ಶನಿವಾರ, ಸೆಪ್ಟೆಂಬರ್ 21, 2019
24 °C

ಸೋಲಿನ ಗಲ್ಲಿಗೆ ನುಗ್ಗಿ ಹೊಡೆಯುವ ಟೈಗರ್‌!

Published:
Updated:
ಸೋಲಿನ ಗಲ್ಲಿಗೆ ನುಗ್ಗಿ ಹೊಡೆಯುವ ಟೈಗರ್‌!

‘ಗಂಟೆ ಹೊಡೆದ್ರೆ ಶಿವ, ತಮಟೆ ಹೊಡೆದ್ರೆ ಯಮ...’ ಹೀಗೆ ಏರುದನಿಯಲ್ಲಿ ಸಾಗುತ್ತಿದ್ದ ಪಂಚಿಂಗ್‌ ಡೈಲಾಗ್‌ಗಳ ತೀವ್ರತೆ ಒಂದೇ ಸಮನೆ ಏರುತ್ತಲೇ ಇತ್ತು. ನಾಯಕ ಅಷ್ಟೇ ಅಲ್ಲ, ಹೀಗೆ ಬಂದು ಹಾಗೆ ಹೋಗುವ ಮಹಿಳಾ ಪೊಲೀಸ್‌, ಕೈಯಲ್ಲಿನ ಸುತ್ತಿಗೆ ಎತ್ತಿಕೊಂಡು ಎದ್ದುನಿಲ್ಲುವ ರೋಷದ ಮಹಿಳಾ ಜಡ್ಜ್‌ ಎಲ್ಲರದೂ ಪರಸ್ಪರರನ್ನು ಮೀರಿಸುವ ಅಬ್ಬರ. ಮಧ್ಯೆ ಒಂದಿಷ್ಟು ತಾಯಿ ಸೆಂಟಿಮೆಂಟ್‌, ನೆಂಚಿಕೊಳ್ಳಲು ರೊಮ್ಯಾಂಟಿಕ್‌ ಸಾಂಗ್‌... ‘ಟೈಗರ್‌ ಗಲ್ಲಿ’ ಹೆಸರಿನಲ್ಲಿ ಇರುವ ಕಮರ್ಷಿಯಲ್‌ ಧಂ ಸಿನಿಮಾದಲ್ಲಿಯೂ ಇದೆ ಎಂಬುದಕ್ಕೆ ಟ್ರೈಲರ್‌ ಪುರಾವೆಯಂತಿತ್ತು.

ಪರದೆ ಆರಿದರೆ ಆ ಆಕ್ರೋಶವೆಲ್ಲ ವಿನಯವಾಗಿ ರೂಪಾಂತರಗೊಂಡಂತೆ ಸತೀಶ್‌ ವೇದಿಕೆಯ ಮೇಲೆ ಕೂತಿದ್ದರು. ಪಕ್ಕ ಕೊಂಚ ಬಾಗಿಯೇ ಕೂತ ರವಿ ಶ್ರೀವತ್ಸ ಹಳೆಯ ನೆನಪುಗಳಿಗೆ ಜಾರುವ ತವಕದಲ್ಲಿದ್ದಂತೆ ಕಾಣುತ್ತಿತ್ತು. ಸತೀಶ್‌ ಕೂಡ ಭಾವುಕಗೊಂಡಿರುವುದನ್ನು ಕಣ್ಣುಗಳು ಹೇಳುತ್ತಿದ್ದವು. ನ್ಯಾಯಾಧೀಶರ ಪಾತ್ರದಲ್ಲಿ ಮಿಂಚಿದ್ದ ಪೂಜಾ ಅವರ ಮುಖದಲ್ಲಿಯೂ ‘ಹೇಳುವುದು ಏನೋ ಉಳಿದಿದೆ’ ಎಂಬ ಭಾವ ಇಣುಕುತ್ತಿದ್ದವು. ಮೈಕ್‌ ಕೈಗೆ ಸಿಕ್ಕಿದ್ದೇ ಒಬ್ಬರ ನಂತರ ಒಬ್ಬರು ಮಾತಿಗಿಳಿದರು.

‘ಒಬ್ಬ ನಿರ್ದೇಶಕನ ಸಿನಿಮಾ ಸೋತಿತು ಅಂದ ತಕ್ಷಣ ಆ ನಿರ್ದೇಶಕ ಸತ್ತ ಎಂದು ಗಾಂಧಿನಗರ ಪರಿಗಣಿಸುತ್ತದೆ. ಅದು ಗಾಂಧಿನಗರದ ರಿವಾಜು. ಹಾಗೆ ಸತ್ತವನು ಎಂದು ಪರಿಗಣಿತನಾದ ಕರಾಳತೆಯಲ್ಲಿ ಕಳೆದ ನಾಲ್ಕು ವರ್ಷಗಳನ್ನು ಕಳೆದಿದ್ದೇನೆ’ ಎನ್ನುವಾಗ ಅವರ ಸ್ವರ ಮೆಲ್ಲಗೇ ಕಂಪಿಸುತ್ತಿತ್ತು. ಕಳೆದ ದಿನಗಳ ನೋವನ್ನು ದಾಟಿ ಹೊಸ ಸಿನಿಮಾದ ಕುರಿತು ಮಾತು ಹೊರಳಿಕೊಂಡಿದ್ದೇ ವಿಶ್ವಾಸ ತುಂಬಿಕೊಂಡಿತು. ‘ಕಳೆದ ಹತ್ತು ವರ್ಷಗಳ ನಿರ್ದೇಶನದ ಬದುಕಿನಲ್ಲಿ ‘ಟೈಗರ್‌ ಗಲ್ಲಿ’ ತುಂಬ ಮಹತ್ವದ ಸಿನಿಮಾ.

ಸಾಮಾನ್ಯವಾಗಿ ನನ್ನ ಚಿತ್ರಗಳು ಒನ್‌ ಸೈಡೆಡ್‌ ಆಗಿರುತ್ತಿದ್ದವು. ಅಲ್ಲಿ ಮನರಂಜನೆಗೆ ಅಷ್ಟೊಂದು ಒತ್ತು ಇರುತ್ತಿರಲಿಲ್ಲ. ಒಂದು ಎಮೋಶನ್‌ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದೆ. ಆದರೆ ನಿರ್ಮಾಪಕ ಎನ್‌. ಕುಮಾರ್‌ ಅವರು ಈ ಕೊರತೆಯ ಕುರಿತು ಹೇಳಿದರು. ಅವರ ಜತೆ ಒಂದು ದಿನ ಎರಡು ಗಂಟೆ ಕೂತು ಚರ್ಚಿಸಿದೆ. ನಂತರ ‘ಟೈಗರ್‌ ಗಲ್ಲಿ’ ಚಿತ್ರಕಥೆಯನ್ನು ಬರೆದುಕೊಂಡು ಹೋಗಿ ಕೊಟ್ಟೆ. ಅವರು ಅದನ್ನು ಓದಿ ತುಂಬ ಖುಷಿಪಟ್ಟರು. ಈ ಕಥೆ ಹೀಗೆ ಇರಲಿ. ಯಾರು ಏನೇ ಹೇಳಿದರೂ ಬದಲಾಯಿಸಬೇಡಿ ಎಂದು ಬೆನ್ನು ತಟ್ಟಿದರು’ – ಹೀಗೆ ಟೈಗರ್‌ಗಲ್ಲಿ ಹುಟ್ಟಿಕೊಂಡ ಬಗೆಯನ್ನು ವಿವರಿಸಿದರು ರವಿ.

ಆದರೆ ಚಿತ್ರಕಥೆ ಬರೆದದ್ದಕ್ಕಿಂತ ನಾಯಕನಟನನ್ನು ಹುಡುಕುವುದು ಅವರಿಗೆ ಇನ್ನಷ್ಟು ಕಷ್ಟವಾಗಿ ಪರಿಣಮಿಸಿತ್ತಂತೆ. ಮೂರು ಜನಪ್ರಿಯ ನಾಯಕನಟರನ್ನು ಸಂಪರ್ಕಿಸಿದಾಗಲೂ ಚಿತ್ರಕಥೆ ಬದಲಿಸಿದರೆ ಮಾತ್ರ ನಟಿಸುವುದಾಗಿ ಷರತ್ತು ಹಾಕಿದರಂತೆ. ಆ ನಾಯಕನಟರು ಯಾರು ಎನ್ನುವುದನ್ನು ಮಾತ್ರ ಅವರು ಹೇಳಲಿಲ್ಲ. ‘ಅವರು ಯಾರೇ ಆಗಿದ್ದರೂ ಅಕ್ಟೋಬರ್‌ 27ರ (ಟೈಗರ್‌ ಗಲ್ಲಿ ಬಿಡುಗಡೆಯ ದಿನ) ಸಂಜೆ ತಾವು ಈ ಅವಕಾಶವನ್ನು ಕಳೆದುಕೊಂಡೆವೆಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಾರೆ’ ಎಂದು ತುಂಬು ವಿಶ್ವಾಸದಿಂದಲೇ ಹೇಳಿದರು.

ಸತೀಶ್‌ ಅವರಿಗೆ ಕಥೆ ಹೇಳಿದಾಗ ಅವರು ಕಥೆಯನ್ನು ತುಂಬ ಇಷ್ಟಪಟ್ಟು, ‘ನನಗೆ ಈ ಪಾತ್ರದಲ್ಲಿ ನಟಿಸಲು ಸಾಧ್ಯವಾ?’ ಎಂದು ಕೊಂಚ ಆತಂಕದಿಂದಲೇ ಪ್ರಶ್ನಿಸಿದರಂತೆ. ‘ಕಥೆ ಇಷ್ಟವಾಯ್ತಲ್ಲಾ. ಮುಂದಿನದು ನನಗೆ ಬಿಡಿ’ ಎಂದು ಅವತ್ತು ನಿರ್ದೇಶಕರು ಹೇಳಿದ ಧೈರ್ಯದ ಪರಿಣಾಮವಾಗಿ ಇಂದು ಟೈಗರ್‌ ಗಲ್ಲಿ ಘರ್ಜಿಸಲು ಸಿದ್ಧವಾಗಿ ನಿಂತಿದೆ.

ಈ ಹುಲಿಘರ್ಜನೆಯ ಹಿಂದೆ ರವಿ ಶ್ರೀವತ್ಸ ನೋವಷ್ಟೇ ಅಲ್ಲ, ಸತೀಶ್‌ ರೋಷವೂ ಇದೆ ಎಂಬುದು ತಿಳಿದಿದ್ದು ಅವರು ಮಾತಿಗೆ ತೊಡಗಿದಾಗಲೇ.

‘ಇದು ನನ್ನ ಸೆಕೆಂಡ್‌ ಇನ್ನಿಂಗ್ಸ್‌’ ಎಂದು ಹೇಳುತ್ತಲೇ ಸತೀಶ್‌ ಸ್ವಲ್ಪ ಹೊತ್ತು ಸುಮ್ಮನಾಗಿ ರಾಕೆಟ್‌ ನೆಲಕಚ್ಚಿದ ಕಹಿನೆನಪಿಗೆ ಹೊರಳಿದರು. ‘ಕೋಟ್ಯಂತರ ರೂಪಾಯಿ ಹಣ ಹಾಕಿ ರಾಕೆಟ್‌ ಸಿನಿಮಾ ಮಾಡಿದೆ. ಹಣ ಕಳೆದುಕೊಂಡೆ. ಅದಕ್ಕಾಗಿ ತುಂಬ ಕಷ್ಟಪಟ್ಟಿದ್ದೆ. ಸಿನಿಮಾ ಸೋತಾಗ ಒಂದು ತಿಂಗಳು ಮನೆಗೂ ಹೋಗದೇ ಆಫೀಸಿನಲ್ಲೇ ಕೂತು ಅತ್ತಿದ್ದೇನೆ. ಆಗಲೇ ನಾನು ಸಿನಿಮಾವನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದು ತಿಳಿದಿದ್ದು. ಜಗತ್ತಿನ ಬೇರೆ ಬೇರೆ ಭಾಷೆ ದೇಶಗಳ ಅತ್ಯುತ್ತಮ ಸಿನಿಮಾಗಳನ್ನು ನೋಡಿದೆ. ನಾನು ಎಲ್ಲಿದ್ದೇನೆ ಎಂದು ಕೇಳಿಕೊಂಡೆ. ಅದೊಂದು ದುಃಖಕರ ಸಂದರ್ಭ. ಆ ಸಮಯದಲ್ಲಿ ನನಗೆ ಬಂದ ಮೊದಲ ಅವಕಾಶ ‘ಬ್ಯೂಟಿಫುಲ್‌ ಮನಸುಗಳು’. ಅದಾದ ನಂತರ ಬಂದ ಸಿನಿಮಾವೇ ‘ಟೈಗರ್‌ ಗಲ್ಲಿ’.

ನಾನು ಕಷ್ಟದಲ್ಲಿದ್ದಾಗ ಕೈ ಹಿಡಿದ ಸಿನಿಮಾ ಇದು. ರಾಕೆಟ್‌ನಲ್ಲಿ ಆದ ನೋವು, ಅವಮಾನ ಎಲ್ಲವನ್ನೂ ಒಕ್ಕೂಡಿಸಿಕೊಂಡು ಗೆಲ್ಲಲೇಬೇಕು. ಗೆಲುವಿಗಾಗಿ ಏನು ಬೇಕಾದರೂ ಮಾಡ್ತೀನಿ ಎಂಬ ರೋಷದಲ್ಲಿಯೇ ಈ ಸಿನಿಮಾ ಮಾಡಿದ್ದೇನೆ. ಅದಕ್ಕಾಗಿ ಜ್ವರ ಬಂದಾಗ, ಗಾಯಗಳಾದಾಗ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಹಗಲು ರಾತ್ರಿ ಕೆಲಸ ಮಾಡಿದ್ದೇವೆ. ಟೈಗರ್‌ ಗಲ್ಲಿ ನಮ್ಮೆಲ್ಲರ ಛಲದ ಫಲ. ಒಂದು ರೀತಿಯಲ್ಲಿ ನುಗ್ಗಿ ಹೊಡಿಯುವುದು ಅಂತಾರಲ್ಲಾ ಹಾಗೆ ಮಾಡಿದ ಸಿನಿಮಾ. ನಾವು ಬಡವರ ಮಕ್ಕಳು. ಸಿನಿಮಾವನ್ನೇ ನಂಬಿರುವವರು. ಇಂದಲ್ಲಾ ನಾಳೆ ಬಡತನವನ್ನು ಮೀರಿ ಗೆದ್ದೇ ಗೆಲ್ತೀವಿ’ ಎಂದು ಸಿನಿಮಾ ಡೈಲಾಗ್‌ನಷ್ಟೇ ರೋಷದಿಂದ ಮಾತುದುರಿಸುತ್ತ ಹೋದರು ಸತೀಶ್‌.

ಹನ್ನೆರಡು ವರ್ಷಗಳ ನಂತರ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ‘ಕನ್ನಡದವರು ಯಾರೋ ನನ್ನನ್ನು ಒಪ್ಪಿಕೊಳ್ಳಲೇ ಇಲ್ಲ. ಆದರೆ ತಮಿಳಿನವರು ಅದ್ಭುತವಾಗಿ ಸ್ವಾಗತಿಸಿದರು. ಕನ್ನಡ ಚಿತ್ರದಲ್ಲಿ ನಟಿಸಬಾರದು ಎಂದು ನಿರ್ಧರಿಸಿದ್ದೆ. ಆದರೆ ಈ ಕಥೆ ಕೇಳಿದಾಗ ನಟಿಸದೇ ಇರಲಾಗಲಿಲ್ಲ. ಹಾಗಾಗಿ ಒಪ್ಪಿಕೊಂಡೆ. ಕೊನೆಯ ಇಪ್ಪತ್ತು ನಿಮಿಷಗಳಲ್ಲಿ ಬರುವುದಾದರೂ ತುಂಬ ಮುಖ್ಯವಾದ ಪಾತ್ರ ಇದು’ ಎಂದರು ಪೂಜಾ. ಪೊಲೀಸ್‌ ಅಧಿಕಾರಿಯಾಗಿ ಮೈಸೂರಿನ ಹುಡುಗಿ ರೋಶಿನಿ ಪ್ರಕಾಶ್‌ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಭಾವನಾ ಕೂಡ ಇನ್ನೋರ್ವ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ.

ಗಿರಿರಾಜ್‌, ಅಯ್ಯಪ್ಪ, ಶಿವಮಣಿ, ಯಮುನಾ ಶ್ರೀನಿಧಿ, ಸಾಯಿಕೃಷ್ಣ ಮುಂತಾದವರು ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಎನ್‌. ಕುಮಾರ್ ಅವರ ಮಗ ಯೋಗೀಶ್‌ ಕುಮಾರ್‌ ಈ ಚಿತ್ರದ ಮೂಲಕ ನಿರ್ಮಾಪಕನಾಗುತ್ತಿದ್ದಾರೆ. ಇದೇ ತಿಂಗಳ 27ರಂದು ಬಿಡುಗಡೆಯಾಗುತ್ತಿರುವ ‘ಟೈಗರ್‌ ಗಲ್ಲಿ’ಯ ವಿತರಣೆಯ ಜವಾಬ್ದಾರಿಯನ್ನು ಜಾಕ್‌ ಮಂಜು ವಹಿಸಿಕೊಂಡಿದ್ದಾರೆ.

Post Comments (+)