ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲಾಜಿಲ್ಲದೇ, ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ

Last Updated 16 ಅಕ್ಟೋಬರ್ 2017, 6:19 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದಲ್ಲಿ ಒತ್ತುವರಿಯಾಗಿರುವ  ರಾಜಕಾಲುವೆಗಳನ್ನು ತೆರವುಗೊಳಿಸಿ, ಸರಾಗವಾಗಿ ಮಳೆ ನೀರು ಹರಿಯುವಂತೆ ಮಾಡಬೇಕು. ಈ ವಿಚಾರದಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದಲ್ಲಿ ಮಳೆಹಾನಿಗೊಳಗಾದ ನೆಹರು ನಗರ, ಹೊಳಲ್ಕೆರೆ ಟೋಲ್‌ಗೇಟ್ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ಅವರು, ರಾಜಕಾಲುವೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‌‘ಮಳೆ ನೀರು ಹರಿಯುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿರುವುದರಿಂದಲೇ ಮನೆಗಳಿಗೆ ನೀರು ನುಗ್ಗಲು ಕಾರಣವಾಗುತ್ತಿದೆ. ಕಾಲುವೆ ಅಗಲ ಆರಂಭದಲ್ಲಿ 20 ಅಡಿ ಇದ್ದರೆ, ಬಡಾವಣೆಗಳ ಒಳಗೆ ಬರುವ ಹೊತ್ತಿಗೆ 4 ಅಡಿಯಾಗಿರುತ್ತದೆ.

ರಾಜಕಾಲುವೆಗಳ ಮೇಲೆ ಕಟ್ಟಡಗಳನ್ನು ಕಟ್ಟಿರುವುದರಿಂದಲೇ, ಯಾವುದೇ ತಪ್ಪು ಮಾಡದ ನಾಗರಿಕರ ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ನಗರಸಭೆ ರಾತ್ರೋ ರಾತ್ರಿ ಕಾಲುವೆಗಳಿಗೆ ಅಡ್ಡವಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ. ಇದು ಮುಂದುವರಿಸಲು ಸಾರ್ವಜನಿಕರು ಮಾಧ್ಯಮಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

‘ಚಂದ್ರವಳ್ಳಿ ಕೆರೆಯಿಂದ ಹರಿದು ಬರುವ ನೀರು ಹೊಳಲ್ಕೆರೆ ಟೋಲ್‌ಗೇಟ್‌ ನಲ್ಲಿರುವ ರಾಜಕಾಲುವೆಯ ಮೂಲಕ ಹರಿಯುತ್ತದೆ. ಆದರೆ, ಈ ದಾರಿಯಲ್ಲಿ ಕಾಲುವೆಯನ್ನು ಒತ್ತುವರಿ ಮಾಡಲಾಗಿದೆ. ಕನಿಷ್ಠ 15 ರಿಂದ ಇಪ್ಪತ್ತು ಅಡಿ ಇರಬೇಕಾದ ರಾಜಕಾಲುವೆಗಳು, ಕಿರಿದಾಗಿವೆ. ಅವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

‘ನಗರಸಭೆಯವರು ಆಯಾ ಜಾಗದ ನಕಾಶೆಯನ್ನು ಆಧರಿಸಿ ಕಾರ್ಯಾಚರಣೆ ನಡೆಸಲಿದ್ದಾರೆ. ನಿವಾಸಿಗಳಲ್ಲಿರುವ ಮನೆಗಳ ನಕ್ಷೆಯನ್ನು ಪರಿಶೀಲಿಸಲಿದ್ದಾರೆ. ಅಕ್ರಮ ಎಂದು ಕಂಡು ಬಂದರೆ, ಅದನ್ನು ತೆರವುಗೊಳಿಸುತ್ತಾರೆ. ಈ ವಿಷಯದಲ್ಲಿ ಯಾರ ಪ್ರಭಾವಕ್ಕೂ ಒಳಗಾಗಬಾರದು ಎಂದು ಸೂಚಿಸಿದ್ದೇನೆ. ಇವತ್ತು ನಾವು ಕಾಲುವೆಗಳನ್ನು ಸರಿಪಡಿಸಿಕೊಳ್ಳುತ್ತಿದ್ದರೆ, ಮುಂದೊಂದು ದಿನ ಜೀವಹಾನಿಯಾಗುವಂಥ ಘಟನೆಗಳು ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಯಾವುದೇ ಮುಲಾಜಿಗೆ ಒಳಗಾಗದಂತಿರಲು ಸೂಚಿಸಿದ್ದೇನೆ’ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ,  ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಷಿ, ನಗರಸಭೆ ಪೌರಾಯುಕ್ತ ಚಂದ್ರಪ್ಪ, ತಹಶೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT