ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಿತರಣೆಗೆ ಜನಸಾಗರ

Last Updated 24 ಅಕ್ಟೋಬರ್ 2017, 6:33 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಬೆಳಗಾವಿ ವಿಭಾಗ ಮಟ್ಟದ ಸೌಲಭ್ಯಗಳ ವಿತರಣಾ ಸಮಾವೇಶ ಹಾಗೂ ಮಾಹಿತಿ ಉತ್ಸವಕ್ಕೆ ಏಳು ಜಿಲ್ಲೆಗಳಿಂದ ಫಲಾನುಭವಿಗಳು ಸಾಗರೋಪಾದಿಯಲ್ಲಿ ಬಂದಿದ್ದರು.

ಫಲಾನುಭವಿಗಳು ಕಾರ್ಯಕ್ರಮಕ್ಕೆ ಬರಲು ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಬೆಳಗಾವಿ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಬಂದ ಜನರಿಗೆ ಬೆಳಿಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ಜನರು ವಿವಿಧ ಇಲಾಖೆಗಳ ಮಳಿಗೆಗಳಿಗೆ ಭೇಟಿ ನೀಡಿ ಸರ್ಕಾರದ ಸೌಲಭ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿವಿಧ ಜಿಲ್ಲೆಗಳ ಮಳಿಗೆಗಳಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಮಾಹಿತಿ ಪಡೆದರು. ಬೃಹತ್‌ ಪೆಂಡಾಲ್‌ನಲ್ಲಿ 75 ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆ ಮಾಡಲಾಗಿತ್ತು. ಬೃಹತ್‌ ಎಲ್‌ಇಡಿ ಪರದೆಗಳು, ಧ್ವನಿ ವರ್ಧಕಗಳನ್ನು ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದ ಆರಂಭವಾದ ನಂತರ ಮುಂದೆ ಇದ್ದವರು ಎದ್ದುನಿಂತಿದ್ದರಿಂದ ಹಿಂದಿನವರಿಗೆ ಕಾಣಿಸುತ್ತಿಲ್ಲ ಎಂದು ಕೆಲವರು ಕೂಗಾಡಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ನಂತರ ಮುಂದೆ ಗಣ್ಯರಿಗಾಗಿ ಮೀಸಲಿಟ್ಟದ್ದ ಆಸನಗಳನ್ನೇ ಅವರಿಗೆ ನೀಡಿ ಪರಿಸ್ಥಿತಿಯನ್ನು ಅಧಿಕಾರಿಗಳು ತಿಳಿಗೊಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಪಲಾವ್‌, ಕೋಸಂಬರಿ, ಶಿರಾ ಹಾಗೂ ನೀರಿನ ಬಾಟಲಿ ನೀಡಲಾಗುತ್ತಿತ್ತು. ಕಾರ್ಯಕ್ರಮದ ಭದ್ರತೆಗಾಗಿ ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಂತೆ ಬ್ಯಾರಿಕೇಡ್‌ ತಳ್ಳಿ ನುಗ್ಗಲು ಯತ್ನಿಸಿದ ಜನರನ್ನು ನಿಯಂತ್ರಿಸಲು ಹಾಗೂ ಕಾರ್ಯಕ್ರಮ ಮುಗಿದ ಬಳಿಕ ಹೊರ ಹೊರಟವರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. ಬೆಳಗಾವಿ ರಸ್ತೆಯಲ್ಲಂತೂ ಕೆಲಕಾಲ ವಾಹನ ದಟ್ಟಣೆ ಉಂಟಾಗಿದ್ದರಿಂದ ಸಂಚಾರ ಅಸ್ತವ್ಯಸ್ಥಗೊಂಡಿತು.

ಸೌಲಭ್ಯ ವಿತರಣಾ ಕಾರ್ಯಕ್ರಮದ ನಂತರ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆದರೆ, ಎರಡನೇ ದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಕೊರತೆ ಕಂಡುಬಂತು. ಬೆಳಿಗ್ಗೆ ತುಂಬಿತುಳುಕಿತ್ತಿದ್ದ ಆವರಣದಲ್ಲಿ ಮಧ್ಯಾಹ್ನದ ನಂತರ ಖಾಲಿ ಕುರ್ಚಿಗಳು ಕಂಡುಬಂದವು.
ಜಿಲ್ಲೆಯ ಕಲಕೇರಿಯ ವಿಜೇತಾ ವರ್ಣೇಕರ ಹಾಗೂ ತಂಡ ಕಥಕ್‌ ಮತ್ತು ಒಡಿಸ್ಸಿ ನೃತ್ಯ ಪ್ರದರ್ಶಿಸುವ ಮೂಲಕ ಜನರನ್ನು ರಂಜಿಸಿದರು.

ನಂತರ ಉಪ್ಪಿನಬೆಟಗೇರಿಯ ಮೈತ್ರಿ ಭಜಂತ್ರಿ ಹಾಗೂ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ಇದರ ನಡವೆ ಜನಪದ ಕಲಾ ವೈಭವ ನೇನಪಿಸುವ ನಿಟ್ಟಿನಲ್ಲಿ ಕಲಾವಿದೆ ವಿಶ್ವೇಶ್ವರಿ ಹಿರೇಮಠ ತಂಡದಿಂದ ಜರುಗಿದ ಜನಪದ ವೈವಿಧ್ಯಮಯ ನೃತ್ಯ ಪ್ರದರ್ಶನಕ್ಕೆ ಕೆಲ ಪ್ರೇಕ್ಷಕರು ಸಿಳ್ಳೆ ಹಾಕಿದರೆ, ಮತ್ತೆ ಕೆಲವರು ಕುರ್ಚಿ ಮೇಲೆ ನಿಂತು ನೃತ್ಯ ಮಾಡಿ ಕಲಾವಿದರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ನಂತರ ಸಂಜೆ 7ರ ಸುಮಾರಿಗೆ ವೇದಿಕೆಗೆ ಬಂದ ಚಲನಚಿತ್ರ ಹಿನ್ನೆಲೆ ಗಾಯಕಿ ಸುಪ್ರಿಯಾ ಲೋಹಿತ್ ಹಾಗೂ ಚಿನ್ಮಯ ಅವರು 'ಲುಂಗಿ ಡ್ಯಾನ್ಸ್' ಹಾಡು ಸೇರಿದಂತೆ  ಕನ್ನಡದ ಜನಪ್ರಿಯ ಚಲನಚಿತ್ರಗಳ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಇದೇ ಸಂದರ್ಭದಲ್ಲಿ ಸರಿಗಮಪ ಕಲಾವಿದ ಮೆಹಬೂಬ್ ಸಾಬ್ ಅವರು ಡಾ. ರಾಜಕುಮಾರ್ ಹಾಡಿದ 'ಮೇಘ ಬಂತು ಮೇಘ...' ಹಾಗೂ 'ಜನ್ಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ...' ಇತರ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು. ನಂತರ ವಿವಿಧ ಕಲಾ ತಂಡಗಳಿಂದ ಸಂಗೀತ ಕಾರ್ಯಕ್ರಮ ನಡೆದವು.
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT