ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಘಟಕಗಳಿಗೆ ನೇಮಕ: ಕಗ್ಗಂಟಾದ ಮಂಡ್ಯ, ಹಾಸನ

ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕ; ಮೂಡದ ಒಮ್ಮತ
Last Updated 16 ಅಕ್ಟೋಬರ್ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳೀಯ ನಾಯಕರ ಆಂತರಿಕ ಭಿನ್ನಮತದಿಂದಾಗಿ ಮಂಡ್ಯ ಮತ್ತು ಹಾಸನ ಜಿಲ್ಲಾ ಕಾಂಗ್ರೆಸ್‌ ಘಟಕಗಳ ಅಧ್ಯಕ್ಷರ ನೇಮಕ ಕೆಪಿಸಿಸಿಗೆ ಕಗ್ಗಂಟಾಗಿ ಪರಿಣಮಿಸಿದೆ.

‘ಕೆಪಿಸಿಸಿ ಕಾರ್ಯದರ್ಶಿ ಚಂದ್ರಕಲಾ ಅವರನ್ನು ಹಾಸನ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಮಾಡುವಂತೆ ಸಚಿವ ಎ. ಮಂಜು ಹೇಳಿದರೆ, ಹಾಲಿ ಅಧ್ಯಕ್ಷ ಬಿ. ಶಿವರಾಂ ಅವರು ಪಟೇಲ ಶಿವಪ್ಪ ಹೆಸರು ಪರಿಗಣಿಸುವಂತೆ ಒತ್ತಡ ಹೇರಿದ್ದಾರೆ ಎಂದು ಗೊತ್ತಾಗಿದೆ. ಹೀಗಾಗಿ, ಒಮ್ಮತ ಮೂಡದೆ, ಆಯ್ಕೆ ಸಾಧ್ಯವಾಗಿಲ್ಲ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೂ ತೀವ್ರ ಪೈಪೋಟಿ ನಡೆದಿದೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿವೇಕಾನಂದ ಹೆಸರನ್ನು ಶಾಸಕ ಎಂ.ಎಚ್‌. ಅಂಬರೀಷ್‌ ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ ಕಡೆಗೆ ಮುಖ ಮಾಡಿರುವ ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ ಮತ್ತು ಕೆಲವರು ಮಾಜಿ ಶಾಸಕ ಎಚ್‌.ಪಿ. ರಾಮು ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ಈ ಮಧ್ಯೆ ರಮ್ಯಾ ಅವರು, ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭ‌ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ನಾಗರಾಜು ಅವರಿಗೆ ಮತ್ತೆ ಅದೇ ಸ್ಥಾನ ನೀಡುವಂತೆ ವಾದಿಸುತ್ತಿದ್ದಾರೆ ಎಂದೂ ಮೂಲಗಳು ಹೇಳಿವೆ.

‘ಬಳ್ಳಾರಿ ನಗರ ಜಿಲ್ಲಾ ಘಟಕದ ಹಾಲಿ ಅಧ್ಯಕ್ಷ ಆಂಜನೇಯ ಅವರನ್ನು ಬದಲಿಸದಂತೆ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಒತ್ತಡ ಹೇರಿದ್ದರು. ಆದರೆ, ಅವರ ಮಾತಿಗೆ ಮನ್ನಣೆ ಸಿಕ್ಕಿಲ್ಲ. ಆಂಜನೇಯ ಅವರನ್ನು ಬದಲಿಸಿ ರಫೀಕ್‌ ಅವರನ್ನು ನೇಮಿಸಲಾಗಿದೆ’ ಎಂದೂ ಪಕ್ಷದ ಮೂಲಗಳು ತಿಳಿಸಿವೆ.‌

***
ಮನೆ ಮನೆಗೆ ವೇಣು
ಕಾಂಗ್ರೆಸ್ಸಿನಲ್ಲಿ ವ್ಯಕ್ತಿ ಪೂಜೆ ಇಲ್ಲ. ಪಕ್ಷದ ಪೂಜೆ ಮಾಡಬೇಕು. ಪಕ್ಷ ಮೊದಲು, ವ್ಯಕ್ತಿ ನಂತರ. ಪಕ್ಷ ಇದ್ದರೆ ನಾವೆಲ್ಲ’  ಎಂದು ಹೇಳಿಕೊಂಡು, ‘ಮನೆ ಮನೆಗೆ ಕಾಂಗ್ರೆಸ್‌’ ಮಂತ್ರ ಪಠಿಸಲು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸ್ವತಃ ಮುಂದಾಗಿದ್ದಾರೆ.

ಪಕ್ಷದ ಈ ಅಭಿಯಾನದ ಜೊತೆ ಬೆಳಗಾವಿ ಜಿಲ್ಲೆಯ ವಿವಿಧ ಕಡೆ ಮನೆ ಮನೆಗೆ ಹೆಜ್ಜೆ ಹಾಕಿರುವ ವೇಣುಗೋಪಾಲ್‌, ಹುಬ್ಬಳ್ಳಿ– ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲೂ ಹಲವು ಮನೆಗಳ ಕದ ತಟ್ಟಿದ್ದಾರೆ. ಆ ಮೂಲಕ, ಈ ಕಾರ್ಯಕ್ರಮದ ಯಶಸ್ವಿಗೆ ಕೈ ಜೋಡಿಸದ ಸಚಿವರು, ಶಾಸಕರು ಮತ್ತು ಸ್ಥಳೀಯ ನಾಯಕ‌ರಿಗೆ ಬಿಸಿ ಮುಟ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT