ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಕಟ್ಟಡ: ಏಳು ಸಾವು

ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಶಂಕೆ
Last Updated 16 ಅಕ್ಟೋಬರ್ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ವಿವೇಕನಗರ ಬಳಿಯ ಈಜಿಪುರದಲ್ಲಿ ಸೋಮವಾರ ನಸುಕಿನಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದಿದ್ದರಿಂದ ಒಂದೇ ಕುಟುಂಬದ ಮೂವರು ಸೇರಿ ಏಳು ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಪವನ್ ಕಲ್ಯಾಣ (19), ಅವರ ಸಂಬಂಧಿಕರಾದ ಪ್ರಸಾದ್‌ (18), ಮಾಲಾಶ್ರೀ (25), ಇನ್ನೊಂದು ಕುಟುಂಬದ ಸರವಣ (27), ಅವರ ಪತ್ನಿ ಅಶ್ವಿನಿ (22), ಪಕ್ಕದ ಮನೆಯ ಕಲಾವತಿ (68), ರವಿಚಂದ್ರನ್‌ (46) ಮೃತರು. ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಸರವಣ ದಂಪತಿಯ ಪುತ್ರಿ ಸಂಜನಾ (3) ಹಾಗೂ ಚಿತ್ರಾ (42) ಅವರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ ಪ್ರಿಯಾ, ಜಾನಕಿ, ಅಶೋಕನ್‌, ದಿಲೀಪ್‌, ಆಶಾ ತೀವ್ರವಾಗಿ ಗಾಯಗೊಂಡಿದ್ದಾರೆ.

ಈಜಿಪುರದ 9ನೇ ಅಡ್ಡರಸ್ತೆಯಲ್ಲಿರುವ ಎಸ್‌. ಗುಣೇಶ್ ಎಂಬುವರಿಗೆ ಸೇರಿದ್ದ ಕಟ್ಟಡ ಇದಾಗಿದ್ದು, ಅದರಲ್ಲಿ ಏಳು ಮನೆಗಳಿವೆ. ಅಲ್ಲಿ ಏಳು ಕುಟುಂಬಗಳು ಬಾಡಿಗೆಗೆ ಇವೆ. ಈಗ ಎರಡು ಕುಟುಂಬಗಳು ವಾಸವಿದ್ದ ಕಟ್ಟಡದ ಭಾಗ ಸಂಪೂರ್ಣ ಕುಸಿದಿದ್ದರಿಂದ ಈ ಅವಘಡ ಸಂಭವಿಸಿದೆ. ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಅನುಮಾನಿಸಲಾಗಿದೆ.

ಬೆಳಿಗ್ಗೆ 6.45 ಗಂಟೆಯ ಸುಮಾರಿಗೆ ಭಾರಿ ಶಬ್ಧ ಕೇಳಿಸಿತ್ತು. ಸ್ಥಳೀಯರು ಹೊರಬಂದು ನೋಡುತ್ತಿದ್ದಂತೆ, ದಟ್ಟ ಹೊಗೆ ಆವರಿಸಿತ್ತು. 15 ನಿಮಿಷಗಳ ಬಳಿಕ ಆ ಹೊಗೆ ಕಡಿಮೆಯಾದಾಗ ಕಟ್ಟಡ ನೆಲಕ್ಕುರುಳಿತ್ತು. ಬಳಿಕ ಸ್ಥಳೀಯರು, ಪೊಲೀಸ್‌ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿ‌ಷಯ ತಿಳಿಸಿದ್ದರು. ಅಗ್ನಿಶಾಮಕ ಸಿಬ್ಬಂದಿ, ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸರು ಮಧ್ಯಾಹ್ನ 3 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರಗೆ ತೆಗೆದರು.

ಮೃತ ಪವನ್‌ ಕಲ್ಯಾಣನ ಪೋಷಕರು, ಇತ್ತೀಚೆಗಷ್ಟೇ ಆತನಿಗೆ ಹೆಣ್ಣು ನೋಡಿದ್ದರು. ಕೆಲವೇ ದಿನಗಳಲ್ಲಿ ನಡೆಯಬೇಕಿದ್ದ ನಿಶ್ಚಿತಾರ್ಥದಲ್ಲಿ ಪಾಲ್ಗೊಳ್ಳಲು ಪ್ರಸಾದ್‌, ಮಾಲಾಶ್ರೀ ಸೇರಿ ಹಲವು ಸಂಬಂಧಿಕರು ಬಂದಿದ್ದರು. ಅವರೆಲ್ಲ ಕಟ್ಟಡದ ಮೊದಲ ಮಹಡಿಯಲ್ಲಿ ಉಳಿದುಕೊಂಡಿದ್ದರು.

ಇನ್ನು ಮೃತ ಅಶ್ವಿನಿ ಎಂಟು ತಿಂಗಳ ಗರ್ಭಿಣಿ. ತಮಿಳುನಾಡಿನ ಅವರು ಗರ್ಭಿಣಿಯಾದ ದಿನದಿಂದ ತವರು ಮನೆಯಲ್ಲಿ ವಾಸವಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಪತಿಯ ಮನೆಗೆ ಬಂದಿದ್ದರು. ಜತೆಗೆ ಕಲಾವತಿ ಹಾಗೂ ರವಿಚಂದರ್‌, ನೀರು ತರಲೆಂದು ಕಟ್ಟಡ ಬಳಿಯ ನಲ್ಲಿಗೆ ಬಂದಿದ್ದರು. ಇದೇ ವೇಳೆ ಕಟ್ಟಡ ಕುಸಿದು, ಅವರ ಮೇಲೆ ಅವಶೇಷಗಳು ಬಿದ್ದಿದ್ದವು.

ಕಾರ್ಯಾಚರಣೆ ವೇಳೆ ಮಗು ಅಳುವ ಶಬ್ಧ ಕೇಳಿಸಿತ್ತು. ಅವಶೇಷಗಳಡಿ ಇದ್ದ ಬೀರುವಿನ ಮೇಲೆ ಬಿದ್ದಿದ್ದ ಇಟ್ಟಿಗೆಯನ್ನು ತೆಗೆದಾಗ, ಓರೆಯಾಗಿ ಬಿದ್ದಿದ್ದ ಬೀರುವಿನ ಅಡಿ ಸಂಜನಾ ಕುಳಿತಿದ್ದು ಗೊತ್ತಾಯಿತು. ಕೂಡಲೇ ರಕ್ಷಣಾ ತಂಡದ ಸಿಬ್ಬಂದಿ, ಆಕೆಯನ್ನು ಹೊರಗೆ ತೆಗೆದು ಆಸ್ಪತ್ರೆಗೆ ಕಳುಹಿಸಿದರು. ಸದ್ಯ ಆಕೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಯೆಲ್ಲ ಸುಟ್ಟಗಾಯ
ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಿದ್ದ ಸರವಣ, ಅವರ ಪತ್ನಿ ಅಶ್ವಿನಿ ಅವರ ದೇಹವು ಶೇ 100ರಷ್ಟು ಸುಟ್ಟಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪುತ್ರಿ ಸಂಜನಾಳ ಶೇ 60ರಷ್ಟು ಹಾಗೂ ಜಾನಕಿ ಅವರಿಗೆ ಶೇ 30ರಷ್ಟು ದೇಹ ಸುಟ್ಟಿದೆ. ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ.

‘ದೇಹಗಳು ಸುಟ್ಟಿರುವುದರಿಂದ ಸ್ಫೋಟದಿಂದ  ಕಟ್ಟಡ ಕುಸಿದಿರುವ ಮೇಲ್ನೋಟಕ್ಕೆ ತಿಳಿಯುತ್ತದೆ. ಆ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕವೇ ನಿಖರ ಕಾರಣ ಗೊತ್ತಾಗಲಿದೆ’ ಎಂದು ಅಗ್ನಿಶಾಮಕ ದಳದ ಉಪನಿರ್ದೇಶಕ ವರದರಾಜ್‌ ತಿಳಿಸಿದರು.

ಕಟ್ಟಡ ಮಾಲೀಕ ವಶಕ್ಕೆ
‘30ರಿಂದ 35 ವರ್ಷಗಳ ಹಿಂದೆ ಕಟ್ಟಿದ್ದ ಕಟ್ಟಡ ಇದಾಗಿದ್ದು ಶಿಥಿಲಗೊಂಡಿತ್ತು. ಅದನ್ನು ಸರಿಪಡಿಸುವಂತೆ ಹೇಳಿದರೂ ಮಾಲೀಕ ಗುಂಡೇಶ್‌ ಕ್ರಮ ಕೈಗೊಂಡಿರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ’ ಎಂದು ಮೃತ ಕಲಾವತಿ ಅವರ ಪುತ್ರಿ ಕೃಷ್ಣವೇಣಿ, ವಿವೇಕನಗರ ಠಾಣೆಗೆ ದೂರು ಕೊಟ್ಟಿದ್ದಾರೆ.

ಅದರನ್ವಯ ಬೇರೆಯವರ ಸುರಕ್ಷತೆಗೆ ಕುತ್ತು ತಂದ (ಐಪಿಸಿ 336), ನಿರ್ಲಕ್ಷ್ಯ (ಐಪಿಸಿ 338) ಹಾಗೂ ಅಜಾಕರೂಕತೆಯಿಂದ ಉಂಟಾದ ಸಾವು (ಐಪಿಸಿ 304) ಆರೋಪದಡಿ ಗುಣೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

‘ವಿಧಿವಿಜ್ಞಾನ ಪ್ರಯೋಗಾಲಯ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅವರ ವರದಿ ನೀಡಿದ ಬಳಿಕವೇ ಅವಘಡಕ್ಕೆ ನಿಖರ ಕಾರಣ ಗೊತ್ತಾಗಲಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ತಿಳಿಸಿದರು.
*
ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಹಾಗೂ ಗಾಯಗೊಂಡಿರುವವರ ಚಿಕಿತ್ಸೆಗೆ ₹50 ಸಾವಿರ ಪರಿಹಾರ ನೀಡಲಾಗುವುದು. ಗಾಯಗೊಂಡಿರುವ ಸಂಜನಾಳ ವೈದ್ಯಕೀಯ ಚಿಕಿತ್ಸೆ ಹಾಗೂ ಆಕೆಯ ಶಿಕ್ಷಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
– ಕೆ.ಜೆ.ಜಾರ್ಜ್‌,
ಬೆಂಗಳೂರು ನಗರ ಅಭಿವೃದ್ಧಿ ಸಚಿವ  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT