‘ಗೋರೆ’ಯಲ್ಲಿ ಮಿಂದು ಖುಷಿಪಟ್ಟರು

ಮಂಗಳವಾರ, ಜೂನ್ 25, 2019
26 °C

‘ಗೋರೆ’ಯಲ್ಲಿ ಮಿಂದು ಖುಷಿಪಟ್ಟರು

Published:
Updated:
‘ಗೋರೆ’ಯಲ್ಲಿ ಮಿಂದು ಖುಷಿಪಟ್ಟರು

ಚಾಮರಾಜನಗರ: ಸಗಣಿ ರಾಶಿಯ ಮುಂದೆ ನಿಂತು ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದ ಯುವಕರಲ್ಲಿ ಉತ್ಸಾಹ ಚಿಮ್ಮುತ್ತಿತ್ತು. ಪಟಾಕಿಯ ಸದ್ದಿಗಿಂತಲೂ ಪೂಜಾರಿ ಆ ಸಗಣಿ ರಾಶಿಗೆ ಪೂಜೆ ಸಲ್ಲಿಸುವ ಗಳಿಗೆಗಾಗಿ ಅವರು ಕಾತರಿಸುತ್ತಿದ್ದರು. ಪೂಜೆಯಾಗುತ್ತಿದ್ದಂತೆಯೇ ಪೂಜಾರಿಯ ಮೈಮೇಲೆ ದೇವರು ಬಂದಿತು. ಆ ಕ್ಷಣಕ್ಕಾಗಿ ತುದಿಗಾಲಲ್ಲಿ ನಿಂತಿದ್ದ ಯುವಕರು ರಣೋತ್ಸಾಹದ ಕೇಕೆಯೊಂದಿಗೆ ಪರಸ್ಪರ ಸಗಣಿ ಎರಚಾಟಕ್ಕೆ ತೊಡಗಿದರು.

ತಮಿಳುನಾಡಿಗೆ ಸೇರಿದ ಜಿಲ್ಲೆಯ ಗಡಿಭಾಗದ ತಾಳವಾಡಿ ತಾಲ್ಲೂಕಿನ ಗುಮುಟಾಪುರದಲ್ಲಿ ಶನಿವಾರ ಗ್ರಾಮಸ್ಥರು ಸಾಮರಸ್ಯದ ಸಂಕೇತವಾದ ‘ಗೋರೆ ಹಬ್ಬ’ವನ್ನು ಸಂಭ್ರಮದಿಂದ ಆಚರಿಸಿದರು.

ದೀಪಾವಳಿ ವಿಶೇಷ: ಗೋರೆ ಹಬ್ಬ ಗುಮುಟಾಪುರ ಗ್ರಾಮದಲ್ಲಿ ಪ್ರತಿ ದೀಪಾವಳಿಯ ಮಾರನೇ ದಿನ ನಡೆಯುವ ವಿಶಿಷ್ಟ ಆಚರಣೆ. ಸಂಪ್ರದಾಯ, ಭಕ್ತಿಯ ಜತೆಗೆ, ಜಾತಿ ಭೇದವಿಲ್ಲದೆ ಎಲ್ಲರೂ ಸಂಭ್ರಮದಿಂದ ಸೇರಿ ಆಚರಿಸುವ ಗೋರೆ ಹಬ್ಬ ವಿಶೇಷ ಮಹತ್ವ ಪಡೆದಿದೆ.

ತಾಳವಾಡಿ ತಾಲ್ಲೂಕಿನ 35ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕನ್ನಡಿಗರು ನೆಲೆಸಿದ್ದಾರೆ. ಸುತ್ತಮುತ್ತಲ ಗ್ರಾಮಗಳಿಂದ ಬಂದಿದ್ದ ನೂರಾರು ಜನರು ಹಬ್ಬದ ಸಡಗರದಲ್ಲಿ ಭಾಗಿಯಾದರು.

ಯುವಕರು ಬೆಳಿಗ್ಗೆಯಿಂದಲೇ ಗ್ರಾಮದಲ್ಲಿ ಸಗಣಿ ಸಂಗ್ರಹಿಸಿದರು. ತಿಪ್ಪೆಗಳು, ಮನೆಗಳ ಮುಂಭಾಗದಿಂದ ಸಗಣಿಯನ್ನು ಸಂಗ್ರಹಿಸಿ ಎತ್ತಿನಗಾಡಿ, ಟ್ರ್ಯಾಕ್ಟರ್ ಮೂಲಕ ಬೀರೇಶ್ವರ ದೇವಸ್ಥಾನದ ಹಿಂಭಾಗ ದೊಡ್ಡದಾಗಿ ರಾಶಿ ಹಾಕಿದ್ದರು.

ಮಕ್ಕಳೂ ಭಾಗಿ: ತಾಳವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕುಣಿಯುತ್ತ ಗ್ರಾಮದ ಹೊರವಲಯದ ಕಾರ್ಯೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಲಾಯಿತು. ಮೈತುಂಬಾ ಸಗಣಿ ಮೆತ್ತಿಕೊಂಡಿದ್ದ ಮಕ್ಕಳು, ಜತೆಯಲ್ಲಿ ಸಗಣಿ ಮುದ್ದೆಗಳನ್ನು ಕೊಂಡೊಯ್ದಿದ್ದರು. ಅವರನ್ನು ಬೆತ್ತ ಹಿಡಿದ ಊರ ಹಿರಿಯರು ನಿಯಂತ್ರಿಸುತ್ತಿದ್ದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಗಣಿ ಮುದ್ದೆಗಳಿಂದ ಮಕ್ಕಳು ಹೊಡೆದಾಡಿಕೊಂಡರು.

ಕತ್ತೆಯ ಮೆರವಣಿಗೆ: ಅಲ್ಲಿಂದ ಮರಳಿ ಗ್ರಾಮದ ಕಟ್ಟೆಯ ಬಳಿ ಬಂದು ಪೂಜೆ ಸಲ್ಲಿಸಲಾಯಿತು. ಹುಲ್ಲಿನ ಮೀಸೆ, ಗಡ್ಡ ಕಟ್ಟಿಕೊಂಡಿದ್ದ ಕೊಂಡಿಗೆಕಾರರಾದ ಮಹದೇವ ಮತ್ತು ಗುರುಸ್ವಾಮಿ (ಚಾಡಿಕೋರ) ಹಾಗೂ ಯುವಕರು ಕತ್ತೆಯನ್ನು ಹೊತ್ತುಕೊಂಡು ಮೆರವಣಿಗೆ ಹೊರಟರು. ಆಗ ಜನರ ಕೇಕೆ ಮುಗಿಲು ಮುಟ್ಟಿತು. ಅಲ್ಲಿಂದ ದೇವಸ್ಥಾನದತ್ತ ಸವಾರಿ ನಡೆಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರಳಿ, ಬೀರೇಶ್ವರ ದೇವಸ್ಥಾನದ ಮುಂಭಾಗಕ್ಕೆ ಬಂದು ಕತ್ತೆಯನ್ನು ಕೆಳಕ್ಕಿಳಿಸಲಾಯಿತು. ಬೀರಪ್ಪ ದೇವರಿಗೆ ನಮಿಸಿ, ದೇಗುಲದ ಹಿಂಭಾಗದಲ್ಲಿದ್ದ ಸಗಣಿ ರಾಶಿಗೆ ಪೂಜಾರಿ ಪೂಜೆ ಸಲ್ಲಿಸಿದರು. ಕೆಲಹೊತ್ತಿನ ಬಳಿಕ ಆತನ ಮೈಮೇಲೆ ದೇವರು ಬಂದಿತು. ಆ ಕ್ಷಣಕ್ಕಾಗಿ ತುದಿಗಾಲ ಮೇಲೆ ಕಾಯುತ್ತಿದ್ದ ಯುವಕರು ಪರಸ್ಪರ ಸಗಣಿ ಎರಚಾಟ ಆರಂಭಿಸಿದರು. ನೋಡ ನೋಡುತ್ತಿದ್ದಂತೆಯೇ ಎಲ್ಲರೂ ಸಗಣಿಯಲ್ಲಿ ಮಿಂದೆದ್ದರು.

ಸಗಣಿ ಎರಚಾಟ ಪೂರ್ಣಗೊಂಡ ಬಳಿಕ, ಹಂಚಿಕಡ್ಡಿಯಿಂದ ಮಾಡಿದ ಚಾಡಿಕೋರನ ಪ್ರತಿರೂಪವನ್ನು ಗ್ರಾಮಕ್ಕೆ ಸಮೀಪ ಇರುವ ಗುಡ್ಡಕ್ಕೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಲಾಯಿತು. ನಂತರ ಸಗಣಿ ಮೆತ್ತಿಕೊಂಡವರು ಕಟ್ಟೆಯಲ್ಲಿ ಸ್ನಾನ ಮಾಡಿ ದೇಗುಲಕ್ಕೆ ಬಂದು ಚಾಡಿಕೋರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು.

‘28 ವರ್ಷದಿಂದ ಚಾಡಿಕೋರನ ಕೆಲಸ ಮಾಡುತ್ತಿದ್ದೇನೆ. ಇದು ನನ್ನ ತಲೆಮಾರಿನಿಂದ ಬಂದಿದ್ದು. ಯಾವಾಗ ಶುರುವಾಗಿದ್ದೆಂದು ತಿಳಿದಿಲ್ಲ. ಬೀರಪ್ಪ ಒಂದೊಂದು ಕುಟುಂಬಕ್ಕೆ ಒಂದೊಂದು ಹೊಣೆಗಾರಿಕೆ ನೀಡಿದ್ದ. ಅದನ್ನು ಎಲ್ಲರೂ ಪಾಲಿಸುತ್ತಿದ್ದೇವೆ’ ಎಂದು ಚಾಡಿಕೋರ ಮಹದೇವ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೀರಪ್ಪ ದೇವರು ನಂಬಿದವರನ್ನು ಕೈಬಿಡುವುದಿಲ್ಲ. ನಾನು ಶಾಲೆಗೆ ಹೋದವನಲ್ಲ. ಅಕ್ಷರ ತಿಳಿದಿಲ್ಲ. ಆದರೆ, ಅರಣ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿ ಈಗ ಅರಣ್ಯ ರಕ್ಷಕನಾಗಿದ್ದೇನೆ. ಎಲ್ಲ ಬೀರಪ್ಪನ ಕೃಪೆ’ ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry