ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆಗೆ ನಿರ್ಧಾರ

ಮಂಗಳವಾರ, ಜೂನ್ 18, 2019
24 °C

ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆಗೆ ನಿರ್ಧಾರ

Published:
Updated:

ಮೈಸೂರು: ರಾಜ್ಯದ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಪಿಂಚಣಿ ಹಾಗೂ ಇತರ ನಿವೃತ್ತಿ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ನ. 7ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಿದರು.

ಶನಿವಾರ ನಗರದಲ್ಲಿ ನಡೆದ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘವು ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

2006ರ ನಂತರ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಪಿಂಚಣಿ ಸೌಲಭ್ಯ ನೀಡಿಲ್ಲ. ಅಲ್ಲದೇ 1989, 1999, 1991ರಲ್ಲಿ ಸೇವೆಗೆ ಸೇರಿರುವವರಿಗೆ ಸೌಲಭ್ಯದಿಂದ ವಂಚಿಸಲಾಗಿದೆ. ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಸರ್ಕಾರಕ್ಕೆ ನಿರಂತರ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಅನೇಕ ನಿಯೋಗಗಳಿಗೆ ನಿರಾಸೆಯಾಗಿದೆ. ಹಾಗಾಗಿ, ರಾಜ್ಯದ ಸುಮಾರು 20 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರ ಜತೆಗೂಡಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ತಿಳಿಸಿದರು.

‘ಬೆಂಗಳೂರಿನ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ನಂತರ ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ನಮ್ಮ ಬೇಡಿಕೆಗಳನ್ನು ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.

2006ಕ್ಕೂ ಮುನ್ನ ನೇಮಕಗೊಂಡ ಹಲವು ಸರ್ಕಾರಿ ನೌಕರರಿಗೆ ಪಿಂಚಣಿ ಸೌಕರ್ಯ ಸಿಕ್ಕಿಲ್ಲ. ಇವರಿಗೆ ಪಿಂಚಣಿ ಕಾಯ್ದೆಯ ಪ್ರಕಾರ, ಹಳೆಯ ಪಿಂಚಣಿ ನಿಯಾಮವಳಿಗಳ ಪ್ರಕಾರ ಸೌಲಭ್ಯ ನೀಡಬೇಕು. 2006ರ ನಂತರ ನೇಮಕಗೊಂಡವರಿಗೂ ಹಳೆಯ ಪಿಂಚಣಿ ನಿಯಮದಂತೆಯೇ ಸೌಲಭ್ಯ ನೀಡಬೇಕು. ಇದರಿಂದ ಸೌಲಭ್ಯ ನೀಡುವಲ್ಲಿ ಸಮಾನತೆಯನ್ನು ಕಾಯ್ದುಕೊಂಡಂತೆ ಆಗುತ್ತದೆ ಎಂದು ಮಾಹಿತಿ ನೀಡಿದರು.

ಅನುದಾನಿತ ಸಂಸ್ಥೆಗಳಲ್ಲಿ 2006ರಿಂದ ಈಚೆಗೆ ‘ಹೊಸ ಪಿಂಚಣಿ ವ್ಯವಸ್ಥೆ’ (ಎನ್‌ಪಿಎಸ್‌) ಖಾಸಗಿ ಸಂಸ್ಥೆ ಹಾಗೂ ಸರ್ಕಾರದ ಪಾಲಿನ ಪಿಂಚಣಿ ಮೊತ್ತವನ್ನು ಖಾತೆಗೆ ಜಮಾ ಮಾಡಿಲ್ಲ. ಪಿಂಚಣಿ ನಿಯಮದ ಪ್ರಕಾರ ಸರ್ಕಾರವೇ ಈಗ ಮೊತ್ತದ ಪೂರ್ಣ ಪ್ರಮಾಣವನ್ನು ಖಾತೆಗಳಿಗೆ ಜಮಾ ಮಾಡಬೇಕು. ಅಲ್ಲದೇ, ನೀಡದೇ ಇರುವ ಮೊತ್ತಕ್ಕೆ ಬಡ್ಡಿಯನ್ನೂ ಸೇರಿಸಿಕೊಡಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸರ್ಕಾರಿ ನೌಕರರಿಗೆ ಪಿಂಚಣಿ ಸೌಲಭ್ಯ ವಂಚನೆಯಾಗಿರುವುದು ಕರ್ನಾಟಕದಲ್ಲಿ ಮಾತ್ರ. ದೇಶದ ಎಲ್ಲೆಡೆಯೂ ವ್ಯವಸ್ಥೆ ಉತ್ತಮವಾಗೇ ಇದೆ. ಹಾಗಾಗಿ, ರಾಜ್ಯ ಸರ್ಕಾರವು ನೌಕರರ ಹಿತ ಕಾಯಬೇಕು ಎಂದು ಮನವಿ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕೆ.ವೈ.ಹಡಗಲಿ, ಗೌರವ ಅಧ್ಯಕ್ಷ ರಿಯಾಜ್ ಅಹ್ಮದ್ ಸನದಿ, ಬೆಳಗಾವಿ ವಿಭಾಗೀಯ ಅಧ್ಯಕ್ಷ ಎಸ್.ಎಲ್‌.ಜಾದವ್‌, ಕಾಂಗ್ರೆಸ್‌ ಮುಖಂಡ ಎಂ.ಲಕ್ಷ್ಮಣ ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry