ಭಾನುವಾರ, ಸೆಪ್ಟೆಂಬರ್ 15, 2019
23 °C

ಮೀಮ್‌ಗಳಿಗೆ ಆಹಾರ ಆಯ್ತು ಬಿಗ್‌ಬಾಸ್‌

Published:
Updated:
ಮೀಮ್‌ಗಳಿಗೆ ಆಹಾರ ಆಯ್ತು ಬಿಗ್‌ಬಾಸ್‌

ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್‌ಬಾಸ್ ಸ್ಪರ್ಧಿಗಳದ್ದೇ ಹವಾ. ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ 17 ಸ್ಪರ್ಧಿಗಳಿದ್ದರೂ, ಹೆಚ್ಚು ಸದ್ದು ಮಾಡುತ್ತಿರುವುದು ನಿವೇದಿತಾ ಗೌಡ, ಮೇಘಾ ಹಾಗೂ ಶ್ರುತಿ ಪ್ರಕಾಶ್‌.

ಮೈಸೂರು ಮೂಲದ ನಿವೇದಿತಾ ಗೌಡ ಅವರು ಕನ್ನಡವನ್ನು ಇಂಗ್ಲಿಷ್‌ನಂತೆ ಮಾತನಾಡುವುದು, ನಟನೆ ಮಾಡುವುದನ್ನು ಟೀಕಿಸುವ ಮೀಮ್‌ಗಳು ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಹರಿದಾಡುತ್ತಿವೆ. ‘ಬಿಗ್‌ಬಾಸ್‌ ಮನೆಯಲ್ಲಿ ನಾನು ಯಾರಿಗೂ ಹರ್ಟ್‌ ಮಾಡಲ್ಲ‘ ಎಂದು ಹೇಳಿದ ಮಾತಿಗೆ ಪ್ರತಿಕ್ರಿಯೆಯಾಗಿ, ‘ಇವಳ ಕನ್ನಡ ಕೇಳಿ ಕೇಳಿ ಎದೆನೋವು ಬಂದಿದೆ‘ ಎಂದೂ, ತಮ್ಮ ಸರ್‌ನೇಮ್‌ ಗೌಡ ಎಂಬುದನ್ನು ಅವರು ಕಂಗ್ಲಿಷ್ ಧಾಟಿಯಲ್ಲಿ ‘ಗೌಜ..‘ ಎಂದು ಉಚ್ಚರಿಸುವುದನ್ನು ಟೀಕಿಸುವ ನೂರಾರು ಮೀಮ್‌ಗಳು ಇಲ್ಲಿವೆ.

ನಿವೇದಿತಾ ಹಾರ್ಲಿಕ್ಸ್‌ ಕಳುಹಿಸಿಕೊಡುವಂತೆ ಬಿಗ್‌ಬಾಸ್‌ಗೆ ಮನವಿ ಮಾಡಿದ್ದಕ್ಕೆ ‘ಮಕ್ಕಳನ್ನು ಬಿಗ್‌ಬಾಸ್‌ಗೆ ಕಳಿಸಿದ್ರೆ ಹೀಗೇ ಆಗೋದು’, ‘ನಿವೇದಿತಾ ಹಾರ್ಲಿಕ್ಸ್‌ ಬ್ರಾಂಡ್‌ನ ಮುಂದಿನ ರಾಯಭಾರಿ‘ ಎಂಬಂತಹ ಶೀರ್ಷಿಕೆಗಳನ್ನು ನೀಡಿ ಟ್ರೋಲ್ ಮಾಡಲಾಗಿದೆ. ಆದ್ರೆ ಇವರ ಅಭಿಮಾನಿಗಳು ಮಾತ್ರ ಇಂತಹ ಮೀಮ್‌ಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ‘ಏನೇ ಆದ್ರೂ ಬಿಗ್‌ಬಾಸ್‌ ಸೀಸನ್‌ 5ರಲ್ಲಿ ಗೌಡ್ರದ್ದೇ ಹವಾ’ ಎಂದು ಕಮೆಂಟ್‌ ಮಾಡಿದ್ದಾರೆ.

ನಿವೇದಿತಾ ಗೌಡ ಡಬ್‌ಸ್ಮಾಶ್‌ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡವರು. ಅವರು ಬಿಗ್‌ಬಾಸ್‌ಗೆ ಹೋಗುವ ಮುಂಚೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಡಬ್‌ಸ್ಮಾಶ್‌ ವಿಡಿಯೊಗಳನ್ನು ಅವರ ಅಭಿಮಾನಿಗಳು ಹೆಚ್ಚು ಶೇರ್‌ ಮಾಡಿಕೊಳ್ಳುತ್ತಿದ್ದಾರೆ. ‘ಮುಂಗಾರು ಮಳೆ’ ಸಿನಿಮಾದ ಹಾಡಿನ ಅವರ ಡಬ್‌ಸ್ಮಾಶ್‌ ವಿಡಿಯೊಗೆ ‘ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಈಗ ಕಾರಣ ಗೊತ್ತಾಯ್ತು‘ ಎಂಬಂತಹ ತಲೆಬರಹ ನೀಡಿರುವ ವಿಡಿಯೊಗಳು ನಗೆಯುಕ್ಕಿಸುತ್ತವೆ.

ಜನಸಾಮಾನ್ಯರ ಕೋಟಾದಲ್ಲಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಮತ್ತೊಬ್ಬರು ಕೊಡಗಿನ ಮೇಘಾ. ಇವರು ಎಲ್ಲರನ್ನೂ ಅಣ್ಣಾ, ಅಕ್ಕ ಎಂದು ಇವರು ಕರೆಯುವ ಶೈಲಿಗೂ ಮೀಮ್‌ಗಳನ್ನು ಸೃಷ್ಟಿಸಿದ್ದಾರೆ ನೆಟಿಜನ್ನರು.

ನಟ ಯಶ್‌ ಅವರ ‘ಅಣ್ತಾಮ್ಮಾಸ್‌’ ಡೈಲಾಗ್‌ ಅನ್ನು ಮೇಘಾ ಅವರ ಚಿತ್ರದೊಂದಿಗೆ ಜೋಡಿಸಿ ‘ಅಕ್ತಂಗಿ‘ ಎಂದು ಟ್ರೋಲ್‌ ಮಾಡಿದ್ದಾರೆ. ಮೇಘಾ ಬಿಗ್‌ಬಾಸ್‌ ಮನೆಗೆ ‘ಡೆವಿಲ್‌ ಇಸ್‌ ಹಿಯರ್‌’ ಎಂದು ಹೇಳುತ್ತಲೇ ಒಳ ಪ್ರವೇಶಿಸಿದ್ದರು. ಮೇಘಾ ಅವರ ಫೋಟೊದಲ್ಲಿ ‘ಡೆವಿಲ್‌ ಇಸ್‌ ಹಿಯರ್‌’ ಎಂದು ಇದ್ದರೆ, ಅದರ ಜೊತೆ ಮತ್ತೊಬ್ಬ ಸ್ಪರ್ಧಿ ಸಮೀರಾಚಾರ್ಯ ಅವರ ಫೋಟೊವನ್ನು ಟ್ಯಾಗ್‌ ಮಾಡಿ ‘ದೆವ್ವ ಓಡಿಸುವುದರಲ್ಲಿ ನಾನು ಫೇಮಸ್‌’ ಎಂದು ಮೀಮ್ ರೂಪಿಸಲಾಗಿದೆ.

ಮುದ್ದುಮುದ್ದಾಗಿ ಬೆಳಗಾವಿಯ ಕನ್ನಡ ಮಾತನಾಡುವ ನಟಿ ಶ್ರುತಿ ಪ್ರಕಾಶ್‌ ಸಹ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಮುಂಬೈನಲ್ಲೇ ಹುಟ್ಟಿ ಬೆಳೆದಿದ್ದರಿಂದ ಕನ್ನಡತಿ ಆಗಿದ್ದರೂ ಸರಾಗವಾಗಿ ಕನ್ನಡ ಮಾತನಾಡಲು ಬರಲ್ಲ. ಸದ್ಯ ಪಡ್ಡೆ ಹುಡುಗರ ಫೇವರಿಟ್‌ ಆಗಿದ್ದಾರೆ. ಇವರ ಸೌಂದರ್ಯವನ್ನು ಹೊಗಳುವ ಮೀಮ್‌ಗಳೇ ಅತಿ ಹೆಚ್ಚು ಟ್ರೋಲ್‌ ಪುಟಗಳಲ್ಲಿ ಸಿಗುತ್ತವೆ.

‘ಬಿಗ್‌ ಬಾಸ್‌ ನೋಡಲು ಒಂದೇ ಕಾರಣ ಶ್ರುತಿ ಪ್ರಕಾಶ್‌’, ‘ಈ ಸುಂದರಿಯ ಪಕ್ಕದಲ್ಲಿ ಯಾರೇ ಇದ್ದರೂ ಅವರತ್ತ ಕಣ್ಣೇ ಹೋಗುವುದಿಲ್ಲ’, ‘ಇನ್ಮೇಲಿಂದ ಇವ್ರ್‌ ಅಪ್ಪ ನಂಗೆ ಮಾವ. ನಿಮ್ಮ ಅಕ್ಕಂಗೆ ದಿನಾ ವೋಟ್‌ ಮಾಡಿ...' ಹೀಗೆ ಶೃತಿ ಗುಣಗಾನ ಮಾಡುವ ಮೀಮ್‌ಗಳು ಸಾಕಷ್ಟು ಹರಿದಾಡುತ್ತಿವೆ.

ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್‌ ಅವರು ಮಾತುಮಾತಿಗೂ ‘ನಾನು ಅಂದುಕೊಂಡಿದ್ದೆ’ ಎನ್ನುತ್ತಿರುತ್ತಾರೆ. ಇದಕ್ಕೆ ಅನಕೊಂಡ ಹಾವಿನ ಚಿತ್ರದೊಂದಿಗೆ ಟ್ಯಾಗ್‌ ಮಾಡಿ ‘ನಾನು ಅನಕೊಂಡ‘ ಶೀರ್ಷಿಕೆ ನೀಡಿರುವುದು ಬಿಗ್‌ಬಾಸ್‌ ಕಾರ್ಯಕ್ರಮವನ್ನು ಜನ ಹೇಗೆ ನೊಡುತ್ತಾರೆ ಎಂಬುದಕ್ಕೆ ಸಾಕ್ಷಿಯಂತಿದೆ.

ಬಿಗ್‌ಬಾಸ್‌ ಇತರ ಸ್ಪರ್ಧಿಗಳ ಬಗ್ಗೆಯೂ ಅಭಿಮಾನಿಗಳು ನೂರಾರು ಮೀಮ್‌ಗಳನ್ನು ಸೃಷ್ಟಿಸಿದ್ದಾರೆ. ಸಮೀರಾಚಾರ್ಯ, ಚಂದನ್‌ ಶೆಟ್ಟಿ, ನಟಿ ಕೃಷಿ ತಾಪಂಡ, ಮೈಸೂರಿನ ಸುಮಾ ಇವರ ಬಗ್ಗೆಯೂ ಪರ ವಿರೋಧದ ಮೀಮ್‌ಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನಗೆಯುಕ್ಕಿಸುವ ಮೀಮ್‌ಗಳ ಜೊತೆಗೇ ಕೆಲವು ಅಶ್ಲೀಲ, ಅತಿರಂಜಿತ, ಕೆಟ್ಟ ಭಾಷೆ ಬಳಸಿದ ಮೀಮ್‌ಗಳೂ ಸಾಕಷ್ಟಿವೆ.

Post Comments (+)