ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10ವರ್ಷದ ಬಳಿಕ ಚಿಕ್ಕಹೊಳೆ ಒಡಲು ಭರ್ತಿ

Last Updated 12 ಅಕ್ಟೋಬರ್ 2017, 7:16 IST
ಅಕ್ಷರ ಗಾತ್ರ

ಚಾಮರಾಜನಗರ: ಜಲಾಶಯದ 6 ಕ್ರೆಸ್ಟ್‌ಗೇಟ್‌ಗಳಿಂದ ಭೋರ್ಗರೆಯುತ್ತ ಧುಮ್ಮಿಕ್ಕುತ್ತಿರುವ ನೀರು, ಹಿಂಬದಿಯಲ್ಲಿ ತುಂಬಿ ತುಳುಕುತ್ತಿರುವ ಜಲ ಸಂಗ್ರಹ, ಈ ಮನಮೋಹಕ ಪರಿಸರವನ್ನು ಮೊಬೈಲ್‌ ಹಾಗೂ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಮುಗಿಬೀಳುತ್ತಿರುವ ಪ್ರವಾಸಿಗರು.

–ಇದು ಜಿಲ್ಲೆಯಲ್ಲಿ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಭರ್ತಿಯಾಗಿರುವ ಚಿಕ್ಕಹೊಳೆ ಜಲಾಶಯದಲ್ಲಿ ಬುಧವಾರ ಕಂಡು ಬಂದ ದೃಶ್ಯ.

‘ಜಲಾಶಯದ ಗರಿಷ್ಠ ಮಟ್ಟ 2,474 ಅಡಿಯಿದ್ದು, ಸಂಪೂರ್ಣ ಭರ್ತಿಯಾಗಿದೆ. 370 ಎಂಸಿಎಫ್‌ಟಿ ಸಂಗ್ರಹ ಸಾಮರ್ಥ್ಯ ಹೊಂದಿದೆ. ಒಳಹರಿವು 500 ಕ್ಯುಸೆಕ್‌ನಷ್ಟಿದ್ದು, ಜಲಾಶಯದ ಸುರಕ್ಷತೆಗಾಗಿ ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಜತೆಗೆ, ನದಿಯ ಕೆಳಭಾಗದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ’ ಎಂದು ಕಾವೇರಿ ನೀರಾವರಿ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್‌ ಮರಿಸ್ವಾಮಿ ತಿಳಿಸಿದರು.

ಮಧ್ಯಾಹ್ನದ ವೇಳೆಗೆ ಹೊರಹರಿವಿನ ಪ್ರಮಾಣವನ್ನು 250 ಕ್ಯುಸೆಕ್‌ಗೆ ತಗ್ಗಿಸಲಾಯಿತು. 2007ರಲ್ಲಿ ಭರ್ತಿಯಾಗಿದ್ದ ಚಿಕ್ಕಹೊಳೆ ಜಲಾಶಯ ಮತ್ತೆ ತುಂಬಿಕೊಂಡಿದ್ದು ಇದೇ ಮೊದಲು.

‘ಜಲಾಶಯದಲ್ಲಿ 2 ಮುಖ್ಯ ಗೇಟ್‌ಗಳಿದ್ದು, ಒಂದರಿಂದ ಬಂಡಿಗೆರೆ ಮತ್ತು ಇತರೆ ಕೆರೆಗಳಿಗೆ ನೀರು ಸರಬರಾಜಾಗುತ್ತದೆ. ಮತ್ತೊಂದು ಗೇಟ್‌ನಿಂದ ಸಿದ್ದಯ್ಯನಪುರ, ಡೊಳ್ಳೀಪುರ ಮಾರ್ಗವಾಗಿ ಕಬಿನಿ ಜಲಾಶಯ ಸೇರುತ್ತದೆ. ಜಲಾಶಯವು 4,500 ಹೆಕ್ಟೇರ್‌ ಪ್ರದೇಶದ ಕೃಷಿ ಭೂಮಿಗೆ ಉಪಯುಕ್ತವಾಗಿದೆ’ ಎಂದು ರೈತ ಬಿ. ಶಿವಕುಮಾರ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಚಿಕ್ಕಹೊಳೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ.

ಸುವರ್ಣಾವತಿ ಭರ್ತಿ ಸನ್ನಿಹಿತ: ಸುವರ್ಣಾವತಿ ಜಲಾಶಯದ ಗರಿಷ್ಟ ಮಟ್ಟ 2,455 ಅಡಿಯಷ್ಟಿದ್ದು, ಭರ್ತಿಯಾಗಲು ಒಂದೂವರೆ ಅಡಿ ಮಾತ್ರ ಬಾಕಿ ಇದೆ. ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಇನ್ನೊಂದು ದಿನದೊಳಗೆ ಭರ್ತಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.

***

ಶಾಸಕರಿಂದ ಬಾಗಿನ ಅರ್ಪಣೆ
ಚಿಕ್ಕಹೊಳೆ ಜಲಾಶಯಕ್ಕೆ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕಾಡಾ ಅಧ್ಯಕ್ಷ ಎಚ್.ಎಸ್. ನಂಜಪ್ಪ ಬುಧವಾರ ಬೆಳಿಗ್ಗೆ ಬಾಗಿನ ಅರ್ಪಿಸಿದರು.

ಬಳಿಕ ಪುಟ್ಟರಂಗಶೆಟ್ಟಿ ಮಾತನಾಡಿ, ಜಲಾಶಯ 10ವರ್ಷಗಳ ಬಳಿಕ ಭರ್ತಿಯಾಗಿದೆ. ಇದರಿಂದ ತಾಲ್ಲೂಕಿನ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ಬಂಡಿಗೆರೆ ಹಾಗೂ ಮರಗದ ಕೆರೆ ಸೇರಿದಂತೆ ಇತರೆ ಕೆರೆಗಳಿಗೆ ಶೀಘ್ರದಲ್ಲೇ ನೀರು ಬಿಡಲಾಗುವುದು ಎಂದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ. ರಾಮಚಂದ್ರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್.ವಿ. ಚಂದ್ರು, ನಗರಸಭೆ ಅಧ್ಯಕ್ಷೆ ಶೋಭಾ ಪುಟ್ಟಸ್ವಾಮಿ, ಉಪಾಧ್ಯಕ್ಷ ಆರ್.ಎಂ. ರಾಜಪ್ಪ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಚೂಡಾ ಅಧ್ಯಕ್ಷ ಸುಹೇಲ್‌ ಆಲಿಖಾನ್‌, ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಉಮೇಶ್‌, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಬಿ. ಮರಿಸ್ವಾಮಿ, ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ ಮರಿಸ್ವಾಮಿ, ಎಇಇ ರಾಜೇಂದ್ರ ಪ್ರಸಾದ್‌ ಹಾಜರಿದ್ದರು.

***

ಪ್ರವಾಸಿಗರ ದಂಡು
ಮೈದುಂಬಿಕೊಂಡಿರುವ ಚಿಕ್ಕಹೊಳೆ ಹಾಗೂ ಸುವರ್ಣಾವತಿ ಜಲಾಶಯ ಈಗ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ.

ಜಲಾಶಯಗಳು ಭರ್ತಿಯಾದ ಸುದ್ದಿ ತಿಳಿಯುತ್ತಿದ್ದಂತೆ ವಿವಿಧ ಭಾಗಗಳಿಂದ ಬಂದ ಪ್ರವಾಸಿಗರು ಮತ್ತು ಸ್ಥಳೀಯರು ತಂಡೋಪತಂಡವಾಗಿ ಬಂದು ಸುಂದರ ದೃಶ್ಯವನ್ನು ಕಣ್ತುಂಬಿಕೊಂಡರು.

ಸತತ ಬರಗಾಲದಿಂದ ಬೇಸತ್ತಿದ್ದ ಸ್ಥಳೀಯರು ಜಲಾಶಯದಲ್ಲಿ ನೀರನ್ನು ಕಂಡು ಹರ್ಷಗೊಂಡರು. ಕೆಲವರು ಜಲಾಶಯದ ಹಿನ್ನೀರು ಮತ್ತು ಗೇಟ್‌ನ ಮುಂಭಾಗದಲ್ಲಿ ನಿಂತು ಚಿತ್ರ ತೆಗೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT