ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ನಿರೀಕ್ಷೆಯಲ್ಲಿ ವೆಬ್‌ಸೈಟ್‌!

ಹಂಪಿ ಉತ್ಸವಕ್ಕೆ ಇನ್ನು ಎಂಟೇ ದಿನ ಬಾಕಿ, ಸಮಸ್ಯೆ ಸೃಷ್ಟಿಸಿದ ಇಲಾಖೆಗಳ ವಿಳಂಬ ನೀತಿ
Last Updated 26 ಅಕ್ಟೋಬರ್ 2017, 5:54 IST
ಅಕ್ಷರ ಗಾತ್ರ

ಬಳ್ಳಾರಿ: ಉತ್ಸವ ಆರಂಭವಾಗಲು ಇನ್ನು ಎಂಟು ದಿನಗಳಷ್ಟೆ ಉಳಿದಿದೆ. ಈ ಸಂದರ್ಭದಲ್ಲಿ ಉತ್ಸವದ ಕುರಿತು ಆನ್‌ಲೈನ್‌ ಮಾಹಿತಿ ತಿಳಿಯಲು ಬಯಸುವವರಿಗಾಗಿ ಜಿಲ್ಲಾಡಳಿತವು hampiutsav.com ವೆಬ್‌ಸೈಟ್‌ ರೂಪಿಸಿದ್ದರೂ ಹೆಚ್ಚಿನ ಮಾಹಿತಿ ಅಲ್ಲಿ ಲಭ್ಯವಿಲ್ಲ.

ವಿವಿಧ ಇಲಾಖೆಗಳು ತಾವು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಕುರಿತು ತ್ವರಿತಗತಿಯಲ್ಲಿ ಮಾಹಿತಿಗಳನ್ನು ನೀಡದೇ ಇರುವುದು ಸಮಸ್ಯೆಯಾಗಿ ಮಾರ್ಪಟ್ಟಿದೆ. ಹಿಂದಿನ ವರ್ಷ ಉತ್ಸವವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ ಫೋಟೋ ಹೊರತುಪಡಿಸಿದರೆ, ಈ ಬಾರಿ ಉತ್ಸವದ ಸಿದ್ಧತೆಯ ಕುರಿತು ಫೋಟೋಗಳನ್ನು ಸೇರಿಸಿಲ್ಲ.

‘ದಿನವೂ ಇಲಾಖೆಗಳ ಗಮನ ಸೆಳೆದರೂ ಮಾಹಿತಿಗಳು ದೊರಕುತ್ತಿಲ್ಲ. ಈ ಸಂಗತಿಯನ್ನು ಜಿಲ್ಲಾಧಿಕಾರಿಯ ಗಮನಕ್ಕೂ ತರಲಾಗಿದೆ’ ಎಂದು ವೆಬ್‌ಸೈಟ್‌ ವ್ಯವಸ್ಥಾಪಕರಾದ ಎನ್‌ಐಸಿ ಅಧಿಕಾರಿ ವಸ್ತ್ರದ್‌ ಬುಧವಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸಪೇಟೆ, ತೋರಣಗಲ್ಲು, ಕಮಲಾಪುರ ಮತ್ತು ಹಂಪಿಯಲ್ಲಿರುವ ಹೋಟೆಲ್‌ಗಳ ವಿವರ, ಉತ್ಸವದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊತ್ತ ಅಧಿಕಾರಿಗಳ ವಿವರ, ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ’ ಎಂದರು.

50 ಮಳಿಗೆ ಉಚಿತ:
ಹಂಪಿ ಉತ್ಸವದಲ್ಲಿ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವವರಿಗೆ ಈ ಬಾರಿ 50 ಮಳಿಗೆಗಳನ್ನು ಉಚಿತವಾಗಿ ನೀಡಲು ಜಿಲ್ಲಾಡಳಿತ ನಿರ್ಧರಿಸಿದ್ದು, ಎಲ್ಲರ ಕಣ್ಣು ಆ ಮಳಿಗೆಗಳ ಮೇಲೆ ನೆಟ್ಟಿವೆ. ಹಿಂದಿನ ವರ್ಷಕ್ಕಿಂತಲೂ ಈ ಬಾರಿ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲು ಸಿದ್ಧತೆ ನಡೆದಿದೆ.

‘ಆಹಾರ ಪದಾರ್ಥಗಳ ಮಳಿಗೆ ಹಾಗೂ ಕರಕುಶಲ ವಸ್ತು ಪ್ರದರ್ಶನದ ಮಳಿಗೆಗೆ ಹಿಂದಿನ ವರ್ಷದ ರೀತಿಯಲ್ಲೇ ತಲಾ ₨ 3000 ದರ ನಿಗದಿ ಮಾಡಲಾಗಿದೆ. ಈಗಾಗಲೇ ಬಿಜಾಪುರ, ಕಲಬುರ್ಗಿ, ಶಿವಮೊಗ್ಗ ಹಾಗೂ ಮಂಗಳೂರಿನ ಸಂಘ–ಸಂಸ್ಥೆಗಳು ಹೆಸರು ನೋಂದಾಯಿಸಿವೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಂಜುನಾಥ ತಿಳಿಸಿದರು.

ಹೆಚ್ಚು ಮಳಿಗೆ:
‘ಹಿಂದಿನ ವರ್ಷ ಒಟ್ಟು 160 ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಕರಕುಶಲ ವಸ್ತುಗಳ ಪ್ರದರ್ಶನಕ್ಕೆಂದು 100 ಮಳಿಗೆ ಹಾಗೂ ಆಹಾರ ಪದಾರ್ಥಗಳಿಗೆಂದು 60 ಮಳಿಗೆಗಳಿದ್ದವು. ಈ ಬಾರಿ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಿ ಹೆಚ್ಚು ಜನರನ್ನು ಆಕರ್ಷಿಸುವ ಉದ್ದೇಶವಿದೆ’ ಎಂದರು.

‘ಈಗಾಗಲೇ 25 ಸಂಘ–ಸಂಸ್ಥೆಗಳು ಮಳಿಗೆಗಳಿಗೆ ಬೇಡಿಕೆ ಸಲ್ಲಿಸಿ ಶುಲ್ಕ ಪಾವತಿಸಿವೆ. ಆನ್‌ಲೈನ್‌ ಮೂಲಕವೂ 15 ಅರ್ಜಿಗಳು ಸಲ್ಲಿಕೆಯಾಗಿವೆ. ಈ ವಾರಾಂತ್ಯಕ್ಕೆ ಹೆಚ್ಚು ಬೇಡಿಕೆ ಸಲ್ಲಿಕೆಯಾಗುವ ನಿರೀಕ್ಷೆ ಇದೆ’ ಎಂದರು.

***

ರಾಜ್ಯಮಟ್ಟದ ಶ್ವಾನ ಪ್ರದರ್ಶನ
ಹಂಪಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಶ್ವಾನ ಪ್ರದರ್ಶನವೂ ನಡೆಯಲಿರುವುದು ವಿಶೇಷ. ‘16ರಿಂದ 19 ತಳಿಯ ಶ್ವಾನಗಳ ಪ್ರದರ್ಶನ ನಡೆಯಲಿದ್ದು, ಪ್ರತಿ ತಳಿಯಲ್ಲಿ ಗಂಡು ಮತ್ತು ಹೆಣ್ಣು ಶ್ವಾನಗಳಿಗೆ ಪ್ರತ್ಯೇಕವಾಗಿ ಮೊದಲ ಮತ್ತು ಎರಡನೇ ಬಹುಮಾನ ನೀಡಲಾಗುವುದು.

ಉತ್ತಮ ಪ್ರದರ್ಶನ ನೀಡುವ ಒಂದು ಶ್ವಾನಕ್ಕೆ ಛಾಂಪಿಯನ್‌ ಡಾಗ್‌ ಪ್ರಶಸ್ತಿ ನೀಡಲಾಗುವುದು’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಪರಮೇಶ್ವರನಾಯಕ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರದರ್ಶನವು ಉತ್ಸವದ ಕೊನೆಯ ದಿನವಾದ ನ.5ರಂದು ಹೊಸಪೇಟೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT