ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಚುನಾವಣೆ: ಹಾರ್ದಿಕ್‌, ಮೇವಾನಿಗೆ ಕಾಂಗ್ರೆಸ್‌ ಆಹ್ವಾನ

Last Updated 21 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗುಜರಾತ್‌ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಹಾರ್ದಿಕ್‌ ಪಟೇಲ್‌, ಅಲ್ಪೆಶ್‌ ಠಾಕೋರ್‌ ಮತ್ತು ಜಿಗ್ನೇಶ್‌ ಮೇವಾನಿ ಅವರಿಗೆ ಮುಂದಿನ ಚುನಾವಣೆಯಲ್ಲಿ ತನ್ನೊಂದಿಗೆ ಕೈಜೋಡಿಸುವಂತೆ ಕಾಂಗ್ರೆಸ್‌ ಪಕ್ಷ ಬಹಿರಂಗ ಆಹ್ವಾನ ನೀಡಿದೆ.

ಜೊತೆಗೆ, ಆಡಳಿತಾರೂಢ ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಹೋರಾಡಲು ಮೈತ್ರಿ ಮಾಡಿಕೊಳ್ಳುವುದಕ್ಕಾಗಿ ಆಮ್‌ ಆದ್ಮಿ ಪಕ್ಷ (ಎಎಪಿ), ಜೆಡಿಯು ಮತ್ತು ಎನ್‌ಸಿಪಿಗಳಿಗೂ ಅದು ಆಮಂತ್ರಣ ನೀಡಿದೆ.

‘ಕಾಂಗ್ರೆಸ್‌ನ ವಿಜಯ ಯಾತ್ರೆ ಆರಂಭವಾಗಿದೆ. 125 ಕ್ಷೇತ್ರಗಳಲ್ಲಿ ಈ ಯಾತ್ರೆ ನಡೆಯಲಿದೆ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಗುಜರಾತ್‌ನ ಅತ್ಯಂತ ಪ್ರಮುಖ ವ್ಯಕ್ತಿಗಳಾದ ಹಾರ್ದಿಕ್‌, ಅಲ್ಪೆಶ್‌ ಮತ್ತು ಜಿಗ್ನೇಶ್‌ ಅವರು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸುವಂತೆ ಆಹ್ವಾನ ನೀಡಲು ನಾವು ಬಯಸುತ್ತೇವೆ’ ಎಂದು ಗುಜರಾತ್‌  ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿನ್ಹ ಸೋಲಂಕಿ ಹೇಳಿದ್ದಾರೆ.

ಗುಜರಾತ್‌ನಲ್ಲಿ 22 ವರ್ಷಗಳಿಂದ ಅಧಿಕಾರದಿಂದ ದೂರ ಇರುವ ಕಾಂಗ್ರೆಸ್‌ ಪಕ್ಷವು, ರಾಜ್ಯ ರಾಜಕಾರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅನುಪಸ್ಥಿತಿಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಜೊತೆಗೆ ಪಟೇಲ್‌, ಇತರೆ ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳು ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳ ಲಾಭ ಪಡೆಯಲೂ ಯೋಚಿಸುತ್ತಿದೆ.

ಹಾರ್ದಿಕ್‌ ಅವರನ್ನು ‘ಯುವ ನಾಯಕ’ ಎಂದು ಬಣ್ಣಿಸಿರುವ ಸೋಲಂಕಿ, ಭವಿಷ್ಯದಲ್ಲಿ ಕಾಂಗ್ರೆಸ್‌ನಿಂದ ಅವರಿಗೆ ಟಿಕೆಟ್‌ ನೀಡುವುದಕ್ಕೆ ಪಕ್ಷ ಮುಕ್ತವಾಗಿದೆ ಎಂದು ಹೇಳಿದ್ದಾರೆ.

‘ಪಟೇಲರಿಗೆ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡುತ್ತಿರುವ ಸಮಿತಿಯ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ವಿರುದ್ಧ ಕೋಪಗೊಂಡಿದ್ದಾರೆ. ಅವರೆಲ್ಲರನ್ನು ಮತ್ತು ಇಡೀ ಪಟೇಲ್‌ ಸಮುದಾಯದವರನ್ನು ಕಾಂಗ್ರೆಸ್‌ಗೆ ನಾನು ಆಹ್ವಾನಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಮೂರು ಸಮುದಾಯಗಳ (ಪಟೇಲ್‌, ಒಬಿಸಿ ಮತ್ತು ದಲಿತ) ಮುಖಂಡರ ಬೇಡಿಕೆಗಳಿಗೆ ಬೆಂಬಲ ನೀಡಲು ಕಾಂಗ್ರೆಸ್‌ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಸೇರಲಿರುವ ಅಲ್ಪೆಶ್‌ ಠಾಕೋರ್‌ 
ನವದೆಹಲಿ: ಗುಜರಾತ್‌ನ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ನಾಯಕ ಅಲ್ಪೆಶ್‌ ಠಾಕೋರ್‌ ಅವರು ಶನಿವಾರ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್‌ ಪಕ್ಷ ಸೇರುವ ಘೋಷಣೆ ಮಾಡಿದ್ದಾರೆ.

ಒಬಿಸಿ ಸಮುದಾಯದ ಪ್ರಭಾವಿ ನಾಯಕ ಠಾಕೋರ್‌ ಅವರ ಈ ನಿರ್ಧಾರವು ಗುಜರಾತ್‌ ಚುನಾವಣೆಗೂ ಪೂರ್ವಭಾವಿಯಾಗಿ ಕಾಂಗ್ರೆಸ್‌ಗೆ ಹೆಚ್ಚಿನ ಶಕ್ತಿ ತುಂಬಲಿದೆ.

ಗುಜರಾತ್‌ ಕಾಂಗ್ರೆಸ್‌ ಉಸ್ತುವಾರಿ ಅಶೋಕ್‌ ಗೆಹ್ಲೋಟ್‌ ಮತ್ತು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿನ್ಹ ಸೋಲಂಕಿ ಅವರೊಂದಿಗೆ ರಾಹುಲ್‌ ನಿವಾಸಕ್ಕೆ ತೆರಳಿದ ಠಾಕೋರ್‌, ಒಂದು ಗಂಟೆ ಕಾಲ ಕಾಂಗ್ರೆಸ್‌ ಉಪಾಧ್ಯಕ್ಷರೊಂದಿಗೆ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT