ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ರಕ್ಷಣೆಗಾಗಿ ಭಾರತ ಯಾತ್ರೆ

ಅಗತ್ಯ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ
Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸೆಪ್ಟೆಂಬರ್ 11ರಂದು ಕನ್ಯಾಕುಮಾರಿಯಿಂದ ಆರಂಭವಾದ ‘ಭಾರತ ಯಾತ್ರೆ’ ಇದೇ ಸೋಮವಾರ (ಅಕ್ಟೋಬರ್ 16) ದೆಹಲಿಯನ್ನು ತಲುಪಲಿದೆ.

ದೇಶದ ವಿವಿಧೆಡೆಯಿಂದ ಆರಂಭವಾಗಿರುವ ಭಾರತ ಯಾತ್ರೆಯ ಉಪಯಾತ್ರೆಗಳೂ ಸೋಮವಾರ ದೆಹಲಿಯಲ್ಲಿ ಸಂಧಿಸಲಿವೆ. ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯಕರ್ತ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಯಾತ್ರೆಯು ‘ಮಾನವ ಕಳ್ಳಸಾಗಣೆ (ತಡೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ–2016’ಯನ್ನು ತ್ವರಿತವಾಗಿ ಅನುಮೋದಿಸುವಂತೆ ಒತ್ತಾಯಿಸುತ್ತಿದೆ.

ಮಕ್ಕಳು ಮಾನವ ಕಳ್ಳಸಾಗಣೆ, ಲೈಂಗಿಕ ಶೋಷಣೆ, ಬಾಲ ಕಾರ್ಮಿಕರ ಜಾಲ ಮತ್ತು ಬಾಲ್ಯ ವಿವಾಹಕ್ಕೆ ಬಲಿಯಾಗುತ್ತಿರುವುದರ ಬಗ್ಗೆ ಯಾತ್ರೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಈ ಸಂಬಂಧ ಲಭ್ಯವಿರುವ ಅಂಕಿ–ಸಂಖ್ಯೆಗಳ ಬಗ್ಗೆ ಜನರಿಗೆ ಮಾಹಿತಿ ಹಂಚುತ್ತಿದೆ.

‌‘ಮಸೂದೆ ಬೇಗ ಜಾರಿಯಾಗಬೇಕು...’

‘ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸದ್ಯ ಜಾರಿಯಲ್ಲಿರುವ ಪೋಕ್ಸೊ ಒಂದು ಉತ್ತಮ ಕಾಯ್ದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿಲ್ಲ. ಕಾಯ್ದೆ ಅಡಿ ದಾಖಲಾದ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಮತ್ತು ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆ ಜಾರಿಯಾಗಬೇಕು. ಇದಕ್ಕಾಗಿ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು’ ಎಂಬುವುದು ಭಾರತ ಯಾತ್ರಾದ ಮತ್ತೊಂದು ಒತ್ತಾಯ.

‘ಮಕ್ಕಳ ರಕ್ಷಣೆಯ ವಿಚಾರವನ್ನು ನಾವು ಬಹಳ ಸೂಕ್ಷ್ಮವಾಗಿ ಗಮನಿಸುವ ಅವಶ್ಯಕತೆಯಿದೆ. ಹೀಗಾಗಿಯೇ ಮಾನವ ಕಳ್ಳಸಾಗಣೆ ತಡೆ ಮಸೂದೆ ತ್ವರಿತವಾಗಿ ಜಾರಿಯಾಗಬೇಕು’ ಎಂಬುವುದು ಕೈಲಾಶ್ ಸತ್ಯಾರ್ಥಿ ಅವರ ಪ್ರತಿಪಾದನೆ.

‘ಶೀಘ್ರವೇ ಕಾಯ್ದೆಯಾಗಲಿದೆ’

‘ಮಾನವ ಮತ್ತು ಮಕ್ಕಳ ಕಳ್ಳ ಸಾಗಣೆಗೆ ದೇಶ–ದೇಶಗಳ ಗಡಿಯೇ ಇಲ್ಲ. ಪ್ರತೀ ವರ್ಷ ಸುಮಾರು 1.5 ಲಕ್ಷ ಮಂದಿ ಈ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಬಾಲಕಿಯರು ಮತ್ತು ಮಕ್ಕಳನ್ನು ಜಾನುವಾರುಗಳ ರೀತಿಯಲ್ಲಿ ಈಗಲೂ ಮಾರಾಟ ಮಾಡಲಾಗುತ್ತಿದೆ. ಈ ಮಕ್ಕಳಲ್ಲಿ ಬಹುತೇಕರು ವೇಶ್ಯಾವೃತ್ತಿಗೆ ಬಲಿಯಾ ಗುತ್ತಿದ್ದಾರೆ. ಭಿಕ್ಷಾಟನೆಗೆ ದೂಡುವ ಉದ್ದೇಶದಿಂದ ಈ ಮಕ್ಕಳ ಅಂಗಚ್ಛೇದ ಮಾಡಲಾಗುತ್ತಿದೆ. 2015ರಲ್ಲಿ ಮುಸ್ಕಾನ್ ಕಾರ್ಯಕ್ರಮದ ಅಡಿ ಇಂತಹ 70,000 ಮಕ್ಕಳನ್ನು ರಕ್ಷಿಸಲಾಗಿದೆ. ಮಕ್ಕಳ ಕಳ್ಳಸಾಗಣೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಸರ್ಕಾರ ಬದ್ಧವಾಗಿದೆ. ಕಳ್ಳಸಾಗಣೆ ತಡೆ ಮಸೂದೆಗೆ ಶೀಘ್ರವೇ ಅನುಮೋದನೆ ದೊರೆಯಲಿದೆ ಎಂದು ಭರವಸೆ ನೀಡುತ್ತೇನೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಈಚೆಗೆ ಹೇಳಿಕೆ ನೀಡಿದ್ದರು.

ಮಾನವ ಕಳ್ಳಸಾಗಣೆ

‘ಒತ್ತಾಯಪೂರ್ವಕವಾಗಿ ಅಥವಾ ವಂಚನೆಯಿಂದ ಅಥವಾ ಬೆದರಿಸಿ ಮನುಷ್ಯರನ್ನು ಖರೀದಿಸುವುದು, ಸಾಗಣೆ ಮಾಡುವುದು ಮತ್ತು ದುರ್ಬಳಕೆ ಮಾಡಿಕೊಳ್ಳುವುದು ಮಾನವ ಕಳ್ಳಸಾಗಣೆ. ವೇಶ್ಯಾವೃತ್ತಿಗೆ ದೂಡುವುದು, ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಂಗಚ್ಛೇದ, ಲೈಂಗಿಕ ಜೀತ, ದುಡಿಮೆ ಮತ್ತು ಜೀತ ಎಲ್ಲವನ್ನೂ ದುರ್ಬಳಕೆ ಎಂದೇ ಪರಿಗಣಿಸಲಾಗುತ್ತದೆ’ ಎಂದು ವಿಶ್ವಸಂಸ್ಥೆ ವಿವರಿಸಿದೆ. ಆದರೆ ಆಯಾ ದೇಶಗಳಲ್ಲಿ ಮಾನವ ಕಳ್ಳಸಾಗಣೆಯನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ.

ನಮ್ಮ ‘ಮಾನವ ಕಳ್ಳಸಾಗಣೆ (ತಡೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ–2016’ ಮಕ್ಕಳಿಗೆ ಮಾದಕ ವಸ್ತುಗಳನ್ನು ನೀಡಿ ಲೈಂಗಿಕ ದೌರ್ಜನ್ಯ ನಡೆಸುವುದು ಮತ್ತು ಪ್ರಜ್ಞೆ ತಪ್ಪಿಸಿ ಸಾಗಾಟ ಮಾಡುವುದನ್ನು ಮಾತ್ರ ಕಳ್ಳಸಾಗಣೆ ಎಂದು ಪರಿಗಣಿಸುತ್ತಿತ್ತು. ಪರಿಷ್ಕೃತ ಮಸೂದೆಯು ಜೀತ, ಭಿಕ್ಷಾಟನೆ, ವಿವಾಹದ ಉದ್ದೇಶದಿಂದ ಮಕ್ಕಳನ್ನು ತಂದಿರಿಸಿಕೊಳ್ಳುವುದು, ಮಕ್ಕಳನ್ನು ಮಾನವ ಗುರಾಣಿಯಾಗಿ ಬಳಸಿಕೊಳ್ಳುವುದನ್ನೂ ಕಳ್ಳಸಾಗಣೆ ಎಂದು ಪರಿಗಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT