ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂಷಾ ಬಲದಂಡೆ ನಾಲೆ ಸುಧಾರಣೆ ಪೂರ್ಣ

Last Updated 17 ಅಕ್ಟೋಬರ್ 2017, 7:30 IST
ಅಕ್ಷರ ಗಾತ್ರ

ಮದ್ದೂರು: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಶಿಂಷಾ ಬಲದಂಡೆ ನಾಲೆ ಸುಧಾರಣೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈ ಭಾಗದ ರೈತರ ಬಹುಕಾಲದ ಕನಸು ಈಡೇರಿದೆ. ತಾಲ್ಲೂಕಿನ ತಗ್ಗಹಳ್ಳಿ ಬಳಿ ಶಿಂಷಾನದಿಗೆ ಕೆ.ಆರ್‌.ಎಸ್‌ ಅಣೆಕಟ್ಟು ನಿರ್ಮಾಣ ಮುನ್ನವೇ 1862ರಲ್ಲಿ ದಿವಾನ್ ಪೂರ್ಣಯ್ಯ ಸಣ್ಣ ಅಣೆಕಟ್ಟು ನಿರ್ಮಿಸಿದ್ದರು. 

ಮೊದಲಿಗೆ ಶಿಂಷಾ ಬಲದಂಡೆ ನಾಲೆ ರೂಪಿಸಿದ ಅವರು 10ಕ್ಕೂ ಹೆಚ್ಚು ಗ್ರಾಮಗಳ 7 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸುವ ಯೋಜನೆಗೆ ಚಾಲನೆ ನೀಡಿದರು. ಬಳಿಕ 1892ರಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಅಣೆಕಟ್ಟು ವಿಸ್ತರಣೆ ಮಾಡಿ ಶಿಂಷಾ ಎಡ ದಂಡೆ ಯೋಜನೆ ರೂಪಿಸಿದರು. ಈ ಯೋಜನೆಯಿಂದಾಗಿ 19ಕ್ಕೂ ಹೆಚ್ಚು ಗ್ರಾಮಗಳ 15 ಸಾವಿರ ಎಕರೆ ಜಮೀನಿಗೆ ನೀರು ದೊರಕಲಾರಂಭಿಸಿತು.

ದಿನಗಳೆದಂತೆ ಶಿಂಷಾ ಬಲದಂಡೆ ನಾಲೆ ತನ್ನ ಅಂತಃಸತ್ವ ಕಳೆದುಕೊಂಡು ಕುಸಿಯತೊಡಗಿತು. ನಾಲೆಯ ತೂಬುಗಳು ಹಾಳಾದವು. ಇದರಿಂದಾಗಿ ರೈತರ ಜಮೀನು ಸೇರಬೇಕಾದ ನೀರು ಎಲ್ಲೆಲ್ಲೋ ಹರಿದು ವ್ಯರ್ಥವಾಗತೊಡಗಿತು.

ಕಾಲಕ್ರಮೇಣ ಸುಣ್ಣ ಹಾಗೂ ಗಾರೆಯಲ್ಲಿ ನಿರ್ಮಿಸಲಾದ ಈ ಅಣೆಕಟ್ಟೆ ಶಿಥಿಲಗೊಂಡ ಪರಿಣಾಮ 1947ರ ನಂತರ ಒಮ್ಮೆ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ಅಲ್ಲಿಂದಾಚೆಗೆ ಈ ಅಣೆಕಟ್ಟೆ ನಿರ್ವಹಣೆಯಷ್ಟೇ ಮುಂದುವರಿಯಿತೇ ವಿನಾ ದುರಸ್ತಿ ಕಾರ್ಯ ನಡೆಯಲಿಲ್ಲ. ಕಾರಣ ನೀರು ಸಂಗ್ರಹಣೆ ಕುಸಿಯತೊಡಗಿತು.

ಶಾಸಕ ಡಿ.ಸಿ.ತಮ್ಮಣ್ಣ ಅವರು 2004ರಲ್ಲಿ ಕ್ಷೇತ್ರ ಶಾಸಕರಾಗಿ ಬಂದ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇವರ ಮನವಿ ಮೇರೆಗೆ ತಗ್ಗಹಳ್ಳಿ ಅಣೆಕಟ್ಟು ಸೇರಿದಂತೆ ಶಿಂಷಾ ಎಡ ನಾಲೆ ದುರಸ್ತಿಗೆ ₹ 12 ಕೋಟಿ ಬಿಡುಗಡೆಗೊಂಡು ಎಡ ದಂಡೆ ನಾಲೆ ಪುನಶ್ಚೇತನ ಕಾಮಗಾರಿ ಪೂರ್ಣಗೊಂಡಿತು.

ಬಳಿಕ ಅಲ್ಲಿಂದ ಇಲ್ಲಿಯವರೆಗೆ ನನೆಗುದಿಗೆ ಬಿದ್ದಿದ್ದ ಬಲದಂಡೆ ನಾಲೆ ಪುನಶ್ಚೇತನ ಹಾಗೂ ಅಣೆಕಟ್ಟೆ ದುರಸ್ತಿ ಕಾರ್ಯ ಶಾಸಕರ ನಿರಂತರ ಶ್ರಮದ ಫಲವಾಗಿ 2016ರ ಅಂತ್ಯದ ವೇಳೆಗೆ ₹ 28 ಕೋಟಿ ಬಿಡುಗಡೆಯೊಂದಿಗೆ ಆರಂಭಗೊಂಡಿತು. ಇದೀಗ ಶೇ 90ರಷ್ಟು ಕಾಮಗಾರಿ ಮುಗಿದಿದ್ದು ಯೋಜನಾ ವೆಚ್ಚ ₹ 32 ಕೋಟಿ ದಾಟಿದೆ.

ಒಟ್ಟು 20.2 ಕಿ.ಮೀ ಶಿಂಷಾ ಬಲದಂಡೆ ನಾಲೆಯ ದುರಸ್ತಿ ಕಾರ್ಯ ನಡೆಸಲಾಗಿದೆ. ನಾಲೆಯ ಲೈನಿಂಗ್ ಅನ್ನು ಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಗಿದೆ. ನಾಲೆ ವ್ಯಾಪ್ತಿಯಲ್ಲಿ ಹೊಸದಾಗಿ 26 ಕಿರು ಸೇತುವೆಗಳನ್ನು ನಿರ್ಮಿಸಲಾಗಿದೆ. ಅಲ್ಲದೇ ಜನ ಜನುವಾರುಗಳ ಅನುಕೂಲಕ್ಕಾಗಿ ಹೊಸದಾಗಿ ಸೋಪಾನಗಳನ್ನು ನಿರ್ಮಿಸಲಾಗಿದೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಮ್ಮಣ್ಣ.

‘ತಗ್ಗಹಳ್ಳಿ ಅಣೆಕಟ್ಟೆಯ ಎತ್ತರವನ್ನು ಒಂದು ಅಡಿ ಹೆಚ್ಚಿಸಿರುವ ಪರಿಣಾಮ ನೀರಿನ ಸಂಗ್ರಹಣೆ ಕೂಡ ಹೆಚ್ಚಿದೆ. ಈ ಹಿಂದೆ ಕೊನೆ ಭಾಗಕ್ಕೆ ಮೂರು ದಿನವಾದರೂ ನೀರು ತಲುಪುತ್ತಿರಲಿಲ್ಲ. ಆದರೆ, ಇದೀಗ ನಾಲೆ ದುರಸ್ತಿಯಾದ ಕಾರಣ ಕೇವಲ 6 ಗಂಟೆಯಲ್ಲಿ ಕೊನೆಭಾಗಕ್ಕೆ ನೀರು ತಲುಪುತ್ತಿದೆ’ ಎನ್ನುತ್ತಾರೆ ಚಾಪುರದೊಡ್ಡಿ ಸುರೇಶ್‌.

ಬೆಳೆ ತೆಗೆಯಲಾಗದ ಸ್ಥಿತಿ: ಶಿಂಷಾ ಬಲದಂಡೆ ನಾಲೆ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈಚೆಗೆ ಉತ್ತಮ ಮಳೆ ಬಿದ್ದು, ಶಿಂಷಾ ನದಿಯಲ್ಲಿ ಯಥೇಚ್ಛ ನೀರು ಬಂದು ನಾಲೆಯಲ್ಲಿ ನೀರು ಹರಿದಿದೆ. ಆದರೆ ಸಕಾಲದಲ್ಲಿ ನೀರು ಬಾರದೇ ಬಿತ್ತನೆ ಕಾರ್ಯ ಕೈಗೊಳ್ಳದ ಕಾರಣ ನೀರಿದ್ದರೂ ರೈತರು ಬೆಳೆ ತೆಗೆಯಲಾಗದ ಸ್ಥಿತಿ ಒದಗಿದೆ.

ಜೂನ್‌–ಜುಲೈ ತಿಂಗಳಲ್ಲಿ ಮಳೆ ಬಂದಿದ್ದರೆ, ಶಿಂಷಾ ನದಿಯಲ್ಲೂ ನೀರು ಬಂದು ಸಕಾಲಕ್ಕೆ ಈ ಭಾಗದ ರೈತರು ನಾಟಿ ಕಾರ್ಯ ಕೈಗೊಳ್ಳಬಹುದಿತ್ತು. ಆದರೆ ಸಪ್ಟೆಂಬರ್‌ ತಿಂಗಳಿನಲ್ಲಿ ಮಳೆ ಬಿದ್ದಿದ್ದರಿಂದ ಶಿಂಷಾ ನದಿಯಲ್ಲಿ ನೀರು ಬಂದಿದೆ. ಆದರೆ ಋತುಮಾನದ ಏರುಪೇರಿನಿಂದಾಗಿ ಈ ಭಾಗದ ಸಾವಿರಾರು ಹೆಕ್ಟೆರ್‌ನಲ್ಲಿ ಬೆಳೆ ತೆಗೆಯಲಾಗದ ಸ್ಥಿತಿ ಒದಗಿದ್ದು, ರೈತರು ನಿರಾಶರಾಗಬೇಕಾಗಿದೆ.

ಈ ನಡುವೆ ಇನ್ನೊಂದು ತಿಂಗಳಿನಲ್ಲಿ ಶಿಂಷಾ ಬಲದಂಡೆ ನಾಲಾ ಪುನಶ್ಚೇತನ ಕಾಮಗಾರಿ ಪೂರ್ಣಗೊಳ್ಳಲಿದೆ. ನಾಲೆಯ ಮೂಲಕ ಈ ಭಾಗದ ರೈತರಿಗೆ ಮುಂದಿನ ಬೆಳೆಗೆ ಉತ್ತಮ ನೀರಿನ ಲಭ್ಯತೆ ದೊರಕಲಿದ್ದು ರೈತರ ಖುಷಿ ಹೆಚ್ಚಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT