ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಅಪೂರ್ಣ; ನಾಗರಿಕರಿಗೆ ಹಿಂಸೆ

Last Updated 23 ಅಕ್ಟೋಬರ್ 2017, 5:40 IST
ಅಕ್ಷರ ಗಾತ್ರ

ಬೀದರ್: ಆರು ತಿಂಗಳ ಹಿಂದೆ ನಗರಸಭೆ ಅಧಿಕಾರಿಗಳು ಓಲ್ಡ್‌ ಸಿಟಿಯಲ್ಲಿರುವ ಮೂರು ರಸ್ತೆಗಳ ವಿಸ್ತರಣೆಗೆ ಚಾಲನೆ ನೀಡಿ, ಅಕ್ರಮ ಕಟ್ಟಡಗಳನ್ನು ಜೆಸಿಬಿ ವಾಹನದ ನೆರವಿನಿಂದ ತೆರವುಗೊಳಿಸಿದ್ದರು.

ರಸ್ತೆಗೆ ಹೊಂದಿಕೊಂಡಿದ್ದ ಅಂಗಡಿ ಮುಂಗಟ್ಟುಗಳ ಗೋಡೆಗಳನ್ನೂ ಕೆಡವಿ ಹಾಕಿದ್ದರು. ನಗರಸಭೆ ಹಾಗೂ ಡಿಯುಡಿಸಿ ಅಧಿಕಾರಿಗಳು ಉತ್ತಮ ರಸ್ತೆ ಹಾಗೂ ಗಟಾರ ನಿರ್ಮಾಣ ಮಾಡಲಿದ್ದಾರೆ ಎಂಬ ವಿಶ್ವಾಸ ಜನರಲ್ಲಿ ಮೂಡಿತ್ತು. ಅದಕ್ಕೆ ಅತಿಕ್ರಮಣ ತೆರವಿಗೆ ಅವರು ಸಹಕರಿಸಿದ್ದರು. ಆದರೆ ಇಲ್ಲಿ ನಡೆಯುತ್ತಿರುವ ಕಳಪೆ ಕಾಮಗಾರಿಯಿಂದ ಜನರ ಲೆಕ್ಕಾಚಾರವೇ ಬುಡಮೇಲಾಗಿದೆ.

ಓಲ್ಡ್‌ಸಿಟಿಯಲ್ಲಿ ಶಹಾಗಂಜ್‌ನಿಂದ ಗವಾನ್ ಚೌಕ್ ಹಾಗೂ ನಯಾಕಮಾನ್‌ನಿಂದ ಚೌಬಾರಾವರೆಗೆ ಎರಡು ಪ್ರಮುಖ ರಸ್ತೆಗಳಿವೆ. ಈ ಎರಡೂ ಮುಖ್ಯ ರಸ್ತೆಗಳಿಗೆ ಆಸ್ತಾನಾ ರಸ್ತೆ, ಕುದೈ ರಸ್ತೆ ಹಾಗೂ ಅಲಿಬಾಗ ರಸ್ತೆಗಳು ಸಂಪರ್ಕ ಕಲ್ಪಿಸುತ್ತವೆ. ರಸ್ತೆ ವಿಸ್ತರಣೆಗಾಗಿ ಕಟ್ಟಡಗಳನ್ನು ನೆಲಸಮಗೊಳಿಸಿದ ನಂತರ ಇಲ್ಲಿಯ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.

ರಸ್ತೆ ಪಕ್ಕದಲ್ಲಿ ನೆಲ ಅಗೆದು ಗಟಾರ ಕಟ್ಟಬೇಕಿತ್ತು. ಆದರೆ, ಗುತ್ತಿಗೆದಾರರು ನೆಲದ ಮೇಲೆಯೇ ಗಟಾರ ನಿರ್ಮಿಸಿದ್ದಾರೆ. ಇಳಿಜಾರು ಇಲ್ಲದ ಕಾರಣ ನೀರು ಹರಿದು ಹೋಗುತ್ತಿಲ್ಲ. ರಸ್ತೆಯ ಎರಡೂ ಬದಿಗೆ ಮಣ್ಣಿನ ರಾಶಿ ಬಿದ್ದಿದೆ. ಮನೆಯ ಬಾಗಿಲಲ್ಲಿ ಇರುವ ಗಟಾರ ದಾಟಿ ಹೋಗುವುದು ಕಷ್ಟವಾಗುತ್ತಿದೆ. ಗಟಾರಗಳಲ್ಲಿ ನೀರು ನಿಂತು ಗಬ್ಬು ವಾಸನೆ ಬರುತ್ತಿದೆ.

‘ಪ್ರೊಬೆಷನರಿ ಐಎಎಸ್ ಅಧಿಕಾರಿ ಭೂಬಾಲನ್ ಹಾಗೂ ನಗರಸಭೆ ಆಯುಕ್ತರಾಗಿದ್ದ ನರಸಿಂಹಮೂರ್ತಿ ಅವರು ಎರಡು ತಿಂಗಳಲ್ಲಿ ಹೊಸ ರಸ್ತೆ ಹಾಗೂ ಗಟಾರ ನಿರ್ಮಿಸುವ ಭರವಸೆ ನೀಡಿ ಮನೆಗಳನ್ನು ಕೆಡವಿ ಹಾಕಿದರು. ಈಗ ನಮ್ಮ ಪರಿಸ್ಥಿತಿಯನ್ನು ಕೇಳುವವರೇ ಇಲ್ಲ. ಮನೆಗಳಿಂದ ಹೊರ ಬರುವ ಬಚ್ಚಲು ನೀರು ರಸ್ತೆ ಮೇಲೆ ಬಂದು ನಿಲ್ಲುತ್ತಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ’ ಎಂದು ಆಸ್ತಾನಾ ರಸ್ತೆಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಈ ಪ್ರದೇಶದಲ್ಲಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ವ್ಯಾಪಾರಿಗಳು, ಕುರಿ ಸಾಕಾಣಿಕೆದಾರರು ಹಾಗೂ ಕಾರ್ಮಿಕರ ಮನೆಗಳು ಇವೆ. ಪುರುಷರು ಬೆಳಿಗ್ಗೆ ಕೆಲಸಕ್ಕೆ ಹೋದರೆ ರಾತ್ರಿ ಮನೆಗೆ ಮರಳುತ್ತಾರೆ. ಕೆಲಸ ಬಿಟ್ಟು ನಗರಸಭೆ ಕಚೇರಿಗೆ ಅಲೆಯಲು ಸಾಧ್ಯವಾಗುತ್ತಿಲ್ಲ. ಬೀದರ್ ನಗರ ಅಭಿವೃದ್ಧಿ ಕೋಶ, ನಗರಸಭೆಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ನಮ್ಮ ಅಸಹಾಯಕತೆಯನ್ನು ದೌರ್ಬಲ್ಯವೆಂದು ಭಾವಿಸಿದ್ದಾರೆ.

ನಮ್ಮ ಸಹನೆಯ ಕಟ್ಟೆಯೊಡೆದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ವೆಲ್‌ಫೇರ್‌ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ಕಾರ್ಯದರ್ಶಿ ಮುಬಾಶಿರ್ ಸಿಂದೆ ಹೇಳುತ್ತಾರೆ.

‘ಡಿಯುಡಿಸಿ 40 ಅಡಿ ರಸ್ತೆ ವಿಸ್ತರಿಸಲು ಮುಂದಾದಾಗ ಆಸ್ತಾನಾ ರಸ್ತೆ ಅಕ್ಕಪಕ್ಕದ ಮನೆಗಳ ಮಾಲೀಕರು 30 ಅಡಿ ಮಾತ್ರ ರಸ್ತೆ ವಿಸ್ತರಿಸುವಂತೆ ಮನವಿ ಮಾಡಿದ್ದರು. ನಗರಸಭೆಯವರು ಜೊಹರ್ ಪದವಿ ಪೂರ್ವ ಕಾಲೇಜು, ಜೊಹರ್ ಐಟಿಐ, ಫಂಕ್ಷನ್ ಹಾಲ್, ಅಂಗಡಿಗಳ ಮುಂಭಾಗದ ಗೋಡೆಗಳನ್ನು ಕೆಡವಿ ಹಾಕಿದ್ದರು. ಮೂವರು ವೃದ್ಧರ ಮನೆಗಳನ್ನು ನೆಲಸಮ ಮಾಡಿದ್ದರು.

ಸಾಮಾಜಿಕ ಸಂಘಟನೆಯೊಂದರ ನೆರವು ಪಡೆದು ಅವರಿಗೆ ಬೇರೆ ಕಡೆಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಕಟ್ಟಡ ನೆಲಸಮ ಮಾಡುವಾಗ ತೋರಿಸಿದ ಉತ್ಸಾಹವನ್ನು ಅಧಿಕಾರಿಗಳು ರಸ್ತೆ ಹಾಗೂ ಗಟಾರ ನಿರ್ಮಾಣ ಮಾಡುವಲ್ಲಿ ತೋರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಮೂರು ರಸ್ತೆಗಳಲ್ಲಿ ತಕ್ಷಣ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. ಅವೈಜ್ಞಾನಿಕವಾಗಿ ನಿರ್ಮಿಸಿರುವ ಗಟಾರಗಳನ್ನು ಕಿತ್ತು ಹಾಕಿ ಹೊಸ ಗಟಾರ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆಯನ್ನೂ ನಿವಾರಿಸಬೇಕು. ಅಪೂರ್ಣವಾದ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸದಿದ್ದರೆ ನಗರಸಭೆ ಕಚೇರಿ ಎದುರು ಮಹಿಳೆಯರು ಹಾಗೂ ಮಕ್ಕಳೊಂದಿಗೆ ಧರಣಿ ನಡೆಸಲಾಗವುದು’ ಎಂದು ಆಸ್ತಾನಾ ರಸ್ತೆ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT