ದೇಶಭಕ್ತಿ-ಕಲಾಶಕ್ತಿ ಸಂಘರ್ಷದಲ್ಲಿ ಅನುಪಮ್‍ ಖೇರ್‍

ಬುಧವಾರ, ಜೂನ್ 19, 2019
28 °C

ದೇಶಭಕ್ತಿ-ಕಲಾಶಕ್ತಿ ಸಂಘರ್ಷದಲ್ಲಿ ಅನುಪಮ್‍ ಖೇರ್‍

Published:
Updated:
ದೇಶಭಕ್ತಿ-ಕಲಾಶಕ್ತಿ ಸಂಘರ್ಷದಲ್ಲಿ ಅನುಪಮ್‍ ಖೇರ್‍

ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಅನುಪಮ್‍ ಖೇರ್‍ ನಟನೆಯಾಚೆಗೂ ತಮ್ಮ ರಾಜಕೀಯ ನಿಲುವುಗಳಿಗಾಗಿ ಸುದ್ದಿಯಲ್ಲಿರುವವರು. ವಿವಿಧ ಭಾಷೆಗಳ ಐದುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ನಟನೆಗಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಮನ್ನಣೆಗೆ ಪಾತ್ರರಾಗಿದ್ದಾರೆ.

ಸಿನಿಮಾ ಕ್ಷೇತ್ರದಲ್ಲಿನ ಅವರ ಜೀವಮಾನ ಸಾಧನೆಗೆ ‘ಪದ್ಮಭೂಷಣ’ ಗೌರವ ಸಂದಿದೆ. ತಮಗೆ ಸಂದ ಎಲ್ಲ ಮನ್ನಣೆ-ಪುರಸ್ಕಾರಗಳ ಹಿನ್ನೆಲೆಯಲ್ಲಿ ದೇಶಭಕ್ತಿ ಹಾಗೂ ದೇಶನಿಷ್ಠೆಯನ್ನು ನೆನಪಿಸಿಕೊಳ್ಳುವ ಅನುಪಮ್‍ ಖೇರ್‍ ಈಗ ಪುಣೆಯ ‘ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ’ (ಎಫ್‌ಟಿಐಐ) ಅಧ್ಯಕ್ಷರು.

ಗಜೇಂದ್ರ ಚೌಹಾಣ್‍ ಅಧ್ಯಕ್ಷರಾಗಿದ್ದಾಗ ‘ಎಫ್‍ಟಿಐಐ’ ಗೊಂದಲದ ಗೂಡಾಗಿತ್ತು. ಚೌಹಾಣ್‍ ನೇಮಕವನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿಗಳು 139 ದಿನಗಳ ಪ್ರತಿಭಟನೆ ನಡೆಸಿದ್ದರು. ಈಗ ಅನುಪಮ್‍ ಖೇರ್‍ ಅವರು ‘ಎಫ್‍ಟಿಐಐ’ ಪ್ರವೇಶಿಸುವ ಮುನ್ನವೇ, ಅಲ್ಲಿನ ವಿದ್ಯಾರ್ಥಿಗಳು ಬಹಿರಂಗ ಪತ್ರವೊಂದನ್ನು ಬರೆದು ಸಂಸ್ಥೆಯಲ್ಲಿ ಮೌಲ್ಯವ್ಯವಸ್ಥೆ ಕುಸಿಯುತ್ತಿರುವುದನ್ನು ಪ್ರಸ್ತಾಪಿಸಿದ್ದಾರೆ.

ಅಲ್ಪಾವಧಿ ಕೋರ್ಸ್‍ಗಳ ಮೂಲಕ ಹಣ ಗಳಿಕೆಗೆ ಇಳಿದಿರುವ ಸಂಸ್ಥೆಗೆ ಮತ್ತೆ ಅದರ ವರ್ಚಸ್ಸನ್ನು ತಂದುಕೊಡಬೇಕೆಂದು ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ಅನುಪಮ್‍ ವಿದ್ಯಾರ್ಥಿಗಳ ವಿಶ್ವಾಸವನ್ನು ಗಳಿಸಿಕೊಳ್ಳುವ ಕೆಲಸವನ್ನು ಮೊದಲು ಮಾಡಬೇಕಿದೆ ಹಾಗೂ ತಮ್ಮ ನೇಮಕದ ಹಿಂದೆ ಇರುವ ರಾಜಕೀಯದ ಪ್ರೇರಣೆಯನ್ನು ಮೀರಿ ನಿಲ್ಲುವ ಸವಾಲು ಎದುರಿಸಬೇಕಾಗಿದೆ (ಅನುಪಮ್‍ರ ಪತ್ನಿ ಕಿರಣ್‍ ಖೇರ್‍ ಬಿಜೆಪಿಯ ಸಕ್ರಿಯ ಸದಸ್ಯೆ ಹಾಗೂ ಚಂಡಿಗಡದಿಂದ ಲೋಕಸಭೆಯನ್ನು ಪ್ರತಿನಿಧಿಸುತ್ತಿದ್ದಾರೆ).

ಶಿಮ್ಲಾದಲ್ಲಿ ಕಾಶ್ಮೀರಿ ಪಂಡಿತ ಕುಟುಂಬದಲ್ಲಿ ಜನಿಸಿದ (ಮಾರ್ಚ್‌ 7, 1955) ಅನುಪಮ್‍ ಅವರದು ಮಧ್ಯಮ ವರ್ಗದ ಕುಟುಂಬ. ಅವರ ತಂದೆ ಅರಣ್ಯ ಇಲಾಖೆಯಲ್ಲಿ ಗುಮಾಸ್ತರಾಗಿದ್ದರು. ಅನುಪಮ್‍ ಹುಟ್ಟುವ ಎರಡು ವರ್ಷ ಮೊದಲಷ್ಟೇ ಕಾಶ್ಮೀರದಿಂದ ಶಿಮ್ಲಾಕ್ಕೆ ಅವರ ಕುಟುಂಬ ಸ್ಥಳಾಂತರಗೊಂಡಿತ್ತು. ಶಾಲಾ ದಿನಗಳಲ್ಲಿ ಆಟ-ಪಾಠ ಎರಡರಲ್ಲೂ ಜಾಣನೆನ್ನಿಸಿಕೊಂಡಿದ್ದರು. ಶಿಕ್ಷಕರನ್ನು, ಅಪ್ಪನನ್ನು, ಅಜ್ಜ-ಅಜ್ಜಿಯ ನಡೆ-ನುಡಿ ಅನುಕರಿಸುವುದು ಬಾಲ್ಯದಲ್ಲಿ ವಿನೋದವೆನ್ನಿಸಿತ್ತು. ಬಹುಶಃ, ಈ ಅನುಕರಣೆಯೇ ನಟನೆಯ ಮೊದಲ ಪಾಠವಿರಬೇಕು.

ಪದವಿಯ ನಂತರ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ತರಗತಿಗೆ ಸೇರಲು ಪ್ರಯತ್ನಿಸುತ್ತಿದ್ದ ಅನುಪಮ್‍, ಪಂಜಾಬ್‍ ವಿಶ್ವವಿದ್ಯಾಲಯದ ಒಂದು ವರ್ಷದ ಅಭಿನಯ ತರಬೇತಿಯ ಡಿಪ್ಲೊಮ ಕೋರ್ಸ್‍ನ ಜಾಹೀರಾತಿಗೆ ಮರುಳಾದರು. ಅರ್ಜಿ ಸಲ್ಲಿಸಿದ್ದಾಯಿತು. ಪಿಕ್ನಿಕ್‍ಗೆಂದು ಹೇಳಿ ಸಂದರ್ಶನ ಎದುರಿಸಿದರು. ಖರ್ಚಿಗೆಂದು ಅಮ್ಮನ ಬಳಿಯಿಂದ ನೂರು ರೂಪಾಯಿ ಎಗರಿಸಿದ್ದರು.

ಆಡಿಷನ್‍ನಲ್ಲಿ ‘ಮೃಚ್ಛಕಟಿಕ’ದ ವಸಂತಸೇನೆಯಾಗಿ ನಟಿಸಿದರು. ಡಿಪ್ಲೊಮ ಪ್ರವೇಶ ಸಿಗುವ ಆಸೆ ಕೈಬಿಟ್ಟು ಅಪ್ಪನಂತೆ ಗುಮಾಸ್ತನಾಗಲು ಸಿದ್ಧರಾದರು. ಆದರೆ, ನಿರೀಕ್ಷೆ ಮೀರಿ ಅಭಿನಯ ತರಬೇತಿಗೆ ಆಯ್ಕೆಯಾದರು. ಅಲ್ಲಿ ಹಟಕ್ಕೆ ಬಿದ್ದವರಂತೆ ನಟನೆಯ ಪಟ್ಟುಗಳನ್ನು ಕಲಿಯಲು ಪ್ರಯತ್ನಿಸಿದರು. ನಂತರದ್ದು ನಟನೆಯ ನಂಟು.

ಸಿನಿಮಾ ನಟನಾಗಬೇಕು ಎನ್ನುವ ಆಸೆ ಶಿಮ್ಲಾದಲ್ಲಿದ್ದಾಗಲೇ ಅನುಪಮ್‍ರಲ್ಲಿ ಮೊಳೆತಿತ್ತು. ಅಲ್ಲಿದ್ದ ನಾಲ್ಕು ಥಿಯೇಟರ್‍ಗಳು ಅವರಿಗೆ ಆಕರ್ಷಣೆಯ ಕೇಂದ್ರಗಳಾಗಿದ್ದವು. ಸಿನಿಮಾ ಟಿಕೆಟ್‍ ಪಡೆಯುವ ನೂಕುನುಗ್ಗಲಿನಲ್ಲಿ ಮೂಗು ಒಡೆದುಕೊಂಡಿದ್ದೂ ಇದೆ.

ಗೆಳೆಯನೊಬ್ಬ ಆರಂಭಿಸಲು ಉದ್ದೇಶಿಸಿದ್ದ ಅಭಿನಯ ಶಾಲೆಯಲ್ಲಿ ನೌಕರಿಯ ಭರವಸೆಯೊಂದಿಗೆ ಮುಂಬೈಗೆ ಬಂದ ಅನುಪಮ್‍ ನಿರಾಶೆಯನ್ನು ಎದುರುಗೊಳ್ಳಬೇಕಾಯಿತು. ರೈಲ್ವೆ ನಿಲ್ದಾಣಕ್ಕೆ ಬರಬೇಕಿದ್ದ ಗೆಳೆಯ ಬರಲಿಲ್ಲ. ಅವನ ತರಬೇತಿ ಶಾಲೆಯ ಯೋಜನೆ ಮುಂದಕ್ಕೆ ಹೋಗಿತ್ತು. ಕಿಸೆಯಲ್ಲಿ 37 ರೂಪಾಯಿಯಷ್ಟೇ ಇದ್ದ ಅನುಪಮ್‍ ಮಹಾನಗರಿಯಲ್ಲಿ ಬದುಕು ಕಂಡುಕೊಳ್ಳಲು ಸಾಕಷ್ಟು ಸೈಕಲ್‍ ತುಳಿಯಬೇಕಾಯಿತು.

1982ರಲ್ಲಿ ‘ಸಾರಾಂಶ್‍’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶದ ಅವರ ಕನಸು ನನಸಾಯಿತು. ಮಗನನ್ನು ಕಳೆದುಕೊಂಡ ಮಧ್ಯಮ ವರ್ಗದ ಅಪ್ಪನೊಬ್ಬನ ಪಾತ್ರದ ಮೂಲಕ ನಟನೆ ಆರಂಭಿಸಿದ ಅವರು, ನಂತರ ಹೆಚ್ಚು ಅವಕಾಶಗಳನ್ನು  ಪಡೆದದ್ದು ನಗೆಪಾತ್ರಗಳಲ್ಲಿ. ಆದರೆ, ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು ವಿಲನ್‍ ಪಾತ್ರಗಳು!

‘ಕರ್ಮ’, ‘ಡ್ಯಾಡಿ’, ‘ಬೆಂಡ್ ಇಟ್‍ ಲೈಕ್‍ ಬೆಕ್‍ಹ್ಯಾಮ್‍’, ‘ಬ್ರೈಡ್‍ ಅಂಡ್‍ ಪ್ರಿಜುಡೀಸ್‍’, ‘ಪ್ರಣಯಂ’, ‘ಸೌದಾಗರ್’, ‘ಖೇಲ್’, ‘ದಿಲ್’ ಅವರ ಪ್ರತಿಭೆಯ ಹಲವು ಮುಖಗಳನ್ನು ಅನಾವರಣಗೊಳಿಸುವ ಕೆಲವು ಜನಪ್ರಿಯ ಸಿನಿಮಾಗಳು. ಕಿರುತೆರೆಯ ಷೋಗಳ ಮೂಲಕವೂ ಅನುಪಮ್‍ ಜನಪ್ರಿಯರು.

ನಟನೆಯ ಕಾರಣಗಳಿಂದಾಗಿ ಆಗಾಗ ಸುದ್ದಿಯಾಗುತ್ತಿದ್ದ ಅನುಪಮ್‍, ಹೆಚ್ಚು ಸುದ್ದಿಯಾಗತೊಡಗಿದ್ದು ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ. ಮೋದಿ ಅವರ ವಿರೋಧಿಗಳ ಮೇಲೆ ಟೀಕಾಪ್ರಹಾರ ನಡೆಸುವ ಮೂಲಕ ಅವರು ಜನಬೆಂಬಲ-ವಿರೋಧ ಎರಡನ್ನೂ ಗಳಿಸಿದರು.

ಕರ್ನಾಟಕದ ಎಂ.ಎಂ. ಕಲಬುರ್ಗಿ ಅವರ ಹತ್ಯೆಯ ಸಂದರ್ಭದಲ್ಲಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂದು ದೇಶದ ಕಲಾವಿದರು ಹಾಗೂ ಲೇಖಕರು ಪ್ರಶಸ್ತಿ ವಾಪಸಾತಿ ಚಳವಳಿ ಹಮ್ಮಿಕೊಂಡಾಗ, ಅದನ್ನು ಅನುಪಮ್‍ ಕಟುವಾಗಿ ವಿರೋಧಿಸಿದ್ದರು. ಪ್ರಶಸ್ತಿ ವಾಪಸಾತಿ ಚಳವಳಿಯ ಹಿಂದೆ ಮೋದಿ ಅವರನ್ನು ಪ್ರಧಾನಿಯಾಗಿ ಸಹಿಸಿಕೊಳ್ಳಲಾಗದವರ ಅಸಹನೆ ಅವರಿಗೆ ಕಾಣಿಸಿತ್ತು. ಪ್ರಶಸ್ತಿಗಳನ್ನು ಹಿಂತಿರುಗಿಸುವ ಮೂಲಕ ದೇಶಕ್ಕೆ ಹಾಗೂ ಪ್ರಶಸ್ತಿ ಕೊಟ್ಟವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಹೇಳಿದ್ದರು.

ವ್ಯವಸ್ಥೆಯ ವಿರುದ್ಧ ದನಿಯೆತ್ತಿದ ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಕನ್ಹಯ್ಯ ಕುಮಾರ್ ಹಾಗೂ ಉಮರ್ ಖಾಲಿದ್‍ರನ್ನು ‘ಜಿರಲೆಗಳು, ಕ್ರಿಮಿಗಳು’ ಎಂದು ಜರೆದಿದ್ದರು. ಇಂಥ ಕ್ರಿಮಿಗಳ ವಿರುದ್ಧ ದೇಶದಾದ್ಯಂತ ಕ್ರಿಮಿನಾಶಕ ಸಿಂಪರಣೆ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಹೇಳಿದ್ದರು. 500 ಮತ್ತು 1000 ರೂಪಾಯಿ ನೋಟುಗಳ ಮಾನ್ಯತೆ ರದ್ದುಗೊಳಿಸಿದ ಕ್ರಮವನ್ನು ಕೂಡ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದರು.

ಬಿಜೆಪಿ ಪಕ್ಷದ ಮುಖಂಡರು ಕೂಡ ಅನುಪಮ್‍ರ ಮೊನಚು ನಾಲಗೆಗೆ ಗುರಿಯಾಗಿದ್ದಾರೆ. ‘ಯೋಗಿ ಆದಿತ್ಯನಾಥ್‍ ಹಾಗೂ ಸಾಧ್ವಿ ಪ್ರಾಚಿ ಅವರನ್ನು ಜೈಲಿಗಟ್ಟಬೇಕು’ ಎಂದು ಹೇಳಿದ್ದರು (ಆಗಿನ್ನೂ ಆದಿತ್ಯನಾಥ್‍ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿರಲಿಲ್ಲ). ಈ ಹೇಳಿಕೆಗೆ ಪ್ರತಿಯಾಗಿ ‘ಅನುಪಮ್‍ ಖೇರ್‍ ನಿಜ ಜೀವನದಲ್ಲೂ ವಿಲನ್‍’ ಎಂದು ಆದಿತ್ಯನಾಥ್‍ರಿಂದ ಕರೆಸಿಕೊಂಡಿದ್ದರು.

ವೈಯಕ್ತಿಕ ಉದ್ದೇಶಗಳಿಗಾಗಿ ಕೆಲವರು ದೇಶವನ್ನು ಅವಮಾನಿಸುತ್ತಾರೆ. ಐಷಾರಾಮಿ ಕೊಠಡಿಗಳಲ್ಲಿ ಕುಳಿತು ಶಾಂಪೇನ್‍ ಕುಡಿಯುತ್ತ ದೇಶದ ಬಡತನದ ಬಗ್ಗೆ ಮಾತನಾಡುತ್ತಾರೆ ಎನ್ನುವ ಅನುಪಮ್‍ ಪಾಲಿಗೆ ಮೋದಿ ಓರ್ವ ಅಕಲಂಕಿತ ಹೀರೊ. ಮೋದಿ ಬಗೆಗಿನ ಅವರ ಆರಾಧನೆ ಎಷ್ಟರಮಟ್ಟಿಗಿದೆಯೆಂದರೆ, ‘ಯಾರಾದರೂ ನನ್ನನ್ನು ಮೋದಿ ಚಮಚ ಎಂದು ಕರೆದರೆ ಆ ಬಗ್ಗೆ ಬೇಸರವಿಲ್ಲ. ಹೀಗೆ ಕರೆಸಿಕೊಳ್ಳುವುದಕ್ಕಿಂತಲೂ ಸೌಭಾಗ್ಯ ಬೇರೆಯಿಲ್ಲ’ ಎಂದು ಹೇಳಿದ್ದಾರೆ.

ಪುಟ್ಟ ಪಟ್ಟಣವೊಂದರಿಂದ ಬಂದ ನಾನು ಮೂರು ದಶಕಗಳ ಅವಧಿಯಲ್ಲಿ ಸುಮಾರು ಐದುನೂರು ಚಿತ್ರಗಳಲ್ಲಿ ನಟಿಸಿದ್ದೇನೆ. ಏನೆಲ್ಲ ಗೌರವ ಕೊಟ್ಟಿರುವ ಈ ದೇಶಕ್ಕೆ ನಿಷ್ಠನಾಗಿರುವುದು ನನ್ನ ಕರ್ತವ್ಯ ಎನ್ನುವ ಅವರಿಗೆ, ‘ದೇಶಭಕ್ತಿಯೇ ತಮ್ಮ ರಾಜಕಾರಣದ ನಂಬಿಕೆಗಳ ತಳಹದಿ’ ಎನ್ನಿಸಿದೆ. ಈ ದೇಶಭಕ್ತಿಯೇ ಅವರಿಗೆ ಈಗ ಪುಣೆಯ ‘ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ’ (ಎಫ್‌ಟಿಐಐ) ಅಧ್ಯಕ್ಷ ಸ್ಥಾನವನ್ನು ತಂದುಕೊಟ್ಟಿದೆ. ದೇಶಕ್ಕೆ ಋಣಿಯಾಗಿರಲು ಅವರಿಗೆ ಮತ್ತೊಂದು ಕಾರಣ ದೊರೆತಿದೆ.

ನಟನಾಗಿ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸುವುದಕ್ಕೂ ಶೈಕ್ಷಣಿಕ ಸಂಸ್ಥೆಯೊಂದರ ಚುಕ್ಕಾಣಿ ನಿರ್ವಹಿಸುವುದಕ್ಕೂ ಇರುವ ವ್ಯತ್ಯಾಸವನ್ನು ಅರಿಯುವ ಪ್ರಬುದ್ಧತೆ ಅವರಿಗಿದ್ದೇ ಇದೆ. ‘ಯಾವುದೇ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ಕಠಿಣಶ್ರಮ ಅತ್ಯಗತ್ಯ’ ಎಂದು ನಂಬಿರುವ ಅವರು, ನಮ್ಮನ್ನು ನಾವು ಮರುಶೋಧನೆಗೆ ಒಳಗು ಮಾಡಿಕೊಳ್ಳುವ ಒಂದು ಅವಕಾಶವನ್ನಾಗಿ ಬದುಕನ್ನು ಕಂಡವರು.

ಆ ಮರುಶೋಧನೆಯ ಅವಕಾಶದ ರೂಪದಲ್ಲಿ ಅವರಿಗೆ ಲಭಿಸಿರುವ ‘ಎಫ್‍ಟಿಐಐ’ ಅಧ್ಯಕ್ಷ ಸ್ಥಾನವನ್ನು ನೋಡಬಹುದು. ಅನುಪಮ್‍ಗೆ ಸಿನಿಮಾ ಶಾಲೆಗಳ ನಂಟು ಹೊಸತಲ್ಲ. ವಿದ್ಯಾರ್ಥಿಯಾಗಿ ಸಿನಿಮಾ-ರಂಗಶಾಲೆಗಳನ್ನು ಕಂಡಿದ್ದಾರೆ. ಮುಂಬೈಯಲ್ಲಿ ಖಾಸಗಿ ನಟನಾ ಶಾಲೆಯೊಂದನ್ನು ಸ್ಥಾಪಿಸಿರುವ ಅನುಭವವೂ ಅವರಿಗಿದೆ.

ಈ ಅನುಭವದ ವಿಸ್ತರಣೆಯ ರೂಪ ‘ಎಫ್‍ಟಿಐಐ’. ರಾಜಕೀಯ ನಿಲುವುಗಳಾಚೆಗಿನ ಕಲೆ-ಕಲಿಕೆಯ ಅನುಭವದ್ರವ್ಯವನ್ನು ನೆಚ್ಚಿಕೊಂಡರೆ, ‘ಎಫ್‍ಟಿಐಐ’ ವರ್ಚಸ್ಸನ್ನು ಎತ್ತಿಹಿಡಿಯುವ ಸಾಮರ್ಥ್ಯ ಅವರಿಗೆ ಖಂಡಿತವಾಗಿಯೂ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry