ಆನ್‌ಲೈನ್‌ ಅಭಿಯಾನಕ್ಕೆ 30 ಸಾವಿರ ಮಂದಿ ಸಹಿ

ಭಾನುವಾರ, ಜೂನ್ 16, 2019
22 °C
ಕಂಟೋನ್ಮೆಂಟ್‌ ರೈಲುನಿಲ್ದಾಣದ ಪಕ್ಕದಲ್ಲೇ ಮೆಟ್ರೊ ನಿಲ್ದಾಣಕ್ಕೆ ಒತ್ತಾಯ

ಆನ್‌ಲೈನ್‌ ಅಭಿಯಾನಕ್ಕೆ 30 ಸಾವಿರ ಮಂದಿ ಸಹಿ

Published:
Updated:
ಆನ್‌ಲೈನ್‌ ಅಭಿಯಾನಕ್ಕೆ 30 ಸಾವಿರ ಮಂದಿ ಸಹಿ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದ ಗೊಟ್ಟಿಗೆರೆ– ನಾಗವಾರ ಮಾರ್ಗದಲ್ಲಿ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಪಕ್ಕದಲ್ಲಿ ನಿರ್ಮಾಣವಾಗಬೇಕಿದ್ದ ಮೆಟ್ರೊ ನಿಲ್ದಾಣದ ಸ್ಥಳ ಬದಲಾವಣೆ ಮಾಡಿದ್ದನ್ನು ಪ್ರಶ್ನಿಸಿ ರಾಜ್‌ ಕುಮಾರ್‌ ದುಗರ್‌ ಅವರು ಆರಂಭಿಸಿದ್ದ ಆನ್‌ಲೈನ್‌ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

ದುಗರ್‌ ಅವರು 2017ರ ಸೆಪ್ಟೆಂಬರ್‌ 5ರಂದು ಚೇಂಜ್‌ ಡಾಟ್‌ ಆರ್ಗ್‌ ವೆಬ್‌ಸೈಟ್‌ನಲ್ಲಿ (www.change.org)  ನಮ್ಮ ಮೆಟ್ರೊ ವಿತ್‌ ನಮ್ಮ ಕನ್‌ಸಲ್ಟೇಷನ್‌ (Namma Metro with Namma Consultations) ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದರು. ಇದಕ್ಕೆ ಮಂಗಳವಾರ ರಾತ್ರಿ 10 ಗಂಟೆವರೆಗೆ 30ಸಾವಿರ ಮಂದಿ ಸಹಿ ಹಾಕಿದ್ದಾರೆ.

ಗೊಟ್ಟಿಗೆರೆ– ನಾಗವಾರ ಮಾರ್ಗದ ವಿಸ್ತೃತ ಯೋಜನಾ ವರದಿಯಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಕಂಟೋನ್ಮೆಂಟ್‌ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ನೆಲದಡಿಯಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣವಾಗಲಿದೆ ಎಂದು ಹೇಳಿತ್ತು. ನಂತರ ತಾಂತ್ರಿಕ ಕಾರಣಗಳಿಂದಾಗಿ ಈ ಸ್ಥಳದ ಬದಲು ಬಂಬೂಬಜಾರ್‌ ಮೈದಾನದ ಕೆಳಗಡೆ ನಿಲ್ದಾಣ ನಿರ್ಮಿಸುವುದಾಗಿ ತಿಳಿಸಿತ್ತು. ಹೊಸ ವಿನ್ಯಾಸದಿಂದ ₹ 1000 ಕೋಟಿ ಉಳಿತಾಯ ಆಗಲಿದೆ ಎಂದೂ ನಿಗಮ ಹೇಳಿತ್ತು.

‘ಕಂಟೋನ್ಮೆಂಟ್‌ ರೈಲು ನಿಲ್ದಾಣದ ಬಳಿಯೇ ಮೆಟ್ರೊ ನಿಲ್ದಾಣ ನಿರ್ಮಾಣ ವಾದರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಬಂಬೂಬಜಾರ್‌ನಿಂದ ರೈಲು ನಿಲ್ದಾಣದವರೆಗೆ ಪ್ರಯಾಣಿಕರು ನಡೆಯುವುದು ತಪ್ಪಲಿದೆ’ ಎಂದು ದುಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊ ಯೋಜನೆಗಳನ್ನು ರೂಪಿಸುವ ಮುನ್ನ ಜನರ ಅಭಿಪ್ರಾಯ ಸಂಗ್ರಹಿಸಬೇಕು. ಈ ನಿಲ್ದಾಣದ ಸ್ಥಳ ಬದಲಾವಣೆ ನಿರ್ಧಾರವನ್ನು ಕೈಬಿಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳು. ನಮ್ಮ ಆನ್‌ಲೈನ್‌ ಅಭಿಯಾನಕ್ಕೆ ಇಷ್ಟೊಂದು ಬೆಂಬಲ ವ್ಯಕ್ತವಾದ ಬಳಿಕವಾದರೂ ಬಿಎಂಆರ್‌ಸಿಎಲ್‌ ನಿರ್ಧಾರವನ್ನು ಬದಲಾಯಿಸಬೇಕು’ ಎಂದರು.

ವಿವಿಧ ಸಂಘಟನೆಗಳು ದುಂಡುಮೇಜಿನ ಸಭೆಯನ್ನು ನಡೆಸಿ ನಿಗಮವು ಮೂಲ ವಿನ್ಯಾಸಕ್ಕನುಗುಣವಾಗಿಯೇ ಈ ನಿಲ್ದಾಣವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದ್ದವು. ಸಂಸದ ಪಿ.ಸಿ.ಮೋಹನ್‌ ಅವರು ಕೂಡಾ ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು.

ಬಿಲ್ಲೆ ಬದಲಾಯಿಸಲಿರುವ ಮೆಟ್ರೊ ನಿಗಮ

ಮೆಟ್ರೊ ಪ್ರಯಾಣಕ್ಕೆ ಟಿಕೆಟ್‌ ರೂಪದಲ್ಲಿ ನೀಡುವ ಬಿಲ್ಲೆಗಳ ಸ್ವರೂಪವನ್ನು ಬದಲಾಯಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ಹೊಸ ಬಿಲ್ಲೆಗಳನ್ನು ಸಂಪೂರ್ಣ ಪ್ಲಾಸ್ಟಿಕ್‌ನಿಂದ ತಯಾರಿಸಲಾಗುತ್ತದೆ. ಅದರ ಒಂದು ಮುಖದಲ್ಲಿ ಮೆಟ್ರೊ ರೈಲು ಹಾಗೂ ವಿಧಾನಸೌಧದ ಚಿತ್ರಗಳಿರುತ್ತವೆ. ಇನ್ನೊಂದು ಮುಖದಲ್ಲಿ ಕೆಂಪೇಗೌಡರು ಲಾಲ್‌ಬಾಗ್‌ನಲ್ಲಿ ನಿರ್ಮಿಸಿರುವ ಕಲ್ಲಿನ ಗೋಪುರ ಹಾಗೂ ನಗರದ ಮೇರೆಗಳನ್ನು ಗುರುತಿಸುವ ಚಿತ್ರಗಳು ಇರಲಿದೆ.  ‘ಬೆಂಗಳೂರು ನಮ್ಮ ಮೆಟ್ರೊ’ ಎಂಬ ಬರಹವನ್ನೂ ಈ ಬಿಲ್ಲೆ ಒಳಗೊಳ್ಳಲಿದೆ.

‘ಏಕತಾನತೆಯನ್ನು ಮುರಿಯುವ ಉದ್ದೇಶದಿಂದ ಹೊಸ ಬಿಲ್ಲೆಗಳನ್ನು ಪರಿಚಯಿಸುತ್ತಿದ್ದೇವೆ. ಇದರ ವಿನ್ಯಾಸವನ್ನು ಆಗಾಗ್ಗೆ ಬದಲಾಯಿಸಲಿದ್ದೇವೆ’ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

ಕ್ರಮೇಣ ಈ ಬಿಲ್ಲೆಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಉದ್ದೇಶವನ್ನೂ ನಿಗಮ ಹೊಂದಿದೆ.

’ಮುಂದಿನ ಬಾರಿ ಬಿಲ್ಲೆಯ ವಿನ್ಯಾಸ ಬದಲಾಯಿಸುವಾಗ ಅದರ ಒಂದು ಮುಖದಲ್ಲಿ ಕಂಪೆನಿಗಳ ಲೋಗೊ ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತೇವೆ. ಇನ್ನೊಂದು ಬದಿಯಲ್ಲಿ ಮೆಟ್ರೊ ರೈಲು ಹಾಗೂ ವಿಧಾನಸೌಧದ ಚಿತ್ರವನ್ನು ಮುದ್ರಿಸುತ್ತೇವೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry