ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಕಷ್ಟಗಳಿಗೆ ನಾನು ಕಂಗಾಲಾಗಲಿಲ್ಲ

Published:
Updated:
ಕಷ್ಟಗಳಿಗೆ ನಾನು ಕಂಗಾಲಾಗಲಿಲ್ಲ

ಫ್ಲ್ಯಾಷ್‌ಬ್ಯಾಕ್ 1

ಕಣ್ಣುಬಿಟ್ಟೆ. ಸುತ್ತ ಸಂಬಂಧಿಕರು. ನಾನೆಲ್ಲಿದ್ದೇನೆ ಎಂದು ಕೇಳಿದೆ. ಎರಡೂ ಕೈ ಹಿಡಿದು ಎಬ್ಬಿಸಿದರು. ಕಾಲುಗಳು ಸೋತಿದ್ದವು. ಬರ್ರನೆ ಸಾಗುತ್ತಿದ್ದ ಬೈಕ್‌ ಓಡಿಸಿದ್ದ ನನಗೆ ಆಮೇಲೆ ಏನಾಯಿತು ಎಂದೇ ನೆನಪಿರಲಿಲ್ಲ. ಆಸ್ಪತ್ರೆಗೆ ಹೋಗಬೇಕು ಎನ್ನುತ್ತಾ ಅವರೆಲ್ಲಾ ಕಾರಿನಲ್ಲಿ ಕೂರಿಸಿದರು.

‘ಡಾಕ್ಟರ್ ವರ್ಷಾ ಅವರನ್ನು ಕಾಣಬೇಕು’ ಎಂದು ಹೇಳಿದ ನೆನಪು. ಮಾರ್ಗಮಧ್ಯೆ ನಾನು ‘ಮಾತಾಡ್ ಮಾತಾಡ್ ಮಲ್ಲಿಗೆ’ ಸಿನಿಮಾ ಶೂಟಿಂಗ್‌ಗೆ ಹೋಗಬೇಕಿತ್ತಲ್ಲ. ಏನಾಯಿತು, ಎಷ್ಟು ಕಾಲದಿಂದ ಹೀಗೆ ಸೋತಿದ್ದೇನೆ–ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳದೆ ನನಗೆ ವಿಧಿಯಿರಲಿಲ್ಲ.

‘ಎರಡೂವರೆ ತಿಂಗಳಾಯಿತು’ ಎಂಬ ಉತ್ತರ ಕೇಳಿದ್ದೇ ದಂಗುಬಡಿದುಹೋದೆ. ಅಂದರೆ, ಎರಡೂವರೆ ತಿಂಗಳು ನಾನು ಪ್ರಜ್ಞೆ ಇಲ್ಲದೆ ಬದುಕಿದ್ದೆ.

ವೈದ್ಯರ ಕೋಣೆಗೆ ಹೋಗುವಷ್ಟರಲ್ಲಿ ಏನೋ ಉತ್ಸಾಹ. ಸುಂದರವಾದ ಹುಡುಗಿ ದಿವಿನಾದ ಕುರ್ಚಿ ಮೇಲೆ ಕುಳಿತಿದ್ದಳು. ನಾನು ‘ಐ ವಾಂಟ್ ಟು ಮೀಟ್ ಡಾಕ್ಟರ್ ವರ್ಷಾ’ ಎಂದೆ. ಅದಕ್ಕೆ ಅವರು ತಾನೇ ವರ್ಷಾ ಎಂದು ಪರಿಚಯಿಸಿಕೊಂಡರು. ನನಗೆ ಎರಡು ಪ್ರಶ್ನಾವಳಿಗಳ ಚೀಟಿ ಕೊಟ್ಟು, ತುಂಬುವಂತೆ ಹೇಳಿದರು. ಎರಡೋ ಮೂರೋ ತಪ್ಪು ಬರೆದಿದ್ದೆ. ಉಳಿದಂತೆ ಪರ್ಫೆಕ್ಟ್. ಕೊನೆಯಲ್ಲಿ ಎರಡು ಸಾಲುಗಳಿದ್ದವು. ನನಗೆ ಏನು ಅನಿಸುತ್ತದೋ ಅದನ್ನು ಬರೆಯುವಂತೆ ಸೂಚಿಸಿದರು. ಆ ದಿನ ನಾನು ಬರೆದ ಸಾಲುಗಳನ್ನು ಓದಿ, ‘ಹೀ ಈಸ್ ಪರ್ಫೆಕ್ಟ್... ಇಷ್ಟು ಬೇಗ ಚೇತರಿಸಿಕೊಂಡಿದ್ದಾರೆ... ಮಿರ‍್ಯಾಕಲ್’ ಎಂದರು.

ಸುಂದರವಾದ ಡಾಕ್ಟರ್‌ ನನಗೆ ಚಿಕಿತ್ಸೆ ನೀಡಿದ್ದು, ನಾನು ಮೊದಲಿನಂತೆ ಆಗಿದ್ದೇನೆ ಎಂಬರ್ಥದ ಸಾಲುಗಳನ್ನು ನಾನು ಬರೆದಿದ್ದೆ.

ಬೆಂಗಳೂರಿನ ರಸ್ತೆಯಲ್ಲಿ ಬೈಕ್‌ ಓಡಿಸುವಾಗ ಆಗಿದ್ದ ಅಪಘಾತ ಅದು. ಪಕ್ಕದ ಫುಟ್‌ಪಾತ್‌ ಕಲ್ಲಿಗೆ ತಲೆ ಅಪ್ಪಳಿಸಿತ್ತಂತೆ. ರಾತ್ರಿ ಹನ್ನೊಂದಕ್ಕೆ ಆದ ಅಪಘಾತ. ಬೆಳಗಿನ ಜಾವ ನನ್ನನ್ನು ಯಾರೋ ಪುಣ್ಯಾತ್ಮರು ಆಸ್ಪತ್ರೆಗೆ ಸೇರಿಸಿದ್ದರು.

ಫ್ಲ್ಯಾಷ್‌ಬ್ಯಾಕ್ 2

ಹಾಡು, ಮಿಮಿಕ್ರಿ, ಒನ್‌ ಮ್ಯಾನ್ ಷೋ, ಫ್ಯಾಷನ್‌ ಷೋ ಎಂದೆಲ್ಲ ಬಾಲ್ಯದಿಂದಲೇ ಗೀಳು ಹತ್ತಿಸಿಕೊಂಡಿದ್ದ ನನಗೆ ವೇದಿಕೆಯೆಂದರೆ ಬಲು ಪ್ರೀತಿ. ವೇದಿಕೆ ಹತ್ತಿದೆನೆಂದರೆ ‘ಬ್ಲಾಸ್ಟ್‌’ ಮಾಡುತ್ತಿದ್ದೆ. ದಾವಣಗೆರೆ ನನ್ನ ತವರು. ಅಪ್ಪ ಕೆಲಸಕ್ಕೆಂದು ರಾಣೆಬೆನ್ನೂರಿನಲ್ಲಿದ್ದರು. ನನಗೋ ಆ ಊರಿಗಿಂತ ದಾವಣಗೆರೆಯೇ ಇಷ್ಟ. ಮೊದಲ ಪಿಯುನಲ್ಲಿ 87 ಪರ್ಸೆಂಟ್ ತೆಗೆದಿದ್ದ ನಾನು ಎರಡನೇ ವರ್ಷ ಸೆಕೆಂಡ್ ಕ್ಲಾಸ್ ಬಂದಿದ್ದೆ. ಸ್ನೇಹಿತರೆಲ್ಲ ‘ಪುಣೆಯ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಸೇರು. ನೋಡಲು ನಾಸಿರುದ್ದೀನ್ ಷಾ ತರಹ ಇದ್ದೀಯ’ ಎಂದು ಪುಸಲಾಯಿಸಿದ್ದರು. ಆ ಮಾತಿನಿಂದ ಅದಾಗಲೇ ನಾನು ಸ್ಟಾರ್‌ ಆಗಿಬಿಟ್ಟಿದ್ದೆ.

ಜಾಣ ವಿದ್ಯಾರ್ಥಿಗಳಿಂದ ಪಠ್ಯವಿಷಯ ಕೇಳಿ ತಿಳಿದು, ನಾನು ಪರೀಕ್ಷೆ ಬರೆಯುತ್ತಿದ್ದೆ. ಒಂದು ಸಲ ಕೇಳಿದರೆ ಮರೆಯುತ್ತಲೇ ಇರಲಿಲ್ಲ. ಅಪ್ಪ ಕರೆದು ಬುದ್ಧಿ ಹೇಳಿದರು. ‘ಎಂಜಿನಿಯರ್ ಆದಮೇಲೆ ನಟನಾದರೆ ಎಲ್ಲರೂ ಗೌರವಿಸುತ್ತಾರೆ. ಬರೀ ನಟನಾದರೆ ಅಷ್ಟು ಮನ್ನಣೆ ಸಿಗಲಾರದು’ ಎಂಬ ಅವರ ಮಾತು ತಲೆಯಲ್ಲಿ ಕೂತಿತು. ಅವರ ಮಾತಿಗೆ ಬೆಲೆ ಕೊಟ್ಟೇ ಎರಡು ವರ್ಷ ನಾನು ವೇದಿಕೆ ಹತ್ತಲೇ ಇಲ್ಲ. ಸಿವಿಲ್ ಎಂಜಿನಿಯರಿಂಗ್ ಓದಿನಲ್ಲಿ ತೊಡಗಿಸಿಕೊಂಡೆ.

ಎರಡು ಸೆಮಿಸ್ಟರ್ ಗಳಾದ ಮೇಲೆ ಸಾಂಸ್ಕೃತಿಕವಾಗಿಯೂ ಲಯಕ್ಕೆ ಬಂದೆ. ಹಾಡಿದೆ, ನಗಿಸಿದೆ, ನಾಟಕಗಳನ್ನಾಡಿದೆ. ಉಪನ್ಯಾಸಕನಾಗಿ ಓದಿದ ಕಾಲೇಜಿನಲ್ಲೇ ಪಾಠ ಮಾಡಿದೆ. ಆದರೆ, ಅಭಿನಯದ ಗೀಳು ದಿನೇದಿನೇ ಹೆಚ್ಚಾಯಿತು. ಬೆಂಗಳೂರಿಗೆ ಹೊರಟೆ. ಚಲನಚಿತ್ರ ನಿರ್ದೇಶಕರಾದ ನಾಗತೀಹಳ್ಳಿ ಚಂದ್ರಶೇಖರ್, ಕೆ.ಎಂ. ಚೈತನ್ಯ ನನ್ನ ಸ್ನೇಹಿತರು. ಅಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಾ ಇದ್ದಾಗಲೇ ಅಪಘಾತವಾದದ್ದು.

ಮೆದುಳಿಗೆ ಪೆಟ್ಟು ಬಿದ್ದಿದ್ದರಿಂದ ನಾನು ಚೇತರಿಸಿಕೊಂಡಿದ್ದೇ ಪವಾಡ. ನನ್ನ ಸ್ಮೃತಿಪಟಲದಿಂದ ಎರಡೂವರೆ ತಿಂಗಳು ಅಳಿಸಿಹೋಯಿತು. ಹೆಂಡತಿ ವಿಚ್ಛೇದನ ಕೊಟ್ಟಳು. ಒಬ್ಬನೇ ಮಗ ಕೂಡ ಅವಳ ಜೊತೆ ಹೋದ. ಅದೊಂದು ಕೆಟ್ಟ ಕಾಲ. ಮಗ ಈಗ ಎಂಜಿನಿಯರಿಂಗ್ ಓದುತ್ತಿದ್ದಾನೆ. ಮಾತಾಡಿ ನಾಲ್ಕು ವರ್ಷವಾಯಿತು.

ಫ್ಲ್ಯಾಷ್ ಬ್ಯಾಕ್ 3

ಅಪಘಾತದಿಂದ ಚೇತರಿಸಿಕೊಂಡ ಮೇಲೆ ಸ್ನೇಹಿತರು ನನ್ನ ಬೆನ್ನಿಗೆ ನಿಂತರು. ದುಬೈಗೆ ಹೋಗಿ ಪ್ರಾಜೆಕ್ಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡಿದೆ. ವಿದ್ಯಾರ್ಥಿಗಳೇ ನನ್ನ ಹಿಡಿದು ಕುರ್ಚಿ ಮೇಲೆ ಕೂರಿಸುತ್ತಿದ್ದರು. ತಿಂಗಳುಗಳು ಉರುಳಿದವು. ನಾನು ಮತ್ತೆ ಸ್ವತಂತ್ರನಾಗಿ ನಡೆಯತೊಡಗಿದೆ. ದಾವಣಗೆರೆಯಲ್ಲಿ ಒಂದು ರಾಷ್ಟ್ರಮಟ್ಟದ ಸಮ್ಮೇಳನವಿತ್ತು. ಅದಕ್ಕೆಂದು ಹೋದೆ. ಆಗ ಹೊಟ್ಟೆಯಲಿ ತಳಮಳ ಶುರುವಾಯಿತು. ಮಲಬದ್ಧತೆಯ ಸಮಸ್ಯೆ ಬೇರೆ. ವೈದ್ಯರ ಬಳಿಗೆ ಹೋದೆ. ಬಯಾಪ್ಸಿ ಮಾಡಿಸಿದ ಮೇಲೆ ಕ್ಯಾನ್ಸರ್ ಎಂದು ಪತ್ತೆಯಾಯಿತು. 'ಅಡೆನೊ ಕಾರ್ಸಿನೊಮ' ಎಂದು ವೈದ್ಯಕೀಯ ಭಾಷೆಯಲ್ಲಿ ಹೇಳಿದರು. ಗೆಳೆಯ ಚೈತನ್ಯ ಡಾ. ಅಜಯ್ ಕುಮಾರ್ ಎಂಬ ವೈದ್ಯರ ಹೆಸರು ಸೂಚಿಸಿದ. ಎಚ್.ಸಿ.ಜಿ. ಆಸ್ಪತ್ರೆಯಲ್ಲಿ ಅವರ ಬಳಿ ಚಿಕಿತ್ಸೆ ಪಡೆದೆ. ಧೃತಿಗೆಡಲಿಲ್ಲ. ಆರೇ ತಿಂಗಳಲ್ಲಿ ಚೇತರಿಸಿಕೊಂಡೆ.

ಎರಡೆರಡು ಹೊಡೆತಗಳು ಗಾಸಿಗೊಳಿಸಿದ್ದೇನೋ ನಿಜ. ಆದರೆ ಕಂಗಾಲಾಗಲಿಲ್ಲ. ದುಡಿಯುವ ಚೈತನ್ಯ ಇಲ್ಲದೇ ಇದ್ದಾಗ ಯಾರ್ಯಾರೋ ಸ್ನೇಹಿತರು ನನ್ನ ಬ್ಯಾಂಕ್ ಖಾತೆಗೆ ಹಣ ಹಾಕಿದರು. ಎರಡು ವರ್ಷಗಳಿಂದ ನನ್ನ ಸಂಪಾದನೆಯಲ್ಲೇ ಬದುಕು ಸಾಗುತ್ತಿದೆ. ಒಳಾಂಗಣ ವಿನ್ಯಾಸ ಮಾಡಿಕೊಡುತ್ತೇನೆ. ಇನ್ನೊಬ್ಬ ಗೆಳೆಯ ತನ್ನ ಪೀಠೋಪಕರಣದ ಮಳಿಗೆಯಲ್ಲಿ ನನಗೆ ಕಚೇರಿ ಮಾಡಿಕೊಟ್ಟಿದ್ದಾನೆ. ಕ್ಯಾನ್ಸರ್ ಬಾಧಿತರಿಗೆ ಆಪ್ತ ಸಮಾಲೋಚನೆ ನಡೆಸುತ್ತೇನೆ. ಶಸ್ತ್ರಚಿಕಿತ್ಸೆಯಾದ ದೇಹದ ಮೂರು ಭಾಗಗಳನ್ನು ಕಂಡರೆ ಎಷ್ಟೋ ಜನ ತಮ್ಮ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ಹಳ್ಳಿ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆನ್ನುತಟ್ಟಲೆಂದೇ 'ಗೆಳೆಯರು' ಎಂಬ ಟ್ರಸ್ಟ್ ಮಾಡಿದ್ದೇನೆ.

ನಾಲ್ಕು ತಿಂಗಳ ಹಿಂದೆ ಮತ್ತೆ ramp walk ಮಾಡಿದೆ. ಈಗಲೂ ವೇದಿಕೆ ಹತ್ತಿದರೆ ಗಂಟೆಗಟ್ಟಲೆ ನಗಿಸಬಲ್ಲೆ. ಅದೇ ನಾನು, ನನ್ನತನ.

*

ಇವರು ಅರುಣ್‌ಕುಮಾರ್

ದಾವಣಗೆರೆ ಬಾಪೂಜಿ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದ ಅರುಣ್ ಕುಮಾರ್ ಆರ್. ಟಿ., ಅದೇ ಕಾಲೇಜಿನಲ್ಲಿ ಒಂದು ವರ್ಷ ಪಾಠ ಮಾಡಿದರು. ಬಾಲ್ಯದಲ್ಲೇ ವಾದ್ಯಗೋಷ್ಠಿಗಳಲ್ಲಿ ನಿರೂಪಕನಾಗಿದ್ದ ಅವರು ಮೈಮ್ ಷೋ, ಮಿಮಿಕ್ರಿಯಿಂದ ಜನಪ್ರಿಯರಾದವರು. ಬೀದಿ ನಾಟಕಗಳಲ್ಲಿ ಛಾಪುಮೂಡಿಸಿದರು. ಅಪಘಾತಕ್ಕೆ ಒಳಗಾದ ನಂತರ ದುಬೈನಲ್ಲಿ ಒಂದು ವರ್ಷ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು.

ಈಗ ಒಳಾಂಗಣ ವಿನ್ಯಾಸದ ಪ್ರಯೋಗಶಾಲೆಯಲ್ಲಿ ಕೈಯಾಡಿಸುವ ಅವರು, ಅತಿಥಿ ಉಪನ್ಯಾಸಕರೂ ಹೌದು. ಆಪ್ತ ಸಮಾಲೋಚನೆಯನ್ನೂ ನಡೆಸುತ್ತಾರೆ. 'ಗೆಳೆಯರು' ಎಂಬ ಟ್ರಸ್ಟ್ ಹುಟ್ಟುಹಾಕಿದ್ದಾರೆ. ಚಲನಚಿತ್ರ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅವರೀಗ ದಾವಣಗೆರೆಯಲ್ಲೇ ವಾಸವಾಗಿದ್ದಾರೆ.

ಅರುಣ್ ಕುಮಾರ್ ಅವರ ಸಂಪರ್ಕ ಸಂಖ್ಯೆ- 96637 93337, ಇಮೇಲ್- arunartist@gmail.com

Post Comments (+)