ಭಾನುವಾರ, ಸೆಪ್ಟೆಂಬರ್ 22, 2019
23 °C

ಬಂಪರ್‌ ರಾಗಿ ಬೆಳೆ ನಿರೀಕ್ಷೆ

Published:
Updated:
ಬಂಪರ್‌ ರಾಗಿ ಬೆಳೆ ನಿರೀಕ್ಷೆ

ಅರಸೀಕೆರೆ: ತಾಲ್ಲೂಕಿನಾದ್ಯಂತ ಸುರಿದ ಉತ್ತಮ ಮಳೆಗೆ ರಾಗಿ ಹುಲುಸಾಗಿ ಬೆಳೆದಿದ್ದು, ರೈತರು ಬಂಪರ್‌ ಬೆಳೆ ನಿರೀಕ್ಷೆಯಲ್ಲಿ ಇದ್ದಾರೆ. ಮೂರ್ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಮುಂಗಾರು, ಹಿಂಗಾರು ಬೆಳೆ ಹಾನಿಯಾಗುತ್ತಿದ್ದವು. ಈ ಬಾರಿಯೂ ಹೀಗಾದರೆ ಮುಂದೇನು ಎಂಬ ಚಿಂತೆ ರೈತರಿಗಿತ್ತು. ಹಿಂಗಾರು ಮಳೆ ತೃಪ್ತಿಕರವಾಗಿ ಸುರಿದ ಪರಿಣಾಮ ಕೊಂಚ ನಿರಾಳರಾಗಿದ್ದಾರೆ.

ಆಗಸ್ಟ್‌ ಅಂತ್ಯದಲ್ಲಿ ಬಿದ್ದ ಮಳೆಗೆ ರಾಗಿ ಬಿತ್ತನೆ ಮಾಡಿದ್ದರು. ಸೆಪ್ಟೆಂಬರ್‌ ಮೊದಲ ವಾರದ ಮಳೆಗೆ ಖಾಲಿ ಬಿದ್ದ ಹೊಲಗಳಲ್ಲಿ ರಾಗಿ, ಸಾವೆ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಮಧ್ಯೆ ಮಳೆ ಕೈಕೊಟ್ಟು ರಾಗಿ ಪೈರು ಒಣಗಲಾರಂಭಿಸಿತ್ತು. ಇದೀಗ ಮಳೆ ಸುರಿದು ಒಣಗುವ ಹಂತದಲ್ಲಿದ್ದ ರಾಗಿ ಬೆಳೆ ಹಸಿರಿನಿಂದ ನಳನಳಿಸುತ್ತಿದ್ದು, ಹೂ ಬಿಟ್ಟು ತೆನೆ ಒಡೆದು ಕಾಳುಗಟ್ಟುವ ಹಂತದಲ್ಲಿದೆ. 15 ದಿನದಲ್ಲಿ ರಾಗಿ ಬೆಳೆ ಕೈ ಸೇರಲಿದೆ.

‘ಮಳೆ ಇಲ್ಲದೆ ಇದ್ದಾಗ ಮೇವಿನ ಬೆಲೆ ಗಗನಮುಖಿಯಾಗಿತ್ತು. ಒಂದು ಹೊರೆ ಹುಲ್ಲಿಗೆ ₹ 500 ದರ ಇತ್ತು. ಮೇವಿಲ್ಲದೆ ರೈತರು ಜಾನುವಾರುಗಳನ್ನು ಮಾರಾಟ ಮಾಡಿದ್ದರು.

ಈಗ ರಾಗಿ ಬೆಳೆ ಚೆನ್ನಾಗಿ ಬಂದಿದೆ. ಹಸು ಖರೀದಿಸಲು ಹೋದರೆ ₹ 35,000 ದಿಂದ ₹ 40,000 ಮತ್ತು ಜೋಡಿ ಎತ್ತಿಗೆ ₹ 40,000 ದಿಂದ ₹50,000ವರೆಗೆ ಇದೆ’ ಎನ್ನುತ್ತಾರೆ ರೈತರಾದ ನಂಜುಂಡಪ್ಪ ಮತ್ತು ಗಂಡಸಿ ನಂಜೇಗೌಡ.

ಮುಂಗಾರು ಪೂರ್ವ ಮಳೆಗೆ ಹೆಸರು, ಎಳ್ಳು, ಸೂರ್ಯಕಾಂತಿ, ಹರಳು ಬೆಳೆಗಳನ್ನು ಬಿತ್ತನೆ ಮಾಡಲಾಗಿತ್ತು. ಆದರೆ ಮಳೆ ಕೈಕೊಟ್ಟಿತು. 37 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಕೆಲವೆಡೆ ಕೀಟಬಾಧೆ ಕಾಣಿಸಿಕೊಂಡಿತ್ತು. ಔಷಧಿ ಸಿಂಪಡಣೆ ಮಾಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆಂಪಚೌಡಪ್ಪ ತಿಳಿಸಿದ್ದಾರೆ.

Post Comments (+)