ಪಟಾಕಿ ಅನಾಹುತ: 20ಕ್ಕೂ ಹೆಚ್ಚು ಮಂದಿಗೆ ಗಾಯ

ಶನಿವಾರ, ಮೇ 25, 2019
27 °C

ಪಟಾಕಿ ಅನಾಹುತ: 20ಕ್ಕೂ ಹೆಚ್ಚು ಮಂದಿಗೆ ಗಾಯ

Published:
Updated:
ಪಟಾಕಿ ಅನಾಹುತ: 20ಕ್ಕೂ ಹೆಚ್ಚು ಮಂದಿಗೆ ಗಾಯ

ಬೆಂಗಳೂರು: ದೀಪಾವಳಿಯ ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಮೈಮರೆತವರು ಹಾಗೂ ಅದನ್ನು ನೋಡುತ್ತ ನಿಂತಿದ್ದ 20ಕ್ಕೂ ಹೆಚ್ಚು ಜನರು ಕಣ್ಣುಗಳಿಗೆ ಗಾಯ ಮಾಡಿಕೊಂಡಿರುವ ಘಟನೆಗಳು ನಗರದ ಹಲವೆಡೆ ಗುರುವಾರ ನಡೆದಿವೆ. ಕಣ್ಣುಗಳಿಗೆ ಗಾಯ ಮಾಡಿಕೊಂಡವರಲ್ಲಿ 15 ವರ್ಷದೊಳಗಿನ ಗಂಡು ಮಕ್ಕಳೇ ಹೆಚ್ಚಿದ್ದಾರೆ.

ಕಬ್ಬನ್‌ ಪೇಟೆಯ ಭುವನೇಶ್‌(10), ಶ್ರೀರಾಮ್‌ಪುರದ ಮಹಮ್ಮದ್‌ ಫೈಜಲ್‌(16) ಪಟಾಕಿ ಸಿಡಿಸುವಾಗ ಎಡಗಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಪಟಾಕಿ ಹೊಡೆಯುವುದನ್ನು ನೋಡುತ್ತ ನಿಂತಿದ್ದ 10ನೇ ತರಗತಿಯ ಶಿವಾಜಿನಗರದ ಪ್ರದೀಪ್‌(16), ಅಭಿನಯ್‌(16) ಬಲಗಣ್ಣಿಗೆ ಸಣ್ಣ ಗಾಯ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಚಾಮರಾಜಪೇಟೆಯ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಗುರುವಾರ ಚಿಕಿತ್ಸೆ ಪಡೆದರು.

ಪಟಾಕಿಯಿಂದ ಕಣ್ಣಿಗೆ ಗಾಯ ಮಾಡಿಕೊಂಡ 15 ವರ್ಷದೊಳಗಿನ 8 ಮಕ್ಕಳು ನಾರಾಯಣ ನೇತ್ರಾಲಯದಲ್ಲಿ ಗುರುವಾರ ಚಿಕಿತ್ಸೆ ಪಡೆದರು. ಇವರಲ್ಲಿನ ವಿಲಿಯಮ್ಸ್‌ನಿಗೆ(11) ಪಟಾಕಿಯಿಂದ ಎದ್ದ ಕಿಡಿಗಳು ಕಣ್ಣಿನ ರೆಪ್ಪೆ ಮತ್ತು ಕೆನ್ನೆಯ ಚರ್ಮವನ್ನು ಸುಟ್ಟಿವೆ. ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮಾರತ್‌ಹಳ್ಳಿಯ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಅನಾಹುತದ ನಾಲ್ಕು ಪ್ರಕರಣಗಳು ದಾಖಲಾಗಿವೆ. ‘ಇದರಲ್ಲಿ ಅನ್ಬುಮಣಿ(38) ಅವರ ಕಣ್ಣುಗಳಿಗೆ ತೀವ್ರತರವಾದ ಗಾಯಗಳಾಗಿವೆ. ಅವರಿಗೆ ಈಗಾಗಲೇ ಸ್ಕ್ಯಾನಿಂಗ್‌ ಮಾಡಿದ್ದೇವೆ. ಹಾಗೆಯೇ ವಿವಿಧ ಹಂತಗಳ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಿದೆ. ಹಾಗಾಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದೇವೆ’ ಎಂದು ವೈದ್ಯರು ತಿಳಿಸಿದರು.

ಇದೇ ಆಸ್ಪತ್ರೆಗೆ ದಾಖಲಾಗಿದ್ದ ವಿಜಯ್‌(11), ದಿನೇಶ್‌(18), ನಾಗೇಂದ್ರ(41) ಅವರು ಪಟಾಕಿ ಸಿಡಿಸುವಾಗ ಕಣ್ಣಿಗೆ ಹಾನಿ ಮಾಡಿಕೊಂಡಿದ್ದರು. ಇವರೆಲ್ಲ ಗುರುವಾರ ಚಿಕಿತ್ಸೆ ಪಡೆದ ಮನೆಗೆ ಮರಳಿದರು.

ಜಯನಗರದ ನೇತ್ರಧಾಮ ಕಣ್ಣಿನ ಆಸ್ಪತ್ರೆಗೆ ಗುರುವಾರ ಬಂದಿದ್ದ ಹೇಮಂತ್‌(13) ಮತ್ತು ಅನಂತಕೃಷ್ಣ(40) ಅವರು ಪಟಾಕಿ ಸಿಡಿಸುವಿಕೆಯಿಂದ ಹಾನಿಗೆ ತುತ್ತಾಗಿದ್ದರು. ಇವರ ಎಡಗಣ್ಣುಗಳ ಪೊರೆಗಳಿಗೆ ಸ್ವಲ್ಪ ಹಾನಿಯಾಗಿದೆ. ‘ಸೂಕ್ತ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದೇವೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

ಪಟಾಕಿ ಹಚ್ಚುವಾಗ ಕೈಗಳಿಗೆ ಸಣ್ಣ ಸುಟ್ಟಗಾಯಗಳನ್ನು ಮಾಡಿಕೊಂಡಿರುವವರು ಸ್ಥಳೀಯ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದರು.

***

ಇದ್ದೊಬ್ಬ ಮಗನೂ ಅಂಧನಾದರೆ, ನಮಗ್ಯಾರು ಗತಿ

ಆಡಗೋಡಿಯ ಶಾರುಕ್‌(25) ಅವರ ಎಡಗಣ್ಣಿಗೆ ರಾಕೆಟ್‌ ಪಟಾಕಿ ತಾಗಿ ಪೆಟ್ಟು ಮಾಡಿದೆ. ಇದರಿಂದಾಗಿ ಸದ್ಯಕ್ಕೆ ಅವರ ಎಡಗಣ್ಣು ದೃಷ್ಟಿಹೀನವಾಗಿದೆ.

‘ಶಾರುಕ್‌ ಅವರಿಗೆ ಸ್ಕ್ಯಾನಿಂಗ್‌ ಮಾಡಿದ್ದೇವೆ. ಎಡಗಣ್ಣಿನ ಕಣ್ಣುಗುಡ್ಡೆಗೆ ಹಾನಿಯಾಗಿದೆ. ಮೊದಲಿನಂತೆ ದೃಷ್ಟಿ ಮರಳಿ ಬರುವುದು ಅನುಮಾನ’ ಎಂದು ಮಿಂಟೊ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

‘ಬುಧವಾರ ಸಂಜೆ 6.45ರ ಹೊತ್ತಿಗೆ ಗೆಳೆಯರೊಂದಿಗೆ ಹರಡುತ್ತ ನಿಂತಿದ್ದೆ. ಎಲ್ಲಿಂದಲೋ ಬಂದ ರಾಕೆಟ್‌ ಪಟಾಕಿ ನನ್ನ ಎಡಗಣ್ಣಿಗೆ ತಾಕಿತು. ಸ್ವಲ್ಪ ರಕ್ತವೂ ಬಂತು. ಆಗಿನಿಂದ ಎಡಗಣ್ಣಿನಿಂದ ಏನೂ ನೋಡಲಾಗುತ್ತಿಲ್ಲ’ ಎಂದು ಶಾರುಕ್‌ ಅಳಲು ತೋಡಿಕೊಂಡರು.

‘ಆ ಪಟಾಕಿಯನ್ನು ಯಾರು ಸಿಡಿಸಿದರು ಎಂಬುದೇ ತಿಳಿದಿಲ್ಲ. ಹಾಗಾಗಿ ಯಾರ ಮೇಲೂ ದೂರು ನೀಡಲು ಹೋಗಿಲ್ಲ. ಈಗ ಇದ್ದೊಬ್ಬ ಮಗನೂ ಅಂಧನಾದರೆ, ನಮಗ್ಯಾರು ಗತಿ. ಮಗನ ಚಿಕಿತ್ಸೆಗೆ ಕಾರ್ಪೊರೇಷನ್‌ನವರು ಸಹಾಯ ಮಾಡಬೇಕು’ ಎಂದು ಶಾರುಖ್‌ನ ತಾಯಿ ಅಫ್ಸಿಯಾ ಮನವಿ ಮಾಡಿದರು. ‘ಶಾರುಕ್‌ ಪೈಂಟರ್‌ ಕೆಲಸ ಮಾಡುತ್ತಾನೆ. ಇವನ ದುಡಿಮೆಯಿಂದಲೇ ಮನೆ ನಡೆಯುತ್ತಿತ್ತು. ಇವನ ಈ ಸ್ಥಿತಿಯಿಂದಾಗಿ ತಾಯಿ ಮತ್ತು ಪತ್ನಿಗೂ ಜೀವನ ನಿರ್ವಹಣೆ ಕಷ್ಟವಾಗಲಿದೆ’ ಎಂದು ಶಾರುಕ್‌ನ ಸಂಬಂಧಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry