ಭಾನುವಾರ, ಸೆಪ್ಟೆಂಬರ್ 22, 2019
22 °C

ರಂಗದ ಮೇಲೆ ಮಾಯಿಯ ಅವತಾರ

Published:
Updated:
ರಂಗದ ಮೇಲೆ ಮಾಯಿಯ ಅವತಾರ

ಕುಸುರಿ ಕೆಲಸವನ್ನು ಶ್ರದ್ಧೆ ಮತ್ತು ಪರಿಶ್ರಮದಿಂದ ಮಾಡಿದರೆ ನಾಟಕವನ್ನು ಎಷ್ಟು ಸೊಗಸಾಗಿ ಕಟ್ಟಬಹುದುಎಂಬುದಕ್ಕೆಜೀವನ್‌ರಾಂ ಸುಳ್ಯ ನಿರ್ದೇಶನದ ನಾಟಕಗಳೇ ಸಾಕ್ಷಿ. ಪ್ರಸಾಧನ, ಸಂಗೀತದಲ್ಲಿ ಜೀವನ್‌ರಾಂ ಪ್ರವೀಣರು. ನಾಲ್ಕಾರು ವಾದ್ಯಗಳನ್ನು ನುಡಿಸಬಲ್ಲವರು. ಒಂದು ನಾಟಕ ಪ್ರದರ್ಶನಕ್ಕೆ ಬೇಕಾದ ಬೆಳಕು ಸಂಯೋಜನೆ, ವಸ್ತ್ರವಿನ್ಯಾಸ, ರಂಗತಂತ್ರ ಎಲ್ಲವೂ ಅವರಿಗೆಗೊತ್ತು. ಅಂತೆಯೇ ಅವರ ನಿರ್ದೇಶನದ ನಾಟಕಗಳು ಜಯಭೇರಿ ಭಾರಿಸಿವೆ. ನಾಲ್ಕಾರು ನಾಟಕಗಳು ನೂರು ಇನ್ನೂರು ಮುನ್ನೂರು ಪ್ರದರ್ಶನದ ಗಡಿ ದಾಟಿವೆ.

ಚಂದ್ರಶೇಖರ ಕಂಬಾರರ ‘ಮಹಾಮಾಯಿ’ ನಾಟಕವನ್ನು ನೂರು ದಾಟಿಸಿದ ಶ್ರೇಯಸ್ಸುಅವರದು. ಅಕ್ಟೋಬರ್ 8 ರಂದು ಈ ನಾಟಕದ 103ನೇ ಪ್ರದರ್ಶನ ಬೆಂಗಳೂರಿನ ಟ್ಯಾಗೋರ್‌ ನಗರದಲ್ಲಿರುವ ಸಿರಿಗೆರೆ ತರಳುಬಾಳು ಭವನದಲ್ಲಿ ಅತ್ಯುತ್ಸಾಹದ ಪ್ರಯೋಗ ಕಂಡಿತು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಡಾ. ಎಂ. ಮೋಹನ ಆಳ್ವ ಈ ನಾಟಕದ ನಿರ್ಮಾಪಕರು. ಆಳ್ವಾಸ್‌ನಲ್ಲಿ ಜೀವನ್‌ರಾಂ ರಂಗಶಿಕ್ಷಕರು. ಅಲ್ಲಿನ ವಿದ್ಯಾರ್ಥಿಗಳೇ ಈ ನಾಟಕದ ಪಾತ್ರಧಾರಿಗಳು. ಪರಿಕರ, ಮುಖವರ್ಣಿಕೆ, ಬೆಳಕು, ಸಂಗೀತಅಷ್ಟನ್ನೇ ನೆಚ್ಚದೆ- ಅಭಿನಯಕ್ಕೆಇನ್ನೂ ಹೆಚ್ಚಿನ ಪ್ರಾಧಾನ್ಯವನ್ನು ಅವರು ನೀಡಿದರು. ಅಂತೆಯೇ ವಿದ್ಯಾರ್ಥಿಗಳಿಂದ ಅತ್ಯುತ್ತಮ ಅಭಿನಯ ಹೊರತೆಗೆಸಲು ಅವರಿಗೆ ಸಾಧ್ಯವಾಯಿತು.

‘ಮಹಾಮಾಯಿ’ ಶೆಟವಿ ತಾಯಿಯ ಕತೆ. ಜಗತ್ತಿನ ಎಲ್ಲ ಕೇಡಿನ ಪ್ರತಿನಿಧಿ ಅವಳು. ಸಂಜೀವ ಶಿವ ಅವಳ ಸಾಕುಮಗ. ಅವನೊಬ್ಬ ಪರಿಣತ ವೈದ್ಯ. ಜೀವರಕ್ಷಣೆ ಅವನ ಕಾಯಕ. ಅಂತಃಕರಣವುಳ್ಳ ವೈದ್ಯ. ಅವನ ತಾಯಿ ಶೆಟವಿ ಇದಕ್ಕೆ ವ್ಯತಿರಿಕ್ತ. ಒಳ್ಳೆಯವರು ಕೆಟ್ಟವರು ಎನ್ನದೆ ತನಗಾಗದವರ ಜೀವ ತೆಗೆಯುವುದೇ ಅವಳ ಕೃತ್ಯ. ಸಾವಿನ ಅಧಿದೇವತೆಯಾದ ಅವಳು ಕೆಲವೊಮ್ಮೆ ಮುದುಕಿಯಾಗಿ, ಗರುಡಪಕ್ಷಿಯಾಗಿ, ಶಿವನಾಗಿ ಕಾಡುತ್ತಾಳೆ. ವೈವಿಧ್ಯಮಯ ಪಾತ್ರಗಳು ಇದರಿಂದ ಸೃಷ್ಟಿಯಾಗಿವೆ.

ರೋಗಿಗಳಿಗೆ ಮರುಜೀವ ನೀಡುವ ಸಂಜೀವ ಶಿವನು- ಸಾವು ನೋವಿನ ಮಧ್ಯೆ ನರಳುತ್ತಿರುವ ರಾಜಕುಮಾರಿಯನ್ನು ರಕ್ಷಿಸುವ ಯತ್ನ ಮಾಡುತ್ತಾನೆ. ಕೊಲ್ಲುವುದರಲ್ಲೇ ಆನಂದ ಅನುಭವಿಸುವ ಅವನ ತಾಯಿ ಶೆಟವಿಗೆ ಅದು ಬೇಡವಾಗಿದೆ. ಇಲ್ಲಿಂದ ಮುಂದೆ ಒಳಿತು- ಕೆಡುಕು, ಸಾವು- ಜೀವದ ಮಧ್ಯೆ ಸುದೀರ್ಘ ಸಂಘರ್ಷವೇ ನಡೆಯುತ್ತದೆ. ಮನುಷ್ಯ ಪ್ರಯತ್ನದೆದುರು ಇನ್ನೇನು ಮೃತ್ಯುಸ್ವರೂಪಳಿಗೆ ಸೋಲು ಕಾದಿದೆಎನ್ನುವ ಹಂತ ತಲುಪುವ ಹೊತ್ತಿಗೆ ಮತ್ತೆ ಶೆಟವಿಯೇ ವಿಜೃಂಭಿಸುತ್ತಾಳೆ.

ಮಹಾಕಾವ್ಯ, ಕ್ಲಾಸಿಕ್‌ ಕೃತಿಯ ಎಲ್ಲ ಲಕ್ಷಣಗಳನ್ನು ಈ ಕೃತಿ ಒಳಗೊಂಡಿದೆ. ಇಂಗ್ಲಿಷ್‌ ನಾಟಕಗಳ ಖಳನಾಯಕ ಶೆಟನ್. ಇಲ್ಲಿ ಆ ಪಾತ್ರ ಶೆಟವಿಯದು. ನಾಲ್ಕಾರು ಪೂರಕ ಪಾತ್ರಗಳನ್ನೇ ಸೃಷ್ಟಿಸಿ ದೃಶ್ಯಕಾವ್ಯವಾಗಿ ಕಟ್ಟಿಕೊಡುವ ನಿರ್ದೇಶಕರ ಪ್ರತಿಭೆಗೆ ನಾಟಕದ ತುಂಬ ಅನೇಕ ಉದಾಹರಣೆಗಳು ಸಿಗುತ್ತವೆ. ನಾಟಕದ ಉತ್ತರಾರ್ಧದಲ್ಲಿ ರಂಗದ ತುಂಬೆಲ್ಲ ಸೃಷ್ಟಿಸಿದ ಹತ್ತಾರು ಸೇಡುಮಾರಿಗಳು ಇದಕ್ಕೆ ಸಾಕ್ಷಿ. (ಶೇಕ್ಸ್‌ಪಿಯರ್ ನಾಟಕಗಳಲ್ಲಿ ಸಾಮಾನ್ಯವಾಗಿ ಇಂತಹ ಸೇಡುಮಾರಿಗಳು ಅಥವಾ ವಿಚಸ್‌ ಅಥವಾ ಮಾಟಗಾತಿಯರು ಮೂರ‍್ನಾಲ್ಕು ಮಂದಿ ಇರುತ್ತಾರೆ) ಇಂತಹ ಕಲ್ಪನಾ ವಿಲಾಸಗಳು ಬೀಭತ್ಸ ರಸಾನುಭವವನ್ನು ಪರಿಣಾಮಕಾರಿಯಾಗಿ ಸೃಷ್ಟಿಸುತ್ತವೆ.

ಸಂಗೀತ ಸಾಂಗತ್ಯ ನೀಡಿರುವ ಮಯೂರ ಅಂಬೆಕಲ್ಲು, ಸ್ವಪ್ನಶ್ರೀ ಅಡಿಗ, ನಿಖಿಲ್‌ ಪೈ, ಮನುಜ ನೇಹಿಗ, ಶಶಾಂಕ ಅವರುಗಳ ಮುಂದೆ ನಾಲ್ಕಾರು ವಾದ್ಯಗಳೇ ಇದ್ದವು. ನಾಟಕದ ಉದ್ದಕ್ಕೂ ಕೇಡೇ ವಿಜೃಂಭಿಸುವ ಕಾರಣಕ್ಕೆ ಕೆಲವೆಡೆ ಸಂಗೀತದಲ್ಲಿ ಅತಿಯಾದ ಬೀಭತ್ಸ ರಸ ಸೃಷ್ಟಿ ಅನಿವಾರ್ಯವೂ ಆಗಿತ್ತು! ಒಟ್ಟಾರೆ ಹಾಡು ಹಾಗೂ ವಾದ್ಯಗಳ ಬಳಕೆಯಲ್ಲಿ ಔಚಿತ್ಯಪೂರ್ಣತೆಯಿತ್ತು. ಪ್ರಸಾಧನ ಸಹಕಾರ ನೀಡಿದವರು ಶಿವರಾಮ ಕಲ್ಮಡ್ಕ. ಬೆಳಕು ಸಂಯೋಜನೆಯ ಸಹಕಾರ ನಿತಿನ್‌ಉಡುಪಿ, ಪುನಿತ್.

ಚಂದನ, ಮೇಘ, ತಿಮ್ಮನಗೌಡ, ದೀಪ್ತಿ, ನಾಗಶ್ರೀ ಹೆಗಡೆ, ಪ್ರಜ್ವಲ್ ಭಾರಧ್ವಾಜ್, ತೇಜಸ್, ರೋಹಿತ್, ಮಧುಚಂದ್ರ, ಅಂಬಿಕಾ, ಅಭಿಷೇಕ್, ವಿನಯ್, ಪುನೀತ್, ಧನ್ಯ, ಮಧುಚಂದ್ರ, ನಿತೀಶ್, ಗಗನ್, ವಿನಯ್, ನಾಗಶ್ರೀ, ಅಂಬಿಕಾ ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ಅಭಿನಯಿಸಿದರು.

ಶೆಟವಿ ತಾಯಿಯಾಗಿ ಸ್ನೇಹಾ ಹೆಗಡೆ, ಗಿರಿಮಲ್ಲಿಗೆಯಾಗಿ ಸುಪ್ರಿಯಾ, ಮುದುಕಿಯಾಗಿ ವಿಭಾಡೋಂಗ್ರೆ, ಮದನ ತಿಲಕನಾಗಿ ಡಾನೇಶ್, ಸಂಜೀವ ಶಿವನಾಗಿ ಸುಶಾಂತ ಮಂಗರವಳ್ಳಿ ತಮಗೆ ಸಿಕ್ಕ ಸದವಕಾಶದಲ್ಲಿ ಸಮರ್ಥವಾಗಿ ನಟಿಸಿದರು.

ನಟ ನಟಿಯರು ಮಾತ್ರವಲ್ಲ- ಪರಿಕರ, ಸಂಗೀತ, ಪ್ರಸಾಧನ ಎಲ್ಲವೂ ಇಲ್ಲಿ ಪಾತ್ರಧಾರಿಗಳೇ. ತಮ್ಮ ತಮ್ಮ ಪಾತ್ರಗಳನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಿದರು, ನಟ ನಟಿಯರ ಅಪ್ಪಟ ಅಭಿನಯ, ಅಸ್ಖಲಿತ ಮಾತುಗಾರಿಕೆಯಂತೂ ಅದನ್ನು ಮೀರಿಸುವಂತಿತ್ತು.

Post Comments (+)