ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಖು ಹುಳು ನಿಯಂತ್ರಣಕ್ಕೆ ರೈತರ ಒಗ್ಗಟ್ಟು ಅಗತ್ಯ

Last Updated 13 ಅಕ್ಟೋಬರ್ 2017, 6:05 IST
ಅಕ್ಷರ ಗಾತ್ರ

ಮೂಡಿಗೆರೆ: ಕಾಫಿ ಬೆಳೆಯನ್ನು ಕಾಡುತ್ತಿರುವ ಶಂಖು ಹುಳುವಿನ ನಿಯಂತ್ರಣಕ್ಕೆ ಕಾಫಿ ಬೆಳೆಗಾರರು ಒಗ್ಗೂಡಿ ಕಾರ್ಯಾಚರಣೆ ನಡೆಸಬೇಕು ಎಂದು ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ರಘುರಾಮುಲು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಗೋಣಿಬೀಡು ಕಾಫಿ ಮಂಡಳಿಯಿಂದ ಹೊಯ್ಸಳಲು ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ಶಂಖುಹುಳು ನಿಯಂತ್ರಣ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಬೆಳೆಗೆ ಹಾನಿ ಮಾಡುವ ಯಾವುದೇ ಕೀಟವನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡುವುದು ಅಸಾಧ್ಯ. ಬದಲಾಗಿ ಒಂದು ಪ್ರದೇಶದ ರೈತರೆಲ್ಲರೂ ಒಗ್ಗೂಡಿ ಕಾರ್ಯಾಚರಣೆ ನಡೆಸಿದಾಗ ಆ ಕೀಟವನ್ನು ನಿಯಂತ್ರಣಕ್ಕೆ ತರಬಹುದು ಎಂದರು.

ಕಾಫಿ ಮಂಡಳಿ ಅಧ್ಯಕ್ಷ ಬೋಜೇಗೌಡ ಮಾತನಾಡಿ, ‘ಶಂಖು ಹುಳು ಬಾಧೆಯ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಅನಂತ್‌ಕುಮಾರ್‌ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೀಟ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ನೆರವನ್ನು ಕೋರಲಾಗಿದೆ. ಕಾಫಿ ಬೆಳೆಗಾರರು ಹಿಂದೆ ಇಂತಹ ಕೀಟ ಬಾಧೆಗಳನ್ನು ಧೈರ್ಯವಾಗಿ ಎದುರಿಸಿದ್ದು, ಪ್ರಸ್ತುತ ಸಮಯದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ, ಕೀಟ ನಿಯಂತ್ರಣಕ್ಕೆ ಮುಂದಾಗಬೇಕು’ ಎಂದರು.

ಕಾಫಿ ಮಂಡಳಿ ಸದಸ್ಯ ಎಂ.ಎನ್‌. ಕಲ್ಲೇಶ್‌ ಮಾತನಾಡಿ, ‘ಶಂಖು ಹುಳು ನಿಯಂತ್ರಣ ಪರಿಕರಗಳನ್ನು ಶೇ 90 ರಿಯಾಯಿತಿಯಲ್ಲಿ ನೀಡಲಾಗುತ್ತಿದ್ದು, ಕಾಫಿ ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ಮಲೆನಾಡಿನಲ್ಲಿ 2015ರಲ್ಲಿ ಕಾಣಿಸಿಕೊಂಡ ಶಂಖು ಹುಳುವಿನ ಉಪಟಳ ಪ್ರಸ್ತುತ ವರ್ಷದಲ್ಲಿ ಹೆಚ್ಚಳವಾಗಿದೆ. ಕಾಫಿ ಮಂಡಳಿ ಅನೇಕ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಹುಳುವಿನ ನಿಯಂತ್ರಣ ಕ್ರಮಕ್ಕಾಗಿ ಬೆಳೆಗಾರರ ಸಂಘವು ₹ 10 ಸಾವಿರ ನೆರವು ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್‌. ಜಯರಾಂ, ಗೋಣಿಬೀಡು ರೋಟರಿ ಸಂಸ್ಥೆ ಅಧ್ಯಕ್ಷ ಚಂದ್ರೇಗೌಡ, ತಿಮ್ಮರಾಜ್‌, ಟಿ.ಸಿ. ಹೇಮಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT