ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯತ್ತ ಬನ್ನೇರುಘಟ್ಟದ ಸಿಂಹಗಳ ಪಯಣ

Last Updated 27 ಅಕ್ಟೋಬರ್ 2017, 9:22 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮಕ್ಕೆ ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದಿಂದ ಎರಡು ಸಿಂಹಗಳನ್ನು ತರಲು ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ ಸಮ್ಮತಿಸಿದೆ. ಪ್ರಾಧಿಕಾರದ ಅಧಿಕೃತ ಪತ್ರ ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ತಲುಪಿದ್ದು, ಒಂದು ವಾರದ ಒಳಗೆ ಸಿಂಹಗಳನ್ನು ತರಲು ಸಿದ್ಧತೆ ಆರಂಭವಾಗಿದೆ.

ಜಿಲ್ಲಾ ಕೇಂದ್ರ ಶಿವಮೊಗ್ಗದಿಂದ 10 ಕಿ.ಮೀ. ದೂರದಲ್ಲಿರುವ ಸಿಂಹಧಾಮದಲ್ಲಿ ಹಿಂದೆ ಹಲವು ಸಿಂಹಗಳಿದ್ದವು. ಬರುಬರುತ್ತಾ ಅವುಗಳ ಸಂತತಿ ಸಂಪೂರ್ಣ ಕ್ಷೀಣಿಸಿದೆ. 90ರ ದಶಕದಲ್ಲಿ 5 ಇದ್ದ ಸಿಂಹಗಳ ಸಂಖ್ಯೆ ನಂತರ ಕಡಿಮೆಯಾಗಿತ್ತು. ಆಪ್ರೋ–ಏಷ್ಯಾ ತಳಿಯ ಮೂರು ಸಿಂಹಗಳು ಮಾತ್ರ ಉಳಿದುಕೊಂಡಿದ್ದವು. ಈಚೆಗೆ ತಾಯಿ ಸಿಂಹ ಮೃತಪಟ್ಟಿದ್ದು, ತಂದೆ ಆರ್ಯ ಹಾಗೂ ಮಗಳು ಮಾನ್ಯ ಮಾತ್ರ ಇದ್ದಾರೆ. ಈಗ ಬನ್ನೇರುಘಟ್ಟದ ಸಿಂಹಗಳು ಬಂದರೆ ಸಂಖ್ಯೆ 4ಕ್ಕೆ ಏರಲಿದೆ.

ಗುಜರಾತ್‌ನಿಂದ ಗಂಡು–ಹೆಣ್ಣು ಸೇರಿ ಎರಡು ಸಿಂಹ ಕಳುಹಿಸಲು ಕರ್ನಾಟಕ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು. ಆದರೆ, ಅಲ್ಲಿಂದ ರಾಜ್ಯಕ್ಕೆ ಕಳುಹಿಸಲು ಪ್ರಾಧಿಕಾರ ಒಪ್ಪಿರಲಿಲ್ಲ. ಕೊನೆಗೆ ರಾಜ್ಯದ ಬನ್ನೇರುಘಟ್ಟದಿಂದಲೇ ಕಳುಹಿಸಲು ಕೋರಿ ಪುನಃ ಪತ್ರ ಬರೆಯಲಾಗಿತ್ತು.

‘ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರದ ಅನುಮತಿ ಪತ್ರ ತಲುಪಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಒಂದು ಗಂಡು, ಒಂದು ಹೆಣ್ಣು ಸಿಂಹ ತರಲಾಗುವುದು’ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೆಲುವರಾಜ್ ಮಾಹಿತಿ ನೀಡಿದರು.

ವನ್ಯಜೀವಿ ವಿಭಾಗದ ಅಧಿಕಾರಿಗಳು ಈಗಾಗಲೇ ಬನ್ನೇರುಘಟ್ಟಕ್ಕೆ ತೆರಳಿ ಸಿಂಹಗಳನ್ನು ಗುರುತು ಮಾಡಿ ಬಂದಿದ್ದಾರೆ. ಪ್ರಸ್ತುತ ಸಿಂಹಧಾಮದಲ್ಲಿ ಇರುವ ಆರ್ಯ, ಮಾನ್ಯಾ ಮಂಕಾಗಿವೆ. ಬರುವ ಸಿಂಹಗಳಿಗೆ ಕಡಿಮೆ ವಯಸ್ಸಿದ್ದರೆ ಲವಲವಿಕೆ ಇರುತ್ತದೆ.

ಹಾಗಾಗಿ, ಮೂರು–ನಾಲ್ಕು ವರ್ಷದ ಒಳಗಿನ ಸಿಂಹಗಳಿಗೇ ಆದ್ಯತೆ ನೀಡಿ, ತರಲು ಆಲೋಚಿಸಲಾಗಿದೆ. ಲಾರಿಗೆ ಬೋನ್ ಅಳವಡಿಸಿ ರಸ್ತೆ ಮೂಲಕ ತರಲಾಗುತ್ತಿದೆ. ಅದಕ್ಕಾಗಿ ವನ್ಯಜೀವಿ ವೈದ್ಯರು, ಪ್ರಾಣಿ ತಜ್ಞರನ್ನು ಒಳಗೊಂಡ ತಂಡ ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT