ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಗಳಲ್ಲಿ ನಗರದ ನೆನಪು

Last Updated 13 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಿಕಿ ಕೇಜ್ ನಿಮ್ಮ ದೊಡ್ಡ ಅಭಿಮಾನಿಯಂತೆ?

ರಿಕಿ ಅವರ ‘ಶಾಂತಿ  ಸಂಸಾರ’ ಆಲ್ಬಂನ ಒಂದು ಹಾಡನ್ನು ನಾನೂ ಹಾಡಿದ್ದೇನೆ. 2015ರಲ್ಲಿ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ನಾವಿಬ್ಬರು ಭೇಟಿಯಾದೆವು. ಇದಾದ ಬಳಿಕ ಅಮೆರಿಕದಲ್ಲಿ ನಡೆದ ವಿಶ್ವ ಸಂಗೀತ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾರ್ಯಕ್ರಮ ನೀಡಿದ್ದೆವು. ಇದು ವಿಶ್ವದಾದ್ಯಂತ ಪ್ರಸಾರವಾಗುವ ರೇಡಿಯೊ ಕಾರ್ಯಕ್ರಮ. ಕಾರ್ಯಕ್ರಮ ಪ್ರತಿ ವರ್ಷ ಮೇನಲ್ಲಿ ನಡೆಯುತ್ತದೆ. ಮೊದಲ ಭೇಟಿಯಲ್ಲಿಯೇ ರಿಕಿ ಕೇಜ್ ನನ್ನ ದೊಡ್ಡ ಅಭಿಮಾನಿ ಎಂಬುದು ಗೊತ್ತಾಯಿತು.

ನಿಮ್ಮ ಪಾಲಿಗೆ ಸಂಗೀತ ಅಂದ್ರೆ ಏನು?

ನಾನು ಯುರೋಪಿಯನ್, ಪಾಶ್ಚಾತ್ಯ , ಶಾಸ್ತ್ರೀಯ ಸಂಗೀತವನ್ನು ಕೇಳುತ್ತಾ ಬೆಳೆದವಳು. ಸಂಗೀತ ಎಂಬುದು ಭಾವನೆ ಸ್ಫುರಿಸುವ ಮಾಧ್ಯಮ. ಇದು ತಪಸ್ಸು. ನಾನು ಸಂಗೀತದಲ್ಲಿ ಸ್ನಾತಕೋತ್ತರ ಕೋರ್ಸ್ ಮುಗಿಸಿದ ಮೇಲೆ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಿದೆ.  ಮನಸ್ಸನ್ನು ಶಾಂತಗೊಳಿಸುವ ಸಂಗೀತವನ್ನು ಯಾವಾಗಲೂ ಕೇಳುತ್ತಿರುತ್ತೇನೆ. ಸಂಗೀತಗಾರರು ಸ್ವರಗಳ ನಾದವನ್ನು ಆಲಿಸುವುದು ಮುಖ್ಯ. ಸಂಗೀತ ಅಂದ್ರೆ ಮನಸ್ಸಿಗೆ ಶಾಂತಿ, ಸಮಾಧಾನ ನೀಡುವ ಮಾರ್ಗ. ಇದಲ್ಲದೇ ನಾನು ಯಾವಾಗಲೂ ಸಿನಿಮಾ, ಸಂಗೀತದ ಕೆಲಸ ಮಾಡುತ್ತಿರುತ್ತೇನೆ.

ನಿಮಗೆ ಹೆಸರು ತಂದುಕೊಟ್ಟ ಚಿತ್ರ ‘ಸಿಸ್ಟರ್‌ ಆ್ಯಕ್ಟ್‌’. ಆ ಬಗ್ಗೆ ಹೇಳಿ..

‘ಸಿಸ್ಟರ್‌ ಆ್ಯಕ್ಟ್‌’ ಚಿತ್ರಕ್ಕೆ ನಾನು ಸಂಗೀತ ನಿರ್ದೇಶನ ಮಾಡಿದ್ದು. ಇದು ಇಂಗ್ಲಿಷ್‌ ಭಾಷೆಯಲ್ಲಿ ಬಂದ ಅತ್ಯುತ್ತಮ ಚಿತ್ರ ಎಂದು ಈಗಲೂ ಗುರುತಿಸಿಕೊಳ್ಳುತ್ತಿದೆ. ಎರಡು ತಿಂಗಳ ಹಿಂದೆಯಷ್ಟೇ ಆ ಸಿನಿಮಾದ 25ನೇ ವರ್ಷಾಚರಣೆ ಆಚರಿಸಿದೆವು.

ಭಾರತೀಯ ಸಂಗೀತವನ್ನು ಕೇಳುತ್ತೀರಾ?

ಜಗತ್ತಿನ ಎಲ್ಲಾ ಪ್ರಕಾರದ ಸಂಗೀತ ಕೇಳಬೇಕು ಎಂಬುದು ನನ್ನ ಆಸೆ. ಭಾರತೀಯ ಶಾಸ್ತ್ರೀಯ ಸಂಗೀತ ನನಗೆ ತುಂಬ ಇಷ್ಟ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಆಗಾಗ ಕೇಳುತ್ತಿರುತ್ತೇನೆ. ಭಾರತೀಯ ಸಂಗೀತದ ವಿವಿಧ ರಾಗಗಳು, ಪ್ರಕಾರಗಳು ಇಲ್ಲಿನ ಸಂಗೀತದ ಶ್ರೀಮಂತ ಪರಂಪರೆಯನ್ನು ತಿಳಿಸುತ್ತವೆ. ಇಲ್ಲಿ ಒಂದು ರಾಗದಿಂದ ಮತ್ತೊಂದು ರಾಗಕ್ಕೆ ಭಾರಿ ವ್ಯತ್ಯಾಸವಿದೆ. ಆ ಎರಡು ರಾಗಗಳ ನಡುವಿನ ಅಂತರ ನನಗೆ ಯಾವಾಗಲೂ ಕೌತುಕ. ಇಲ್ಲಿನ ಸಂಗೀತದ ಆಕರ್ಷಣೆ ಅದೇ. ಸ್ವರಗಳ  ಏರಿಳಿತವೂ ನನಗೆ ಇಷ್ಟ.

ಭಾರತೀಯ ಸಂಗೀತ ನಿಮ್ಮ ಸಂಗೀತದ ಮೇಲೆ ಪ್ರಭಾವಿಸಿದೆಯೇ?

ನನ್ನ  ಆಲ್ಬಂ ‘ಕಲರ್ಸ್‌ ಆನ್ ಮಿ‘ಯಲ್ಲಿ ರಿಕಿ ಕೇಜ್ ಇದರಲ್ಲಿ ಒಂದು ಹಾಡು ಹಾಡಿದ್ದಾರೆ. ಇದರಲ್ಲಿ ಎಲ್ಲಾ ಬಗೆಯ ಸಂಗೀತ ಪ್ರಕಾರಗಳಿವೆ. ಹನ್ನೊಂದು ಹಾಡುಗಳು ಇವೆ. ಭಾರತೀಯ ಸಂಗೀತ ಹಿಂದೂಸ್ತಾನಿ ಸಂಗೀತವೂ ಇದೆ. ಇದರಲ್ಲಿ ವಾದ್ಯ ಸಂಗೀತವೂ ಇದೆ. ಅಮೆರಿಕದಲ್ಲಿ ಇದು ಹೊಸ ಪ್ರಯೋಗ.

ಮುಂದಿನ ಯೋಜನೆ?

ಮುಂದಿನ ವರ್ಷದಲ್ಲಿ ಮಹಿಳಾ ಕಲಾವಿದರದ್ದೇ ಸಂಗೀತ ಆಲ್ಬಂ ಮಾಡಲು ಹೊರಟಿದ್ದೇನೆ. ಅಮೆರಿಕ, ದಕ್ಷಿಣ ಆಫ್ರಿಕಾ, ಭಾರತ ಸೇರಿದಂತೆ 12 ರಾಷ್ಟ್ರಗಳ ಮಹಿಳಾ ಸಾಧಕರು ಇದರಲ್ಲಿ ಕೆಲಸ ಮಾಡಲಿದ್ದಾರೆ. ಬೆಂಗಳೂರಿನ ಸಿತಾರಾ ಕಲಾವಿದೆಯೊಬ್ಬರು ಈ ತಂಡದಲ್ಲಿದ್ದಾರೆ. ಇದು ನನ್ನ ಬಹುವರ್ಷಗಳ ಕನಸು.

ನಿಮ್ಮ ವೃತ್ತಿಜೀವನದ ಆಪ್ತ ಕ್ಷಣ?

ಹಿಲರಿ ಕ್ಲಿಂಟನ್ ಅವರನ್ನು ಭೇಟಿ ಮಾಡಿದ್ದು. ಸಿಸ್ಟರ್ ಆ್ಯಕ್ಟ್‌ ಸಿನಿಮಾದ 25ನೇ ವರ್ಷದ ಸಂಭ್ರಮಾಚರಣೆಗಾಗಿ ಬಂದಿದ್ದರು. ತುಂಬ ಚುರುಕಿನ ವ್ಯಕ್ತಿ ಅವರು. ಒಂದಿಷ್ಟು ಅಹಂಕಾರ ಅವರಿಗಿಲ್ಲ. ಅವರು ಪ್ರೀತಿಯಿಂದ ತಬ್ಬಿಕೊಂಡಿದ್ದನ್ನು ಮರೆಯಲು ಸಾಧ್ಯವಿಲ್ಲ.

ಬೆಂಗಳೂರಿನ ಬಗ್ಗೆ ಹೇಳಿ

ವಾವ್‌. ಇಲ್ಲಿರುವರು ಹೃದಯವಂತರು. ಎರಡನೇ ಬಾರಿ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿನ ಮಹಿಳೆಯರು ಸಬಲೆಯರು, ಆಭರಣಪ್ರಿಯರು. ಇಲ್ಲಿಯವರ ಜೀವನಪ್ರೀತಿ ತುಂಬ ಇಷ್ಟವಾಯಿತು. ಕಳೆದ ಬಾರಿ ಇಲ್ಲಿಗೆ ಬಂದಿದ್ದಾಗ 14 ದೀಪಗಳನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗಿದ್ದೆ. ಪ್ರತಿ ಸಂಜೆ ಅವುಗಳನ್ನು ಬೆಳಗಿಸುತ್ತೇನೆ. ಆಗ ಬೆಂಗಳೂರು ನೆನಪಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT