ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ವರ್ಗಗಳನ್ನು ಸಂತೃಪ್ತಿಗೊಳಿಸುವ ಪ್ರಣಾಳಿಕೆ

Last Updated 24 ಅಕ್ಟೋಬರ್ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್‌ ಪಕ್ಷ, ಚುನಾವಣಾ ಪ್ರಣಾಳಿಕೆಯಲ್ಲಿ ‘ಅಹಿಂದ’ ಜೊತೆಗೆ ಎಲ್ಲ ಜಾತಿಗಳ ಬಡವರನ್ನು ಸಂತೃಪ್ತಿಗೊಳಿಸುವ  ತಂತ್ರಗಾರಿಕೆಗೆ ಮೊರೆ ಹೋಗಲಿದೆ.

ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ರಚಿಸಲಾದ ಸಂಸದ ಎಂ. ವೀರಪ್ಪ ಮೊಯಿಲಿ ಅಧ್ಯಕ್ಷತೆಯ ಸಮಿತಿ ಇದೇ 29ರಂದು ಸಂಜೆ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಮೊದಲ ಸಭೆ ನಡೆಸಲಿದೆ.

ಪ್ರಣಾಳಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ, ಇನ್ನೂ ಬಹಿರಂಗವಾಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಅಂಶಗಳನ್ನು ಪಕ್ಷ ಗಣನೆಗೆ ತೆಗೆದುಕೊಳ್ಳಲಿದೆ. ಅಲ್ಲದೆ, ತಳಮಟ್ಟದ ಮತದಾರರನ್ನು ಆಕರ್ಷಿಸಲು ಜನಪ್ರಿಯ ಘೋಷಣೆಗಳ ಭರವಸೆ ನೀಡಲು ಚಿಂತನೆ ನಡೆಸಿದೆ.

‘ಪ್ರಜಾವಾಣಿ’ ಜೊತೆ ಮಂಗಳವಾರ ಮಾತನಾಡಿದ ವೀರಪ್ಪ ಮೊಯಿಲಿ, ‘ಜಾತಿ ಮತ್ತು ಸಮುದಾಯ ತಾರತಮ್ಯ ಇಲ್ಲದೆ ಎಲ್ಲ ವರ್ಗದವರಿಗೂ ನೆರವಾಗಬೇಕಿದೆ. ಪಕ್ಷ ತಮ್ಮನ್ನು ಕೀಳಾಗಿ ಕಾಣುತ್ತಿದೆ ಎಂಬ ಭಾವನೆ ಯಾರಿಗೂ ಬರಬಾರದು. ಕಾಂಗ್ರೆಸ್‌ ಮತ್ತು ಅದರ ತತ್ವ– ಸಿದ್ಧಾಂತ ಎಲ್ಲರಿಗೂ ಸಂಬಂಧಿಸಿದ್ದು. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆ ಆ ಎಲ್ಲ ಅಂಶಗಳನ್ನು ಹೊಂದಿರುತ್ತದೆ’ ಎಂದು ಸುಳಿವು ನೀಡಿದರು.

‘ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ (ಅಹಿಂದ) ವರ್ಗದ ನಾಯಕ ಎಂದೇ ಬಿಂಬಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಆ ವರ್ಗದ ಓಲೈಕೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅಷ್ಟೇ ಅಲ್ಲ, ಆ ವರ್ಗದ ಕಲ್ಯಾಣಕ್ಕೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ’ ಎಂದೂ ಮೊಯಿಲಿ ಹೇಳಿದರು.

‘ಪ್ರಣಾಳಿಕೆ ಸಿದ್ಧಪಡಿಸುವ ಸಮಯದಲ್ಲಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನು ನೀಡಲು ಉಪ ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿ ರಾಜ್ಯದಾದ್ಯಂತ ಪ್ರವಾಸ ಮಾಡಿ 15ರಿಂದ 20 ದಿನಗಳ ಒಳಗೆ ವರದಿ ಸಲ್ಲಿಸಬೇಕು. ಈ ಪೈಕಿ, ಒಂದು ಸಮಿತಿ ರಾಜ್ಯ ಸರ್ಕಾರದ ಸಾಧನೆಗಳ ಪ್ರಗತಿ ಪರಿಶೀಲನೆ ನಡೆಸಲಿದೆ. ಸರ್ಕಾರದ ಸಾಧನೆಗಳೂ ಪ್ರಣಾಳಿಕೆ ಸಿದ್ಧಪಡಿಸುವ ಸಂದರ್ಭದಲ್ಲಿ ಪ್ರಮುಖವಾಗಲಿದೆ’ ಎಂದು ಮೊಯಿಲಿ ಹೇಳಿದರು.

‘ಪ್ರಣಾಳಿಕೆಗೆ ಅಂತಿಮ ಸ್ಪರ್ಶ ನೀಡುವ ಮೊದಲು ಪ್ರಣಾಳಿಕೆ ಸಮಿತಿ ರಾಜ್ಯದಾದ್ಯಂತ ತೆರಳಿ ಪಕ್ಷದ ಪ್ರಮುಖರಷ್ಟೇ ಅಲ್ಲ, ಸಮಾಜದ ವಿವಿಧ ವಲಯಗಳ ಗಣ್ಯರ ಜೊತೆ ಚರ್ಚೆ– ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದೆ. ನಗರ ಪ್ರದೇಶದ ಜೊತೆಗೆ ಅತಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಕಡೆಗೂ ಗಮನ ನೀಡಲಿದೆ. ಪಕ್ಷದ ಜಿಲ್ಲಾ ಘಟಕಗಳಿಂದಲೂ ಸಲಹೆ ಪಡೆಯಲಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT