ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರನೆಯ ಇಂದ್ರಿಯದ ಕಥೆ ‘ಮೋಜೊ’

Last Updated 26 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿರುವ ಶ್ರೀಶ ಬೆಳಕವಾಡಿ ಈಗ ನಿರ್ದೇಶಕರಾಗಿದ್ದಾರೆ. ಅವರು ನಿರ್ದೇಶಿಸಿರುವ ಮೊದಲ ಚಿತ್ರ ‘ಮೋಜೊ’ ಶುಕ್ರವಾರ ತೆರೆಗೆ ಬರುತ್ತಿದೆ. ಅಲ್ಲದೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದಿದೆ, ಕೆಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಸುತ್ತಿಗೆ ಆಯ್ಕೆಯಾಗಿದೆ.

‘ಚಂದನವನ’ದ ಜೊತೆ ಮಾತಿಗೆ ಸಿಕ್ಕ ಶ್ರೀಶ ಅವರು ‘ಮೋಜೊ’ ಪಯಣದ ಹಾದಿಯನ್ನು ಚುಟುಕಾಗಿ ಹಂಚಿಕೊಂಡಿದ್ದಾರೆ. ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ:

* ಇದು ನಿಮ್ಮ ಮೊದಲ ಚಲನಚಿತ್ರ. ನಿಮ್ಮ ಸಿನಿಮಾ ಪಯಣದ ಕಥೆ ಹೇಳಬಹುದೇ?
‘ಮೋಜೊ’ಗಿಂತ ಮೊದಲು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೆ. ಆದರೆ ‘ಮೋಜೊ’ ನಾನು ನಿರ್ದೇಶಿಸಿರುವ ಮೊದಲ ಚಲನಚಿತ್ರ. ಸಿನಿಮಾ ಕ್ಷೇತ್ರಕ್ಕೆ ಬರುವ ಮೊದಲು ನಾನು ಐ.ಟಿ. ಕ್ಷೇತ್ರದಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿದ್ದೇನೆ. ಐ.ಟಿ.ಯಲ್ಲಿ ಇರುವಾಗ ಕೂಡ ಕಿರುಚಿತ್ರಗಳ ಕೆಲಸವನ್ನು ಹವ್ಯಾಸದ ರೀತಿಯಲ್ಲಿ ಮಾಡಿಕೊಂಡಿದ್ದೆ. ನನ್ನ ಸ್ನೇಹಿತ ಸತೀಶ್ ಪಾಠಕ್ ಜೊತೆ ಸೇರಿ ಕಿರುಚಿತ್ರ ಮಾಡುತ್ತಿದ್ದೆ.

ಚಲನಚಿತ್ರ ಮಾಡಬೇಕು ಎಂಬುದು ನನ್ನ 25 ವರ್ಷಗಳ ಕನಸು. ಹಾಗೆ ನೋಡಿದರೆ, ನಾನು ಪ್ರೌಢಶಾಲೆ ಹಾಗೂ ಕಾಲೇಜಿನಲ್ಲಿ ಇರುವಾಗಿನಿಂದಲೂ ಸಿನಿಮಾ ಮಾಡುವ ಕನಸು ಹೊತ್ತಿದ್ದೆ. ಈಗ ‘ಮೋಜೊ’ ಮೂಲಕ ಅದು ನನಸಾಗುತ್ತಿದೆ.

* ಈ ಸಿನಿಮಾ ಹೇಳುವ ಕಥೆ ಏನು?
ನಿರ್ದಿಷ್ಟವಾದ ಘಟನೆಯೊಂದು ಮುಂದೆ ಆಗುತ್ತದೆ ಎಂದು ನಮ್ಮಲ್ಲಿ ಹಲವರಿಗೆ ಆಗಾಗ ಅನಿಸುವುದುಂಟು. ಮುಂದೆ ಏನಾಗುತ್ತದೆ ಎಂಬುದನ್ನು ಗೊತ್ತು ಮಾಡಿಕೊಳ್ಳುವ ಶಕ್ತಿ ಕೆಲವರಿಗೆ ಇರುತ್ತದೆ. ಆ ಶಕ್ತಿ ಸುಪ್ತವಾಗಿ ಇರಬಹುದು. ಮಗನಿಗೆ ಅಪಘಾತ ಆಯಿತು ಎಂದಾದರೆ ದೂರದ ಯಾವುದೋ ಊರಿನಲ್ಲಿ ಇರುವ ತಾಯಿಗೆ ವಿಷಯ ಗೊತ್ತಾಗದೇ ಇದ್ದಾಗಲೂ ಒಂದು ಬಗೆಯ ಸಂಕಟ ತಾನೇ ತಾನಾಗಿ ಆರಂಭವಾಗುತ್ತದೆ. ಹಲವು ತಾಯಂದಿರಿಗೆ ಹೀಗಾಗುವುದನ್ನು ನಾವು ಕಂಡಿದ್ದೇವೆ.

‘ಮೋಜೊ’ ಚಿತ್ರದ ನಾಯಕನಿಗೆ ಆರನೆಯ ಇಂದ್ರಿಯ ಎಚ್ಚೆತ್ತುಕೊಳ್ಳುತ್ತದೆ. ಆಗ ಆತನಿಗೆ ಭವಿಷ್ಯದಲ್ಲಿ ಆಗುವ ವಿದ್ಯಮಾನಗಳು ಗೋಚರವಾಗಲು ಶುರುವಾಗುತ್ತದೆ. ಆದರೆ, ಹೀಗೆಲ್ಲ ಆಗುವುದರಿಂದ ನಾಯಕನಿಗೆ ಎಷ್ಟರಮಟ್ಟಿಗೆ ಉಪಯೋಗ ಆಗುತ್ತದೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು. ಚುಟುಕಾಗಿ ಹೇಳಬೇಕು ಎಂದಾದರೆ, ಮುಂದಾಗುವ ಘಟನೆಗಳು ಕಾಣಿಸಲು ಶುರುವಾದ ನಂತರ ನಾಯಕ ಬಿಕ್ಕಟ್ಟಿನ ಸ್ಥಿತಿ ತಲುಪುತ್ತಾನೆ.

ಒಂದು ಕೊಲೆಯನ್ನು ಆತ ಆರನೆಯ ಇಂದ್ರಿಯದ ಮೂಲಕವೇ ಕಾಣುತ್ತಾನೆ. ಆದರೆ ಆ ಕೊಲೆಯ ಜೊತೆ ಯಾರಿಗೆ ಸಂಬಂಧ ಇದೆ, ಅಂಥದ್ದೊಂದು ಕೊಲೆ ನಿಜಕ್ಕೂ ನಡೆಯುತ್ತದೆಯೇ ಎಂಬ ಪ್ರಶ್ನೆಗೂ ಸಿನಿಮಾ ಉತ್ತರ ಕೊಡುತ್ತದೆ. ಆರನೆಯ ಇಂದ್ರಿಯದ ಇರುವಿಕೆ ಹಾಗೂ ಕೊಲೆಯೊಂದರ ಥ್ರಿಲ್ಲರ್ ಕಥಾಹಂದರ ಇರುವ ಕನ್ನಡದ ಮೊದಲ ಸಿನಿಮಾ ಇದು.

* ಚಿತ್ರೀಕರಣ ಎಲ್ಲೆಲ್ಲಿ ನಡೆದಿದೆ?
ಈ ಚಿತ್ರದ ಚಿತ್ರೀಕರಣ ಮುಖ್ಯವಾಗಿ ನಡೆದಿರುವುದು ಬೆಂಗಳೂರಿನಲ್ಲಿ. ಚಿಕ್ಕಮಗಳೂರು, ಹೊರನಾಡು, ಮಂಗಳೂರು, ಉಡುಪಿ ಭಾಗಗಳಲ್ಲಿಯೂ ಚಿತ್ರೀಕರಣ ನಡೆಸಿದ್ದೇವೆ. ಹಾಡುಗಳನ್ನು ಬೆಂಗಳೂರಿನ ಹೊರಗಡೆ ಚಿತ್ರೀಕರಿಸಿದ್ದೇವೆ.

* ಇಂಥದ್ದೊಂದು ಚಿತ್ರ ನಿರ್ದೇಶಿಸಲು ಪ್ರೇರಣೆ ಏನು?
ಮನಃಶಾಸ್ತ್ರದ ಬಗೆಗಿನ ಆಸಕ್ತಿ ನನಗೆ ಈ ಸಿನಿಮಾ ಮಾಡಲು ಪ್ರೇರಣೆ ಆಯಿತು. ಮನಃಶಾಸ್ತ್ರ, ಹಿಪ್ನಾಟಿಸಂ ಬಗ್ಗೆ ನಾನು ಸಾಕಷ್ಟು ಪುಸ್ತಕಗಳನ್ನು ಓದಿದ್ದೇನೆ, ಈಗಲೂ ಓದುತ್ತಿರುತ್ತೇನೆ. ಅದು ನನಗೆ ಈ ಸಿನಿಮಾ ಮಾಡುವಲ್ಲಿ ಸಹಾಯ ಮಾಡಿದೆ. 2015ರಲ್ಲಿ ಬರೆದ ಸ್ಕ್ರಿಪ್ಟ್‌ ಇದು.

ಮನಃಶಾಸ್ತ್ರಕ್ಕೆ ಸಂಬಂಧಿಸಿದ ಕಥೆಯನ್ನು ಸಿನಿಮಾ ಮೂಲಕ ಹೇಳಲು ಕಾರಣ ಇದೆ. ಮನಃಶಾಸ್ತ್ರ ಎಂಬುದು ಬಹಳ ಆಸಕ್ತಿಕರ ವಿಷಯ. ಆದರೆ ಇದನ್ನು ಜನರಿಗೆ ಸುಲಭವಾಗಿ ಹೇಳಲು ಆಗದು. ಹಾಗಾಗಿ, ಮನಸ್ಸನ್ನು ರಂಜಿಸುವಂತಹ ವಿಷಯವನ್ನು ಆಯ್ಕೆ ಮಾಡಿಕೊಂಡು ಅದಕ್ಕೂ ಮನಃಶಾಸ್ತ್ರಕ್ಕೂ ಸಂಬಂಧ ಬೆಸೆದು ಜನರಿಗೆ ಕಥೆ ಹೇಳುತ್ತಿದ್ದೇನೆ.

ಈ ಸಿನಿಮಾದ ನಾಯಕಿ ಮನಃಶಾಸ್ತ್ರಜ್ಞೆ. ನಾಯಕ, ನಾಯಕಿಯನ್ನು ಭೇಟಿ ಮಾಡಿ ತನಗೆ ಆಗಿರುವ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾನೆ. ಕಥೆ ಅಲ್ಲಿಂದ ಮುಂದುವರಿಯುತ್ತದೆ. ನಾಯಕ ಭಾವಿಸಿಕೊಂಡಿರುವುದು ಸತ್ಯವೋ ಸುಳ್ಳೋ ಎಂಬ ಪ್ರಶ್ನೆಯೇ ಈ ಸಿನಿಮಾದಲ್ಲಿ ಬಹಳ ಮುಖ್ಯವಾಗಿ ಕಾಡುತ್ತದೆ.

* ಮನಃಶಾಸ್ತ್ರಕ್ಕೆ ಸಂಬಂಧಿಸಿದ ಕಥೆಯನ್ನು ಹೇಳಲು ಮುಂದಾದಾಗ ನಿರ್ಮಾಪಕರಿಂದ ಹಾಗೂ ನಿಮ್ಮ ಸ್ನೇಹಿತರಿಂದ ದೊರೆತ ಪ್ರತಿಕ್ರಿಯೆ ಏನಿತ್ತು?
ಮೊದಲು ಅವರಿಗೂ ಅಷ್ಟೊಂದು ವಿಶ್ವಾಸ ಇರಲಿಲ್ಲ. ಆದರೆ ಸ್ಕ್ರಿಪ್ಟ್‌ ಓದಿದ ನಂತರ ನಿರ್ಮಾಪಕರಿಗೆ ಧೈರ್ಯ ಬಂತು. ಇದು ಚೆನ್ನಾಗಿದೆ, ಈ ವಿಷಯವನ್ನು ಜನರಿಗೆ ಕಥೆಯ ರೂಪದಲ್ಲಿ ತಿಳಿಸಬೇಕು ಎಂದು ಹೇಳಿದರು. ಸತೀಶ್ ಪಾಠಕ್ ಹಾಗೂ ಗಜಾನನ ಭಟ್ (ನಿರ್ಮಾಪಕ) ಬೆಂಬಲ ನೀಡಿದರು.

* ಇಂಗ್ಲಿಷ್ ಕಥೆ ಅಥವಾ ಸಿನಿಮಾಗಳ ಪ್ರಭಾವ ಇದರಲ್ಲಿದೆಯೇ?
ಹಾಗೇನೂ ಇಲ್ಲ. ಇದು ಸಂಪೂರ್ಣ ಸ್ವಮೇಕ್ ಚಿತ್ರ. ಬೇರೆ ಕಡೆಯಿಂದ ಏನನ್ನೂ ಎರವಲು ಪಡೆದಿಲ್ಲ. ಆರನೆಯ ಇಂದ್ರಿಯಕ್ಕೆ ಸಂಬಂಧಿಸಿದ ಚಿತ್ರಗಳು ಇಂಗ್ಲಿಷ್‌ನಲ್ಲಿ ಇವೆ. ಆದರೆ ಆರನೆಯ ಇಂದ್ರಿಯಕ್ಕೂ, ಕೊಲೆಯೊಂದರ ನಿಗೂಢತೆಗೂ ಸಂಬಂಧ ಜೋಡಿಸಿದ ಸಿನಿಮಾಗಳು ಇಂಗ್ಲಿಷ್‌ನಲ್ಲಿಲ್ಲ. ಅವರು ಆರನೆಯ ಇಂದ್ರಿಯವನ್ನು ಬಳಸಿಕೊಂಡಿರುವುದು ಬೇರೆಯದೇ ರೀತಿಯಲ್ಲಿ.

* ಅಂತರರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರಶಸ್ತಿಗಳು ಬಂದಿದ್ದರ ಬಗ್ಗೆ ಪ್ರತಿಕ್ರಿಯೆ?
ಪ್ರಶಸ್ತಿಗಾಗಿ ಸಿನಿಮಾ ಮಾಡಲಿಲ್ಲ ನಾವು. ಕಥೆ ಹೇಳಬೇಕು ಎಂಬ ಆಸೆಯಿಂದ ಸಿನಿಮಾ ಮಾಡಿದ್ದೇವೆ. ಸಿನಿಮಾ ಪೂರ್ಣಗೊಂಡ ನಂತರ ನಿರ್ಮಾಪಕರು ಇದನ್ನು ವೀಕ್ಷಿಸಿದರು, ಖುಷಿಪಟ್ಟರು. ಇದು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಾಣಬೇಕು ಎಂದರು. ಇದು ನನಗೂ ಸರಿ ಅನಿಸಿತು.

ನಮಗೆ ಎಲ್ಲ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಕಲ್ಕತ್ತಾ ಅಂತರರಾಷ್ಟ್ರೀಯ ಕಲ್ಟ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಂದಿದೆ. ಕೆಲವೆಡೆ ಪ್ರಶಸ್ತಿ ಸುತ್ತಿಗೆ ಆಯ್ಕೆ ಆಗಿದೆ. ಇದು ಕನ್ನಡ ಚಿತ್ರರಂಗಕ್ಕೂ ಒಂದು ಹೆಮ್ಮೆ.

* ಇದನ್ನು ‘ಹೊಸ ಅಲೆ’ಯ ಸಿನಿಮಾ ಎಂದು ಕರೆಯುವಿರಾ?
ಹೌದು ಇದೊಂದು ಹೊಸ ಅಲೆಯ ಸಿನಿಮಾ. ಯಾರೂ ಮಾಡದ ಪ್ರಯೋಗ ಮಾಡಿದ್ದೇವೆ. ಜನ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಒಳ್ಳೆಯ ಕಥೆ ಇರುವ ಚಿತ್ರ ಕನ್ನಡದಲ್ಲಿ ಯಾವತ್ತೂ ಸೋತಿಲ್ಲ. ನಮ್ಮ ಕಥೆ ಚೆನ್ನಾಗಿದೆ. ಹಾಗಾಗಿ ಸಿನಿಮಾ ಗೆಲ್ಲುತ್ತದೆ ಎಂಬ ವಿಶ್ವಾಸ ಇದೆ.

* ಪಾತ್ರಧಾರಿಗಳ ಆಯ್ಕೆ ಪ್ರಕ್ರಿಯೆ ಹೇಗಿತ್ತು?
ನಮ್ಮ ಸಿನಿಮಾದ ಎಲ್ಲ ಪಾತ್ರಧಾರಿಗಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿದ್ದೇವೆ. ಪರಿಚಯದವರು ಎಂಬ ಕಾರಣ ಇಟ್ಟುಕೊಂಡು ಯಾರನ್ನೂ ಆಯ್ಕೆ ಮಾಡಿಲ್ಲ. ನಮಗೆ ಗಾಡ್‌ ಫಾದರ್‌ಗಳು ಇಲ್ಲ. ಆದರೆ ತಂತ್ರಜ್ಞರನ್ನು ಮಾತ್ರ ವೃತ್ತಿಪರತೆ ಇರುವವರನ್ನೇ ಆಯ್ಕೆ ಮಾಡಿಕೊಂಡಿದ್ದೇವೆ. ತಾಂತ್ರಿಕ ವಿಚಾರಗಳಲ್ಲಿ ರಾಜಿ ಮಾಡಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT