ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾ ಯೋಜನೆ: ಕೊನೆಗೂ ಹಸಿರುನಿಶಾನೆ

ಸದಸ್ಯರ ಒತ್ತಾಯದ ಮೇರೆಗೆ ಅಧ್ಯಕ್ಷೆ–ಉಪಾಧ್ಯಕ್ಷರಿಂದ ಕ್ಷಮೆ ಯಾಚನೆ, ಸಿಇಒ ನಿರಾಕರಣೆ
Last Updated 12 ಅಕ್ಟೋಬರ್ 2017, 4:49 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹಾಗೂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಅವರ ಕ್ಷಮೆ ಯಾಚನೆಯ ನಡುವೆ ಪ್ರಸಕ್ತ ಸಾಲಿನಲ್ಲಿ ₹ 282.13 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಬುಧವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯ್ತಿ ವಿಶೇಷ ಸಾಮಾನ್ಯಸಭೆ ಅನುಮೋದನೆ ನೀಡಿತು.

ಸಭೆ ಆರಂಭವಾಗುತ್ತಿದ್ದಂತೆಯೇ ನಾಟಕೀಯ ಬೆಳವಣಿಗೆಯಲ್ಲಿ ಗುಡೂರು ಕ್ಷೇತ್ರದ ಸದಸ್ಯ ಶಶಿಕಾಂತ ಪಾಟೀಲ ಕ್ರಿಯಾ ಯೋಜನೆಗೆ ಅನುಮೋದನೆ ವಿಳಂಬವಾಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಪ್ರಕ್ರಿಯೆ ವಿಳಂಬವಾಗಿ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಇದಕ್ಕೆ ಜಿಲ್ಲಾ ಪಂಚಾಯ್ತಿ ಅಧಕ್ಷರು–ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೇ ಹೊಣೆ. ಮೂವರೂ ಜಿಲ್ಲೆಯ ಜನರ ಕ್ಷಮೆ ಯಾಚನೆ ಮಾಡಬೇಕು. ಅಲ್ಲಿಯವರೆಗೂ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಅದಕ್ಕೆ ಉಳಿದ ಸದಸ್ಯರೂ ದನಿಗೂಡಿಸಿದರು.

ಈ ವೇಳೆ ಕೆಲಕಾಲ ಸಭೆಯಲ್ಲಿ ಗದ್ದಲ ಉಂಟಾಯಿತು. ಆಗ ಮಾತನಾಡಿದ ಅಧ್ಯಕ್ಷೆ ವೀಣಾ ಹಾಗೂ ಉಪಾಧ್ಯಕ್ಷ ಕೋಮಾರ, ‘ನಾವು ಕ್ಷಮೆ ಕೇಳುವುದರಿಂದ ಯಾವುದೇ ತೊಂದರೆ ಇಲ್ಲ. ಇದರಿಂದ ನಮಗೂ ನೋವಾಗಿದೆ. ನಿಮಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ’ ಎಂದರು.

ಸಿಇಒ ವಿಕಾಸ್‌ ಸುರಳಕರ್ ಅವರು ಕಡ್ಡಾಯವಾಗಿ ಕ್ಷಮೆ ಕೇಳಬೇಕು ಎಂದು ಸದಸ್ಯರು ಪಟ್ಟುಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ನಾನು ಕ್ಷಮೆ ಕೇಳುವ ಅವಶ್ಯಕತೆಯೇ ಬರುವುದಿಲ್ಲ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ಹಾಗಾಗಿ ಅದರ ಪ್ರಶ್ನೆಯೇ ಇಲ್ಲ’ ಎಂದರು.

‘ಜಿಲ್ಲೆಯ ಮಾನವನ್ನು ಹರಾಜು ಹಾಕಲಾಗಿದೆ. ನೀವು ಕ್ಷಮೆ ಕೇಳಿದರೆ ಎಲ್ಲ ಸದಸ್ಯರು ಅನುಮೋದನೆ ಕೊಡುತ್ತಾರೆ. ಇಲ್ಲದಿದ್ದರೆ ನಿಮ್ಮ ನಡೆಯನ್ನು ಖಂಡಿಸಬೇಕಾಗುತ್ತದೆ’ ಎಂದು ಸದಸ್ಯರು ಹೇಳಿದರು. ಆದರೆ ಸುರಳಕರ್ ಮಾತ್ರ ಇದಕ್ಕೆ ಸೊಪ್ಪು ಹಾಕಲಿಲ್ಲ.

‘ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಅನುಮೋದನೆ ನೀಡಲು ಸಿದ್ಧವಾಗಿದ್ದೇವೆ. ಕ್ಷೇತ್ರದಲ್ಲಿ ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆ ಇದೆ. ಜನ ನಮಗೆ ಕಲ್ಲು ಹೊಡೆಯುತ್ತಿದ್ದಾರೆ. ನಿಮಗೆ (ಅಧಿಕಾರಿ) ಅಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಇಲಾಖೆಯ ಕಚೇರಿಗಳಿಗೆ ಬೀಗ ಹಾಕಬೇಕಾಗುತ್ತದೆ. ನಿಮ್ಮ ವೈಯಕ್ತಿಕ ದ್ವೇಷ ಬಿಟ್ಟು ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ನೀಡಿ’ ಎಂದು ಸದಸ್ಯ ಹೂವಪ್ಪ ರಾಠೋಡ ಹರಿಹಾಯ್ದರು.

‘ಇಲಾಖೆಯ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಕೇಳಿದರೇ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಸಿಇಒ ಅವರು ಹೇಳಿದರೆ ಕೊಡುತ್ತೇವೆ ಎಂದು ಹೇಳುತ್ತಾರೆ. ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಸಿಇಒ ಅವರೇ ಫೈನಲ್ ಎನ್ನುವ ಹಾಗಾಗಿದೆ’ ಎಂದು ವೀಣಾ ಕಾಶಪ್ಪನವರ ದೂರಿದರು.

ವಿವಿಧ ಇಲಾಖೆಗೆ ಇತ್ತೀಚೆಗೆ ನೇಮಕ ಪ್ರಕ್ರಿಯೇ ನಡೆದಾಗ ನಾವು (ಸದಸ್ಯರು) ಶಿಫಾರಸ್ಸು ಮಾಡಿದರೂ ಕೂಡಾ ಕಡೆಗಣಿಸಲಾಗಿದೆ. ಹುದ್ದೆಗಳನ್ನು ಬೇಕಾಬಿಟ್ಟಿಯಾಗಿ ತುಂಬಿಕೊಳ್ಳಲಾಗಿದೆ. ಇದರಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ. ಇದರ ತನಿಖೆ ನಡೆಸಬೇಕು ಎಂದು ಸದಸ್ಯ ಶಶಿಕಾಂತ ಆರೋಪಿಸಿದರು.

‘ಅಧಿಕಾರಿಗಳು ಶಿಷ್ಟಾಚಾರ ಪಾಲನೆ ಮಾಡುತ್ತಿಲ್ಲ. ಸಚಿವರು ಹಾಗೂ ಶಾಸಕರಿಗೆ ಮಾತ್ರ ಗೌರವ ನೀಡುತ್ತಾರೆ. ನಮಗೆ ನೀಡುವುದಿಲ್ಲ. ಇದೇ ರೀತಿ ಮುಂದುವರೆದರೆ 36 ಮಂದಿ ಸದಸ್ಯರು ನಿಮ್ಮ (ಸಿಇಒ) ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಎಚ್ಚರಿಕೆ ನೀಡಿದರು.

ಸದಸ್ಯೆ ಶಶಿಕಲಾ ಮಾತನಾಡಿ, ‘ವೈದ್ಯಕೀಯ ಇಲಾಖೆ ಅಧಿಕಾರಿಯೊಬ್ಬರು ನಮಗೆ ಮಾನಹಾನಿ ಆಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಲಿಖಿತವಾಗಿ ನಿಮಗೆ ದೂರು ನೀಡಿದ್ದೇನೆ. ನೀವು ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುರಳಕರ್, ‘ಈಗಾಗಲೇ ಡಿಎಚ್‌ಒ ಅವರಿಗೆ ಸೂಚನೆ ನೀಡಲಾಗಿದೆ. ಅವರು ಬೇರೆ ಕಡೆ ತೆರಳಿದ್ದಾರೆ. ನೋಟೀಸ್ ನೀಡಿದ್ದು ಕ್ರಮಕೈಗೊಳ್ಳಲಿದ್ದಾರೆ’ ಎಂದರು. ಇಂತಹ ಸಮಸ್ಯೆಗಳಿರುವಾಗ ನಮ್ಮ ಗಮನಕ್ಕೆ ತರದೇ ಅವರು ಬೇರೆಡೆ ತೆರಳಿದ್ದು ಸರಿಯಲ್ಲ ಎಂದು ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT