ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಬಾರಿ ‘ಗಾಂಧಿ ಗ್ರಾಮ ಪುರಸ್ಕಾರ’

Last Updated 15 ಅಕ್ಟೋಬರ್ 2017, 6:41 IST
ಅಕ್ಷರ ಗಾತ್ರ

‘ಭಾರತದ ನಿಜವಾದ ಅಭಿವೃದ್ಧಿ ಗ್ರಾಮಗಳ ಅಭ್ಯುದಯದಲ್ಲಿ ಅಡಗಿದೆ’ ಎಂಬುದು ಮಹಾತ್ಮ ಗಾಂಧೀಜಿ ಅವರ ನಿಲುವಾಗಿತ್ತು. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಪರಿಶ್ರಮಿಸಿದ ನರಸಿಂಹರಾಜಪುರ ತಾಲ್ಲೂಕಿನ ಹೊನ್ನೇಕೂಡಿಗೆ ಗ್ರಾಮ ಪಂಚಾಯಿತಿಗೆ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.

2016–17ನೇ ಸಾಲಿನ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಸರ್ಕಾರ ರಾಜ್ಯದ 30 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಂದ ಪಂಚತಂತ್ರ ತಂತ್ರಾಂಶ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಈ 30 ಜಿಲ್ಲೆಗಳಲ್ಲಿ 176 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯಿಂದ ಆಯ್ಕೆಯಾದ 7 ಗ್ರಾಮ ಪಂಚಾಯಿತಿಯಲ್ಲಿ ಹೊನ್ನೇಕೂಡಿಗೆ ಪಂಚಾಯಿತಿಯೂ ಒಂದಾಗಿದೆ.

ಪಂಚಾಯತ್ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆ, ಉತ್ತರದಾಯಿತ್ವಕ್ಕಾಗಿ ಸರ್ಕಾರ ಹಲವಾರು ಉತ್ತೇಜನ ಕ್ರಮಗಳನ್ನು ಅನುಸರಿಸುತ್ತಾ ಬಂದಿದೆ. ಉತ್ತಮ ಸಾಧನೆ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡುವ ಕಾರ್ಯಕ್ರಮ 2013-14 ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗಿದೆ.

ಕೆಲವು ಆಡಳಿತ ಮತ್ತು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಗ್ರಾಮ ಪಂಚಾಯಿತಿ ಸಾಧಿಸುವ ಶೇ 90 ರಿಂದ ಶೇ 95ರಷ್ಟು ಸಾಧನೆಯನ್ನು ಮೌಲ್ಯಮಾಪನಾ ಮಾಡಿ ಅದಕ್ಕೆ ಸೂಕ್ತ ಪ್ರೋತ್ಸಾಹಧನ ನೀಡುವುದೇ ಗಾಂಧಿ ಗ್ರಾಮ ಪುರಸ್ಕಾರ. ರಾಜ್ಯದಲ್ಲಿ ಉತ್ತಮ ಕಾರ್ಯ ಮಾಡಿರುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ, ಉತ್ತೇಜನಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತದೆ.

ಈ ಮೂಲಕ ಗ್ರಾಮ ಪಂಚಾಯಿತಿಗಳು ಮತ್ತಷ್ಟು ಉತ್ತಮ ಕೆಲಸ ಹಾಗೂ ವಿಶೇಷ ಸಾಧನೆ ಮಾಡಲು ಅವಕಾಶ ಮಾಡಿಕೊಡುವುದರ ಜತೆಗೆ ಇತರೆ ಗ್ರಾಮ ಪಂಚಾಯಿತಿಗಳನ್ನು ಪ್ರೇರೇಪಿಸುವುದು ಈ ಪುರಸ್ಕಾರ ನೀಡುವುದರ ಮೂಲ ಉದ್ದೇಶವಾಗಿದೆ.

ಈ ಪುರಸ್ಕಾರಕ್ಕೆ ಗ್ರಾಮ ಪಂಚಾಯಿತಿಗಳಿಂದ ಅರ್ಜಿ ಆಹ್ವಾನಿಸಿದ ಸರ್ಕಾರ ಇದಕ್ಕೆ ವಿವಿಧ ಕ್ಷೇತ್ರಗಳ ಸಾಧನೆ ಗುರುತಿಸಲು 150 ಅಂಕಗಳನ್ನು ನಿಗದಿಪಡಿಸಿತ್ತು. ಹೊನ್ನೇಕೂಡಿಗೆ ಗ್ರಾಮ ಪಂಚಾಯಿತಿ ಕಂದಾಯ ವಸೂಲಿಯಲ್ಲಿ ಶೇ 100 ರಷ್ಟು ಪ್ರಗತಿ, ಬಯಲು ಬಹಿರ್ದೆಸೆ ಮುಕ್ತ ಗ್ರಾಮದ ಸಾಧನೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶೇ 90ಕ್ಕಿಂತ ಹೆಚ್ಚು ಪ್ರಗತಿ ಸಾಧನೆ, ಆಶ್ರಯ, ಬಸವ, ಇಂದಿರಾ ಆವಾಜ್ ಯೋಜನೆಗಳಲ್ಲೂ ಉತ್ತಮ ಸಾಧನೆಯನ್ನು ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಎಲ್ಲಾ ಯೋಜನೆಗಳಲ್ಲೂ ಸಹ ಉತ್ತಮ ಸಾಧನೆಯನ್ನು ಮಾಡಿದೆ.

ಈ ಗ್ರಾಮ ಪಂಚಾಯಿತಿಯಲ್ಲಿ ಸಕಾಲಕ್ಕೆ ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಮಕ್ಕಳ ಗ್ರಾಮ ಸಭೆಗಳನ್ನು ಆಯೋಜಿಸಿ ಗ್ರಾಮಸ್ಥರೊಂದಿಗೆ ಉತ್ತಮ ಸಂಬಂಧವನ್ನು ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಹೊಂದಿದ್ದಾರೆ.

ಗ್ರಾಮಸಭೆಯ ನಡಾವಳಿಗಳನ್ನು ಪಂಚತಂತ್ರ ತಂತ್ರಾಂಶಕ್ಕೆ ಅಳವಡಿಸಿರುವುದು ಸಹ ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಮುಖ್ಯ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಪುರಸ್ಕಾರವು ₹5 ಲಕ್ಷ ಅನುದಾನದ ಚೆಕ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ.

ತಾಲ್ಲೂಕಿನಲ್ಲಿರುವ 14 ಗ್ರಾಮ ಪಂಚಾಯಿತಿಗಳಲ್ಲಿ ಹೊನ್ನೇಕೂಡಿಗೆ ಗ್ರಾಮ ಪಂಚಾಯಿತಿ ಸಣ್ಣ ಗ್ರಾಮ ಪಂಚಾಯಿತಿಯಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನೀಷ್, ಅಧ್ಯಕ್ಷೆ ಶ್ರುತಿ, ಉಪಾಧ್ಯಕ್ಷೆ ಸುಮಿತ್ರ, ಸದಸ್ಯರಾದ ಹಂಚಿನಮನೆ ರಾಘವೇಂದ್ರ, ಕೆ.ಟಿ.ಸತೀಶ್, ವಿಜು, ಶಿಭಿ, ಮರಿಯಮ್ಮ, ವೀಣಾ, ಕಾರ್ಯದರ್ಶಿ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿಯ ಪರಿಶ್ರಮ ದಿಂದ ಸತತ ಎರಡನೇ ಬಾರಿ ಈ ಪುರಸ್ಕಾರ ಲಭಿಸಿದ್ದು ಇತರೆ ಗ್ರಾಮ ಪಂಚಾಯಿತಿಗಳಿಗೂ ಮಾದರಿಯಾಗಿದೆ.

ಗ್ರಾಮ ಪಂಚಾಯಿತಿಯಿಂದ ಮೂಲ ಸೌಕರ್ಯವನ್ನು ಒದಗಿಸಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಂದಾಯ ವಸೂಲಿಯು ಉತ್ತಮವಾಗಿದ್ದು ಗಾಂಧಿ ಗ್ರಾಮ ಪುರಸ್ಕಾರ ಲಭಿಸಿರುವುದು ಸಂತಸದ ವಾಗಿದೆ ಎನ್ನುತ್ತಾರೆ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಮಾಜಿ ಸದಸ್ಯ ಹೊನ್ನೇಕೂಡಿಗೆ ಕೃಷ್ಣಯ್ಯ.

ಗ್ರಾಮಸ್ಥರಿಗೆ ಉತ್ತಮ ಆಡಳಿತ ನೀಡಿ ಗ್ರಾಮವನ್ನು ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ನಿರಂತರ ಶ್ರಮಿಸಿ ದರ ಫಲವಾಗಿ ಸತತ ಎರಡನೇ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನೀಷ್.

ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಗ್ರಾಮಸ್ಥರಲ್ಲಿ ಗ್ರಾಮದ ಅಭಿವೃದ್ಧಿ ಸಹಕಾರವಾಗುವ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸಿದ ಪರಿಣಾಮವಾಗಿ ಎಲ್ಲ ಯೋಜನೆಗಳಲ್ಲೂ ಪ್ರಗತಿ ಸಾಧಿಸಿ ಪುರಸ್ಕಾರ ಪಡೆಯಲು ಸಾಧ್ಯವಾಯಿತು. ಇದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಸತೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT