110 ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುತ್ತಿದ್ದೇವೆ. ಮೆಟ್ರೊ ರೈಲು 2ನೇ ಹಂತದ ಕಾಮಗಾರಿಯಿಂದಾಗಿ ಕೆಲ ರಸ್ತೆಗಳು ಹಾಳಾಗಿವೆ. ಈ ರಸ್ತೆಗಳ ದುರಸ್ತಿ ಜೊತೆಗೆ ಗುಂಡಿಗಳನ್ನು ನವೆಂಬರ್‌ 15ರೊಳಗೆ ಮುಚ್ಚುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ’ ಎಂದು ವಿವರಿಸಿದ್ದಾರೆ.

‘500 ಕಿ.ಮೀ ಉದ್ದದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಗುತ್ತಿಗೆ ನೀಡಿದ್ದು, ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಬಳಿಕ ಡಾಂಬರೀಕರಣ ಕಾರ್ಯವನ್ನು ಪ್ರಾರಂಭಿಸುತ್ತೇವೆ. ಟೆಂಡರ್ ಶ್ಯೂರ್‌ ಅಡಿಯಲ್ಲಿ 20 ಕಿ.ಮೀ ಉದ್ದದ 12 ಮುಖ್ಯರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮಾರ್ಚ್ ಅಂತ್ಯದೊಳಗೆ ಕಾಮಗಾರಿಗಳು ಪೂರ್ಣಗೊಳ್ಳಲಿವೆ’ ಎಂದು ಹೇಳಿದ್ದಾರೆ.

‘ಮಳೆ ಅನಾಹುತಗಳನ್ನು ತಪ್ಪಿಸಿ, ಶಾಶ್ವತ ಪರಿಹಾರ ಸೂಚಿಸಲು ಸಂಶೋಧನೆ ನಡೆಸುವಂತೆ ಸ್ಟ್ರುಪ್‌ ಕನ್ಸಲ್ಟೆಂಟ್‌ ಸಂಸ್ಥೆಗೆ ಸೂಚಿಸಲಾಗಿದೆ’ ಎಂದು ಹೇಳಿದ್ದಾರೆ.

‘ವರ್ಷದ ಮಳೆ ಎರಡೇ ತಿಂಗಳಲ್ಲಿ’
‘ನಗರದಲ್ಲಿ ವರ್ಷದಲ್ಲಿ ಸರಾಸರಿ 60 ದಿನಗಳು ಮಳೆ ಸುರಿಯುತ್ತದೆ. ಆದರೆ, ಎರಡು ತಿಂಗಳಲ್ಲಿ ದಾಖಲಾಗಿರುವ ಮಳೆಯ ಪ್ರಮಾಣ ಒಂದು ವರ್ಷದ ಸರಾಸರಿ ಮಳೆಗೆ ಸಮವಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಆಗಸ್ಟ್ 1ರಿಂದ ಅಕ್ಟೋಬರ್ 6ರವರೆಗೆ 756 ಮಿ.ಮೀ ಮಳೆ ದಾಖಲಾಗಿದ್ದು, ವರ್ಷದ ಸರಾಸರಿ ಪ್ರಮಾಣ 900 ಮಿ.ಮೀ ಆಗಿರುತ್ತದೆ. ಎಚ್.ಎಸ್.ಆರ್. ಬಡಾವಣೆಯ ಬಿಳೇಕಹಳ್ಳಿಯಲ್ಲಿ 184 ಮಿ.ಮೀ ಮಳೆಯಾಗಿದೆ’ ಎಂದು ಜಾರ್ಜ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT