ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಹಗಲು–ರಾತ್ರಿ ಕಲ್ಲು ಗಣಿಗಾರಿಕೆ: ನಿದ್ದೆಗೆಟ್ಟ ಜನ

Published:
Updated:
ಹಗಲು–ರಾತ್ರಿ ಕಲ್ಲು ಗಣಿಗಾರಿಕೆ: ನಿದ್ದೆಗೆಟ್ಟ ಜನ

ಮಂಡ್ಯ: ನಗರದಿಂದ 12 ಕಿ.ಮೀ ದೂರದಲ್ಲಿರುವ ರಾಗಿಮುದ್ದನಹಳ್ಳಿ ಗ್ರಾಮದ ಕ್ವಾರಿಗಳಲ್ಲಿ ಜಲ್ಲಿ ಕ್ರಷರ್‌ಗಳು ಹಗಲು–ರಾತ್ರಿ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕಾರಣ ಗ್ರಾಮದ ಮನೆಗಳು ಬಿರುಕುಬಿಟ್ಟಿವೆ. ದೂಳು, ಸದ್ದಿನಿಂದಾಗಿ ಮಕ್ಕಳು, ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕುಗಳಲ್ಲಿ ಕಲ್ಲು ಗಣಿಗಾರಿಕೆಯ ಮೇಲೆ ಒಂದು ತಿಂಗಳ ಮಟ್ಟಿಗೆ ತಾತ್ಕಾಲಿಕ ನಿಷೇಧ ಹೇರಿದ ಪರಿಣಾಮ ತಾಲ್ಲೂಕಿನ ಕ್ರಷರ್‌ಗಳಿಗೆ ಅಪಾರ ಬೇಡಿಕೆ ಬಂದಿದೆ. ಕಟ್ಟಡ ಕಲ್ಲು, ಜಲ್ಲಿಗೆ ಬೇಡಿಕೆ ಉಂಟಾಗಿದ್ದು ಜಲ್ಲಿ ಪೂರೈಸಲು ಗಣಿಗಳು ಹಗಲು– ರಾತ್ರಿ ಕಾರ್ಯ ನಿರ್ವಹಿಸುತ್ತಿವೆ. ರಾತ್ರಿಯಿಡೀ ಕಲ್ಲು ಸ್ಫೋಟಿಸುತ್ತಿದ್ದು ಜನರಿಗೆ ನಿದ್ದೆ ಬಾರದಾಗಿದೆ. ಪಾಂಡವಪುರ ಮತ್ತು ಶ್ರೀರಂಗಪಟ್ಟಣದ ಕಲ್ಲು ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಟಿಪ್ಪರ್‌ಗಳು ಮಂಡ್ಯ ತಾಲ್ಲೂಕಿನತ್ತ ಮುಖ ಮಾಡಿದ್ದು ಹಳ್ಳಿ ಜನರು ದೂಳಿನಿಂದ ಕಂಗೆಟ್ಟಿದ್ದಾರೆ.

‘ರಾತ್ರಿಯ ವೇಳೆಯಲ್ಲಿ 60 ಅಡಿಗಳವರೆಗೂ ಕುಳಿ ತೋಡಿ ಮೆಗ್ಗರ್‌ ಸ್ಫೋಟ ನಡೆಸುತ್ತಿದ್ದಾರೆ. ಮೊದಲು ಒಂದೆರಡು ಬಾರಿ ಸ್ಫೋಟಗಳಾಗುತ್ತಿದ್ದವು. ಈಗ ಏಳೆಂಟು ಬಾರಿ ಸ್ಫೋಟವಾಗುತ್ತಿದೆ. ನಮಗೆ ಎದೆಯ ಮೇಲೆ ಕಲ್ಲು ಬಿದ್ದಂತಾಗುತ್ತಿದೆ. ಬೆಳಿಗ್ಗೆ ಎದ್ದರೆ ಮಂಜಿನ ಜೊತೆಯಲ್ಲಿ ದೂಳಿನ ಹೊದಿಕೆ ಕಾಣಿಸುತ್ತಿದೆ. ಎರಡು ತಿಂಗಳ ಹಿಂದಷ್ಟೇ ಕಟ್ಟಿದ ಮನೆಗಳು ಬಿರುಕು ಬಿಟ್ಟಿವೆ’ ಎಂದು ರಾಗಿಮುದ್ದನಹಳ್ಳಿ ಗ್ರಾಮದ ಆರ್‌.ವಿ.ಅಶೋಕ್‌ ತಿಳಿಸಿದರು.

‘ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯ 50 ಮೀಟರ್‌ ಅಂತರದಲ್ಲೇ ಎರಡು ಗಣಿಗಳು ಅನಧಿಕೃತವಾಗಿ ಗಣಿಗಾರಿಕೆ ನಡೆಸುತ್ತಿವೆ. ಜಲ್ಲಿ ತುಂಬಿದ ಲಾರಿಗಳು ರಾಗಿಮುದ್ದನಹಳ್ಳಿ ಗೇಟ್‌ನಿಂದ ಸಂಚಾರ ನಿಯಮ ಉಲ್ಲಂಘಿಸಿ ಬಲಭಾಗದಲ್ಲೇ ಚಲಿಸುತ್ತಿವೆ. ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಜೊತೆಗೆ ಪ್ರತಿನಿತ್ಯ ಅಪಘಾತ ಸಂಭವಿಸಿ ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ’ ಎಂದು ಗ್ರಾಮದ ಆರ್‌.ಎಂ.ಶಂಕರೇಗೌಡ ಹೇಳಿದರು.

ಕಳಚಿ ಬಿದ್ದ ಮೋಟಾರ್‌ಗಳು: ‘ಮೆಗ್ಗರ್‌ ಸ್ಫೋಟದ ತೀವ್ರತೆಗೆ ಗ್ರಾಮದ ರೈತರ ಕೊಳವೆಬಾವಿಗಳ ಮೋಟಾರ್‌ಗಳು ಕಳಚಿ ಬೀಳುತ್ತಿವೆ. ಮೋಟಾರ್‌ ಹೊರತೆಗೆಸಲು ಕೊಳವೆ ಬಾವಿ ಕೊರೆಯುವ ಯಂತ್ರವನ್ನೇ ಕರೆಸಬೇಕಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ನಮ್ಮದಲ್ಲದ ತಪ್ಪಿಗೆ ನಾವು ಕಷ್ಟ ಅನುಭವಿಸಬೇಕಾಗಿದೆ’ ಎಂದು ಎಂ.ಸೋಮಶೇಖರ್‌ ನೋವು ತೋಡಿಕೊಂಡರು.

ಈ ಕುರಿತು ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್‌ ಎನ್‌.ನಾಗೇಶ್‌ ‘ತಾಲ್ಲೂಕಿನಲ್ಲಿ ಅಕ್ರಮವಾಗಿ ಗಣಿಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಕುರಿತು ವರದಿಯೊಂದನ್ನು ತಯಾರಿಸಿ ಜಿಲ್ಲಾಧಿಕಾರಿಗೆ ಕಳುಹಿಸಿದ್ದೇನೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

Post Comments (+)