ಕಾಣದ ಒಡಲಿಗೆ!

ಮಂಗಳವಾರ, ಜೂನ್ 18, 2019
24 °C

ಕಾಣದ ಒಡಲಿಗೆ!

Published:
Updated:
ಕಾಣದ ಒಡಲಿಗೆ!

ಅನನ್ಯ ಕೆ. ಎಸ್.

**

‘ಹಬ್ಬ ಹತ್ರ ಬರ್ತಾ ಇದೆ, ಇನ್ನೂ ಯಾವ ತಯಾರಿಗಳು ಆಗೇ ಇಲ್ಲ....’ ಎಂಬ ಅಮ್ಮನ ಧಾವಂತದ ಮಾತುಗಳು ಕಿವಿಗೆ ಬೀಳುವುದರಿಂದ ಶುರುವಾಗಿ, ಮನೆಯವರಿಗೆಲ್ಲ ಹೊಸ ಬಟ್ಟೆ ಖರೀದಿ, ಪೂಜೆಗೆ ಬೇಕಾದ ಸಾಮಾನುಗಳ ಪಟ್ಟಿ ಮಾಡುವುದು, ಮಧ್ಯದಲ್ಲಿ ಒಮ್ಮೆ ಮಾರ್ಕೆಟ್‌ಗೆ ಹೋಗಿ ಹಬ್ಬವೂ ಮುಗಿದು ಮತ್ತೊಂದು ವಾರದ ಪೂಜೆಗೂ ಸಾಲುವಷ್ಟು ಹೂವು-ಹಣ್ಣು, ಅಡುಗೆಮನೆಯ ಫ್ರಿಡ್ಜ್ ತುಂಬಿ ತುಳುಕುವಷ್ಟು ತರಕಾರಿ ಹೊತ್ತು ತರುವುದರೊಂದಿಗೆ ‘ಅಬ್ಭಾ! ವಸ್ತುಗಳ ಬೆಲೆ ಆಕಾಶ ಮುಟ್ಟಿಬಿಟ್ಟಿದೆ!’ ಎಂಬ ಉದ್ಗಾರಗಳು ಮನೆ ಸೇರುವುದು, ಹಬ್ಬದ ಹಿಂದಿನ ರಾತ್ರಿಯೇ ಬಾಗಿಲನ್ನು ಅಲಂಕರಿಸಿದ ತೋರಣ, ಅಮ್ಮ ಹಾಕಿದ ಅಷ್ಟಗಲ ಬಣ್ಣದ ರಂಗೋಲಿ, ಹಬ್ಬದ ಬೆಳಗು ಅಪ್ಪ ಹೊರಟ ‘ಪೂಜೆಗೆ ಪತ್ರೆ’ಯ ಬೇಟೆ, ಅಡುಗೆಮನೆಯಿಂದ ಹೊರಟು ಅಂಗಳವನ್ನು ದಾಟಿ ಗೇಟಿನ ತನಕ ಹಬ್ಬುವ ಸಿಹಿ ತಿಂಡಿಗಳ ಘಮ, ಸಂಜೆ ಅರಿಶಿಣ-ಕುಂಕುಮಕ್ಕೆ ಮನೆಗೆ ಬಂದು ಹೋಗುವವರು, ಹಬ್ಬದ ದಿನಗಳಲ್ಲಿ ಮಾತ್ರ ನೋಡಲು ಸಿಗುವ ಎಷ್ಟೋ ಸಂಬಂಧಿಕರು, ಎಲೆ-ಅಡಿಕೆಯ ಜೊತೆಗೆ ಜೇಬು ಸೇರಿದ ದಕ್ಷಿಣೆಯ ಕಲೆಕ್ಷನ್‌ - ಬುದ್ಧಿ ತಿಳಿಯುವುದಕ್ಕೆ ಮುಂಚಿನಿಂದಲೂ ಹಬ್ಬವೆಂದರೆ ಅದಿರುವುದೇ ಹೀಗೆ ಎಂಬಂತೆ ಬೆಳೆದ ನನ್ನಂತಹ ಮಕ್ಕಳು ಕಡೆಗೆ ಓದು, ಕೆಲಸಗಳ ಹೆಸರಿನಲ್ಲಿ ಆ ಬೆಚ್ಚಗಿನ ಗೂಡುಗಳನ್ನು ತೊರೆದು ಹಾಸ್ಟಿಲ್, ಪಿಜಿಗಳ ಮಡಿಲು ಸೇರಿದ ಮೇಲೆ ಕಾಣುವ ಹಬ್ಬಗಳ ರೂಪವೇ ಬೇರೆ.

ಮನೆಗಳನ್ನು ಸಡಗರ-ಸಂಭ್ರಮಗಳ ಗೂಡಾಗಿ ಪರಿವರ್ತಿಸುತ್ತಿದ ಹಬ್ಬಗಳು ಈಗ ಒಮ್ಮೆಗೇ ಕೇವಲ ರಜೆಗಳಾಗಿಬಿಡುತ್ತವೆ. ವರ್ಷವಿಡೀ ಬೆಳಿಗ್ಗೆ 8ಕ್ಕೆ ಎದ್ದರೂ ಬಯ್ಯದಿದ್ದ ಅಮ್ಮ ಹಬ್ಬದ ದಿನ 6ಕ್ಕೆ ಬಾಗಿಲ ಹೊರಗಿನಿಂದ ಹಾಕುತ್ತಿದ್ದ ಕೂಗು ಮಾಯವಾಗಿ ವಾರವಿಡೀ ಸಿಗದ ಬಿಡುವು ಇಂದಾದರೂ ಸಿಕ್ಕಿತಲ್ಲ ಎಂದು ಹಾಸ್ಟೆಲ್‌ನ ಕಿವಿಗಡಚಿಕ್ಕುವ ಗಂಟೆಗಳನ್ನೂ ನಿರ್ಲಕ್ಷಿಸಿ ಒಂದೆರಡು ಘಂಟೆ ಹೆಚ್ಚಿಗೆ ಮಲಗುವುದೇ ಹೆಚ್ಚು ಈ ಹಬ್ಬಗಳ ರಜೆಗಳಲ್ಲಿ. ಸಾಲಾಗಿ ರಜೆಗಳನ್ನು ಹೊತ್ತು ತರುವ ಹಬ್ಬಗಳು ಅವಾದರಂತೂ ವಾರದ ಹಿಂದಿನಿಂದಲೇ ಶುರುವಾಗುತ್ತದೆ ಊರಿಗೆ ಟಿಕೆಟ್ ಬುಕ್ ಮಾಡಿಸುವ ಸಂಭ್ರಮ. ಅದರ ನಡುವೆ ರಜೆ ಕೊಡುವುದು ಗ್ಯಾರಂಟಿಯಾ-ಇಲ್ಲವಾ ಅನ್ನುವ ಜಿಜ್ಞಾಸೆ ಬೇರೆ. ಇವೆಲ್ಲದರ ಹಿಂದೆಯೇ ಶುರುವಾಗುತ್ತದೆ ಊರಿಗೆ ಹೊರಟವರೆಷ್ಟು, ಇಲ್ಲೆ ಉಳಿಯುವವರೆಷ್ಟು ಎಂಬ ಸಂಭಾಷಣೆಗಳ ಮಹಾಪೂರ. ಹೊರಟವರಲ್ಲಿ ತಮಗೆ ಪ್ರಯಾಣದಲ್ಲಿ ಜೊತೆಯಾಗುವವರ ಬೇಟೆ, ಉಳಿವವರನ್ನೂ ಊರುಗಳಿಗೆ ಹೊರಡಿಸುವ ಭರಾಟೆ-ಇವುಗಳೋ ಒಂದೆರಡು ದಿನಕ್ಕೆ ಮುಗಿಯುವಂತದ್ದೇನಲ್ಲ.

ದೂರದ ಊರುಗಳಿಂದ ಹಾರಿಬಂದವರು, ಮನೆಗಳಿಗೆ ತೆರಳದೆ ಹಾಸ್ಟೆಲ್ ಪಿಜಿಗಳಲ್ಲೇ ಉಳಿದವರ ಆಚರಣೆಗಳ ರೂಪವೇ ಹೊಸ ಬಗೆಯದ್ದು. ಸೀನಿಯರ್‌ಗಳ ರೂಮಿನ ಮುಂದೆ ಉದ್ದ ಕ್ಯೂ ನಿಂತು ಸೀರೆ ಉಡಿಸಿಕೊಂಡು, ಅಲಂಕಾರ ಮಾಡಿಕೊಂಡು ಸಂಭ್ರಮಿಸುವ ವಿದ್ಯಾರ್ಥಿನಿಯರು ಒಂದೆಡೆಯಾದರೆ ತಾವು ಉಟ್ಟ ಪಂಚೆಗಳನ್ನು ಸಂಭಾಳಿಸಲು ಒದ್ದಾಡುತ್ತ, ಜುಬ್ಬ-ಶರ್ಟುಗಳ ಇಸ್ತ್ರಿ ಹೋಗದಂತೆ ಕಾಪಾಡಿ

ಕೊಳ್ಳುತ್ತಾ ಓಡಾಡುವ ಹುಡುಗರದ್ದೇ ಮತ್ತೊಂದು ದಂಡು. ದಿನನಿತ್ಯದ ಮೆಸ್ಸಿನ ಊಟಕ್ಕೆ ಹಬ್ಬದ ಹೆಸರಿನಲ್ಲಿ ಒಂದಿಷ್ಟು ರುಚಿ, ವೈವಿಧ್ಯಗಳು ಬಂದು ಸೇರಿ ಸಂತಸವನ್ನುಂಟುಮಾಡುವುದು ನಿಜವೇ ಆದರೂ, ಮನೆಯ ಹಬ್ಬಗಳ ಹಂಬಲವನ್ನು ಅವು ಹೋಗಲಾಡಿಸುವುದು ಸುಳ್ಳು.

ಬದಲಿಗೆ ಇಲ್ಲಿಯ ನಿಜವಾದ ಸಂಭ್ರಮಾಚರಣೆ ನಡಿಯುವುದು ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪದಲ್ಲಿ. ಬಣ್ಣಗಳಿಂದ ಕಂಗೊಳಿಸುವ ಕಾಲೇಜಿನ ಕಟ್ಟಡಕ್ಕೆ ಸಂಕ್ರಾಂತಿ-ಯುಗಾದಿ-ದಸರಾ-ದೀಪಾವಳಿಗಳಿಗೆ ಒಂದೊಂದು ಮಾದರಿಯ ಬೇರೆ ಬೇರೆ ಅಲಂಕಾರ. ಮನೆಗಳಲ್ಲಿ ನಾಲ್ಕು ಕೈಗಳು ತರುತ್ತಿದ್ದ ಸೊಬಗು ಇಲ್ಲಿ ಕೈಗಳು ನಾನ್ನೂರಾದಾಗ ಹತ್ತುಪಟ್ಟಾಗುವುದೇ ಸರಿ. ಇನ್ನೂ ಹಾಡು-ನೃತ್ಯಗಳು ಬಂದು ಪಟ್ಟಿಗೆ ಸೇರಿದರಂತೂ ಕಳೆ ಕಟ್ಟಲಿಕ್ಕೆ ಕಡಿಮೆ ಉಳಿಯುವುದಾದರೂ ಏನು? ಸ್ನೇಹಿತರೊಂದಿಗೆ ಸೇರಿ, ಎಲ್ಲೆಲ್ಲಿಂದಲೋ ಬಂದವರು ಕೂಡಿ ಒಂದು ಕುಟುಂಬವಾಗಿ ಸಂಭ್ರಮಿಸುವ ಈ ಪರಿ, ಇದು ತರುವ ಆ ಹೊಸ ಅನುಭವ, ಹೊಸ ಖುಷಿ ಒಮ್ಮೆಯಾದರೂ ಸವಿಯಲೇ ಬೇಕಾದಂತಹದ್ದು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.

ನಮ್ಮವರನ್ನು, ನಮ್ಮ ಮನೆಯನ್ನು, ನಮ್ಮದೆಂಬ ಬಹಳಷ್ಟನ್ನು ಹಿಂದೆ ಬಿಟ್ಟು ಹೊಸ ಜಾಗಕ್ಕೆ ಬಂದು, ಇಲ್ಲಿಯ ರೀತಿ-ನೀತಿಗಳಿಗೆ ಒಗ್ಗಿಕೊಳ್ಳುವ ತರಾತುರಿಯಲ್ಲಿರುವ ಎಷ್ಟೋ ಮಂದಿಗೆ ಈ ಹೊಸತೆಲ್ಲವೂ ಬಿಟ್ಟು ಬಂದಿದ್ದರ ಗೊಂದಲ-ಬೇಸರಗಳನ್ನು ಹೋಗಲಾಡಿಸುವಲ್ಲಿ ಸಹಾಯಕವಾಗುವುದು ನಿಜ. ಹೊಸ ಜಾಗಕ್ಕೆ, ಹೊಸ ರೀತಿಗಳಿಗೆ ಹೊಂದಿಕೊಂಡು ಅವನ್ನು ಸಂಭ್ರಮಿಸುವುದು ಖಂಡಿತವಾಗಿಯೂ ತಪ್ಪಲ್ಲದಿದ್ದರೂ, ಹೊಸದರ ಗುಂಗಿನಲ್ಲಿ ನಾವು ನಾವಾಗಿ ರೂಪುಗೊಳ್ಳುವಲ್ಲಿ ದೊಡ್ಡ ಪಾತ್ರವಹಿಸಿದ್ದ ನಮ್ಮ ಮನೆಗಳ ಸಂಸ್ಕೃತಿ, ರೀತಿ-ನೀತಿ, ಆಚರಣೆಗಳನ್ನು ಸಂಪೂರ್ಣವಾಗಿ ಮರೆತು ಪಕ್ಕಕ್ಕೆ ಸರಿಸುವುದೂ ಸರಿಯಲ್ಲ.

ಹಬ್ಬಗಳೆಂದರೆ ಬರಿಯ ತೋರಣ-ಹೂರಣ-ಹೊಸ ಬಟ್ಟೆಗಳ ಬೆಡಗು ಎಂದಷ್ಟೇ ಭಾವಿಸಿದ್ದ ನಮಗೆ ಬೇರುಗಳಿಂದ ದೂರ ಸರಿದು ಇಲ್ಲಿನ ನೀರವತೆಯನ್ನು, ಒಂಟಿತನಗಳನ್ನೂ ಕಳೆದುಕೊಳ್ಳುವ ಮಾಧ್ಯಮಗಳು ಇವಾದಾಗ ಮಾತ್ರವೇ 'ಹಬ್ಬಗಳು ಕೇವಲ ಆಚರಣೆಗಳು ಮಾತ್ರವಲ್ಲ, ಬದಲಿಗೆ ಅವು ಒಂದು ರೀತಿಯ ಭಾವನಾತ್ಮಕ ಕೊಂಡಿಗಳು' ಎಂಬುದರ ಅರಿವಾಗುತ್ತದೆ. ಇಲ್ಲಿ ನಡೆವ ಹಬ್ಬಗಳಲ್ಲಿ ಬಣ್ಣಗಳ ಬೆಡಗಿವೆಯೇ ಹೊರತು ಭಾವನೆಗಳ ಒಡಲಿಲ್ಲ ಎಂಬುದು ಮನಸ್ಸಿಗೆ ನಾಟುತ್ತದೆ. ಹೊಸ ದಿಕ್ಕಿನಿಂದ ಬೀಸುವ ಗಾಳಿ ಹೊತ್ತು ತರುವ ಕಂಪನ್ನು ನಮ್ಮದಾಗಿಸಿಕೊಳ್ಳೋಣ, ಆ ಗಾಳಿಯೇ ನಮ್ಮನ್ನು ಹೊತ್ತೊಯ್ಯುವಷ್ಟು ದುರ್ಬಲರಾಗುವುದು ಬೇಡ. ಹಾಡು-ನೃತ್ಯಗಳ, ಬಣ್ಣದ ಸೀರೆ-ಶರ್ಟುಗಳ ಸಂಭ್ರಮಾಚರಣೆ ಇರಲಿ. ಆದರೆ ಅಮ್ಮ ಕೊಡುತ್ತಿದ್ದ ಎಲೆ-ಅಡಿಕೆ, ಅಪ್ಪನ ಪೂಜೆಯ ತಯಾರಿ, ಅಜ್ಜಿ–ತಾತಂದಿರ ಆಶೀರ್ವಾದದ ನುಡಿಗಳೂ ನೆನಪಿನಲ್ಲಿ ಉಳಿಯಲಿ, ಮುಂದೊಂದು ದಿನ ನಮ್ಮ ಆಚರಣೆಗಳ ರೀತಿಯೂ ಅದೇ ಆಗಲಿ.

**

ಮನೆಯಲ್ಲಿ ಹಬ್ಬವೆಂದರೆ ಅದರ ಸಂಭ್ರಮವೇ ಬೇರೆ. ಎಂದೋ ವರ್ಷದ ಹಿಂದೆ ಕಂಡ ಸಂಬಂಧಿಕರು ಮತ್ತೆ ಕಾಣ ಸಿಗುವುದು ಹಬ್ಬದ ದಿನವೇ. ಆದರೆ ಹಾಸ್ಟೆಲ್ – ಪಿಜಿಗಳಲ್ಲಿ ಹಬ್ಬದ ಸಂಭ್ರಮವೇ ಬೇರೆ. ಎಲ್ಲಿಂದಲ್ಲೋ ಬಂದು ಜೊತೆಯಾದ ಜೀವಗಳೇ ಅಲ್ಲೇ ಸಂಬಂಧಿಗಳಾಗುತ್ತಾರೆ. ಮನೆಯವರು ಜೊತೆಗಿಲ್ಲದಿದ್ದರು ನಾನು ನಿನಗೆ, ನೀನು ನನಗೆ ಎಂದುಕೊಂಡು ಬಂಧುಗಳಂತೆ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry