ಗುರುವಾರ , ಸೆಪ್ಟೆಂಬರ್ 19, 2019
28 °C

ಪೂರ್ಣಗೊಳ್ಳದ ರಸ್ತೆ ಕಾಮಗಾರಿ

Published:
Updated:

ಯಳಂದೂರು: ಪಟ್ಟಣದ 7ನೇ ವಾರ್ಡ್‌ ವ್ಯಾಪ್ತಿಯ ಆರಾಧ್ಯರ ಬೀದಿಯಿಂದ ಛತ್ರದ ಬೀದಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹಣ ಬಿಡುಗಡೆಯಾಗಿ 5 ವರ್ಷ ಕಳೆದರೂ ಕಾಮಗಾರಿ ಆರಂಭಗೊಂಡಿಲ್ಲ. ಇದರಿಂದ ಜನ ಪರಿತಪಿಸುವಂತಾಗಿದೆ.

2012ನೇ ಸಾಲಿನ ಎಸ್ ಎಫ್‌ ಸಿ ಅನುದಾನದಲ್ಲಿ ₹ 2 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಟೆಂಡರ್ ಕೂಡ ಆಗಿದೆ. ಹಿಂದಿನ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ನಿರ್ಮಿಸುವಂತೆ ಸೂಚನೆ ನೀಡಿದ್ದಾರೆ. ನವೆಂಬರ್ 2016ರಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿ ಕಾಮಗಾರಿ ಬಗ್ಗೆ ಮಾಹಿತಿ ಕಲೆ ಹಾಕಿ, ಕ್ರಮ ವಹಿಸುವಂತೆ ಸೂಚನೆ ನೀಡಿದ್ದರು.

ಜಿಲ್ಲಾಧಿಕಾರಿಗಳ ಫೋನ್ ಇನ್ ಕಾರ್ಯಕ್ರಮದಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು. ಆದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ರಸ್ತೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ ಎನ್ನುತ್ತಾರೆ ನಿವಾಸಿ ಕೆ.ಎಸ್. ನಾಗಭೂಷಣ.

ರಸ್ತೆ ಹಿಂಭಾಗದಲ್ಲಿ ಟಿಎಪಿಸಿಎಂಎಸ್‌ ಗೋದಾಮು ಇದೆ. ಕೆಲವರು ಅಕ್ರಮವಾಗಿ ರಸ್ತೆಯ ಜಾಗವನ್ನು ಅತಿಕ್ರಮಿಸಿದ್ದಾರೆ. ಹಾಗಾಗಿ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘ರಸ್ತೆ ನಿರ್ಮಾಣಕ್ಕೆ ಪಂಚಾಯಿತಿ ವತಿಯಿಂದ ಹಣ ಬಿಡುಗಡೆಯಾಗಿದೆ. 13 ಅಡಿ ರಸ್ತೆ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ. ಒತ್ತುವರಿಯಾದ ಸ್ಥಳವನ್ನು ತೆರವುಗೊಳಿಸಲಾಗುವುದು. ಈಗಾಗಲೇ ಎಂಜಿನಿಯರ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮುಖ್ಯಾಧಿಕಾರಿ ಎಸ್. ಉಮಾಶಂಕರ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

Post Comments (+)