ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೆಲ್ಲ ನಟರು

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘ಈ ಜಗವೇ ಒಂದು ರಂಗಮಂದಿರ. ಇಲ್ಲಿ ಎಲ್ಲ ಗಂಡಸರು, ಹೆಂಗಸರು ನಟ-ನಟಿಯರು’ ಎಂಬುದು ಜಗತ್ತಿನ ಮಹಾನ್‌ ನಾಟಕಕಾರ ಷೇಕ್ಸ್‌ಪಿಯರನ ಪ್ರಸಿದ್ಧ ಮಾತು. ದೈನಂದಿನ ಜೀವನದಲ್ಲಿ ನಾವು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಲೇ ಇರುತ್ತೇವೆ. ಹೀಗಿರುವಾಗ ಪ್ರಕಾಶ ರೈ, ‘ಪ್ರಧಾನಿ ನನಗಿಂತ ಒಳ್ಳೆಯ ನಟ’ ಅಂದರೆ ಅದು ಮೋದಿ ಅವರನ್ನು ಪ್ರಶಂಸಿಸಿದಂತೆಯೇ; ಅವಹೇಳನ ಮಾಡಿದಂತಲ್ಲ.

ಹಾಗೆ ನೋಡಿದರೆ ಜಗತ್ತಿನ ರಾಜಕಾರಣಿಗಳೆಲ್ಲ ದೊಡ್ಡ ನಟರೇ. ಸಮರ್ಪಕ ನಟನೆ ಬಾರದೆ ಅವರು ರಾಜಕೀಯ ನೇತಾರರು, ರಾಷ್ಟ್ರದ ಮುಂದಾಳು ಆಗಲಾರರು. ಅವರ ಮಾತಿನ ಲಹರಿ, ಆಂಗಿಕ ಪ್ರದರ್ಶನಗಳು, ಪ್ರಾಸಂಗಿಕ ಕಣ್ಣೀರು, ನಟನಾ ಕೌಶಲ ಜನಮನ ಮುಟ್ಟಲು ಅತೀ ಅವಶ್ಯಕ.

ಮೌನವೂ ನಟನೆಯ ಒಂದು ಭಾಗ. ಬಹುಶಃ ಮಹಾತ್ಮ ಗಾಂಧಿ ಅವರಂಥ ನಾಯಕರಿಗೆ ನಟನೆ ಗೊತ್ತಿದ್ದಿಲ್ಲ. ಅವರು ‘ಗೌಪ್ಯ ಅನ್ನುವುದು ಪಾಪ... ಮುಕ್ತ ನಡವಳಿಕೆ ಎಲ್ಲವೂ ನೈತಿಕ...’ಎಂದು ಭಾವಿಸಿದವರು, ಬದುಕಿದವರು. ಅವರ ಮೌನವ್ರತ ಏನಿದ್ದರೂ ಅದು ಅಂತರಂಗದ ವಿಹಾರ.

ನಾವು ಇತ್ತೀಚೆಗೆ ಅಮೆರಿಕದ ನ್ಯೂಯಾರ್ಕ್‌ ನಗರಕ್ಕೆ ಭೇಟಿ ನೀಡಿದಾಗ ಅಲ್ಲಿನ ಪ್ರಸಿದ್ಧ ಟೈಂ ಸ್ಕ್ವೇರ್‌ನಲ್ಲಿ ನಿತ್ಯ ಸಂಜೆಯಾಗುತ್ತಿದ್ದಂತೆ ನಡೆಯುವ ನೂರೆಂಟು ಬಗೆಯ ವಿಡಂಬನೆಗಳು, ಬೀದಿ ನಾಟಕಗಳು, ಅಶ್ಲೀಲ ಪ್ರದರ್ಶನಗಳು, ವಾದ್ಯವೃಂದ, ಜಗತ್ತಿನ ಆಗುಹೋಗುಗಳ ಕುರಿತು ಪರ–ವಿರೋಧದ ಪ್ರದರ್ಶನಗಳು, ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಎಗ್ಗಿಲ್ಲದೆ ನಡೆಯುವುದನ್ನು ಗಮನಿಸಿದೆವು.

ಒಬ್ಬ ವಿದೂಷಕ ತನ್ನ ಮೈಗೆ ಬಣ್ಣ ಬಳಿದುಕೊಂಡು ‘ಟ್ರಂಪ್‌ ಈಸ್‌ ಮೈ ಫಾದರ್’ ಎಂದು ಬೋರ್ಡ್‌ ತಗುಲಿಸಿಕೊಂಡು ಜನರನ್ನು ರಂಜಿಸುತ್ತಿದ್ದ. ಅದಕ್ಕೆ ಅಲ್ಲಿದ್ದ ಪೊಲೀಸರೂ ಸೇರಿ ಯಾರದೂ ಆಕ್ಷೇಪ ಇರಲಿಲ್ಲ. ಸಾರ್ವಜನಿಕರು ಆ ಎಲ್ಲ ತಮಾಷೆಗಳನ್ನು ನೋಡಿ ನಗುತ್ತಿದ್ದರು.

ರಾಜಕೀಯ, ಸಾರ್ವಜನಿಕ ವ್ಯಕ್ತಿಗಳ ಕುರಿತು ಟೀಕೆ, ವಿಡಂಬನೆಗೆ ಆಕ್ಷೇಪ ಸಲ್ಲದು. ನಾಳೆ ರಾಜಕೀಯ ಆಗುಹೋಗುಗಳ ಕುರಿತು ಕಾರ್ಟೂನ್‍ಗಳಿಗೂ ವಿರೋಧ ವ್ಯಕ್ತವಾಗಬಹುದು. ನಮ್ಮ ರಾಜಕೀಯ ನಾಯಕರು ಒಬ್ಬರಿಗೊಬ್ಬರು ಬಯ್ದುಕೊಳ್ಳುವುದರ ಮುಂದೆ ರೈ ಪ್ರತಿಕ್ರಿಯೆ ಯಾವ ಲೆಕ್ಕ. ಅದು ಬಹಳ ಜಾಣ ಪ್ರತಿಕ್ರಿಯೆ. ಪ್ರಜಾಪ್ರಭುತ್ವದ ಪ್ರಬುದ್ಧತೆ ಅನ್ನುವುದು ಇಂಥ ಎಲ್ಲವುಗಳನ್ನೂ ಮೀರಿದ ಪಕ್ವತೆ.
-ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT