ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುನೆಸ್ಕೊದಿಂದ ಹೊರಬಂದ ಅಮೆರಿಕ

Last Updated 12 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಇಸ್ರೇಲ್ ವಿರೋಧಿ ನೀತಿ ಹೊಂದಿದೆ ಎಂದು ಆರೋಪಿಸಿರುವ ಅಮೆರಿಕವು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಘಟನೆ–’ಯುನೆಸ್ಕೊ’ದಿಂದ ಹೊರಬರುವ ನಿರ್ಧಾರ ಪ್ರಕಟಿಸಿದೆ.

2018ರ ಡಿಸೆಂಬರ್‌31ರಿಂದ ಈ ನಿರ್ಧಾರ ಜಾರಿಗೆ ಬರಲಿದ್ದು, ಅಲ್ಲಿಯವರೆಗೂ ಅಮೆರಿಕವು ಯುನೆಸ್ಕೊದ ಸದಸ್ಯ ರಾಷ್ಟ್ರವಾಗಿ ಇರಲಿದೆ.

‘ಇದು ಲಘುವಾಗಿ ತೆಗೆದುಕೊಂಡ ನಿರ್ಧಾರವಲ್ಲ. ಯುನೆಸ್ಕೊದಲ್ಲಿ ಇಸ್ರೇಲ್ ಬಗ್ಗೆ ತಳೆಯುತ್ತಿರುವ ಪಕ್ಷಪಾತದ ನಿಲುವು ಹಾಗೂ ಸಂಘಟನೆ ಬಗ್ಗೆ ಅಮೆರಿಕಕ್ಕೆ ಇರುವ ಕಳಕಳಿಯನ್ನು ಈ ನಿರ್ಧಾರ ಪ್ರತಿಬಿಂಬಿಸುತ್ತದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಹೀದರ್ ನೌರ್ಟ್ ಅವರು ಹೇಳಿದ್ದಾರೆ.

ಯುನೆಸ್ಕೊ ನಿರ್ದೇಶಕರಾದ ಇರಿನಾ ಬೊಕಾವಾ ಅವರಿಗೆ ಅಮೆರಿಕದ ನಿರ್ಧಾರವನ್ನು ವಿದೇಶಾಂಗ ಇಲಾಖೆಯು ತಿಳಿಸಿದೆ. ಅಲ್ಲದೆ ಯುನೆಸ್ಕೊದಲ್ಲಿ ಶಾಶ್ವತ ವೀಕ್ಷಕ ಸಮಿತಿಯೊಂದನ್ನು ಸ್ಥಾಪಿಸಬೇಕು ಎಂದು ಅದು ಆಗ್ರಹಿಸಿದೆ.

‘ಯುನೆಸ್ಕೊದಲ್ಲಿ ಸದಸ್ಯವಲ್ಲದ ವೀಕ್ಷಕ ದೇಶವಾಗಿ (ನಾನ್ ಮೆಂಬರ್) ಉಳಿಯುವ ಇಚ್ಛೆಯನ್ನು ಅಮೆರಿಕ ವ್ಯಕ್ತಪಡಿಸಿದೆ. ವಿಶ್ವ ಪರಂಪರೆ ರಕ್ಷಣೆ, ಪತ್ರಿಕಾ ಸ್ವಾತಂತ್ರ್ಯದ ಸಮರ್ಥನೆ, ಶಿಕ್ಷಣ ಮತ್ತು ಶೈಕ್ಷಣಿಕ ಸಹಯೋಗ ಉತ್ತೇಜನದಂತಹ ಪ್ರಮುಖ ವಿಷಯಗಳ ಬಗ್ಗೆ ಅಮೆರಿಕದ ನಿಲುವು, ದೃಷ್ಟಿಕೋನ ಹಾಗೂ ಅಭಿಪ್ರಾಯ ಹಂಚಿಕೊಳ್ಳಲು ಅಮೆರಿಕ ಬಯಸಿದೆ’ ಎಂದು ನೌರ್ಟ್ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಯುನೆಸ್ಕೊ 1946ರಲ್ಲಿ ಕಾರ್ಯಾರಂಭ ಮಾಡಿತ್ತು. ವಿಶ್ವ ಪಾರಂಪರಿಕ ತಾಣಗಳನ್ನು ಗೊತ್ತುಪಡಿಸುವ ವಿಚಾರದಲ್ಲಿ ಇದು ಗುರುತಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT