ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಪಥ ಮಾಡಿ ಕ್ಯಾನ್ವಾಸ್ ಮಾಡಲಿಕ್ಕೆ ಉಂಟಾ...’

Last Updated 27 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಂದರ್ಶನ: ಸುಕೃತ ಎಸ್.

* ದೇವರು ಇದ್ದಾನಾ? ಇಲ್ವಾ?
ಯಾಕ್ರಿ ಇಂಥ ಪ್ರಶ್ನೆ. ನಿಮಗೆ ಯಾಕೆ ಅಂತ? ಅವನು ಇದ್ದರೇನು? ಬಿಟ್ಟರೇನು? ನಿಮಗೆ ಏನಾಗಬೇಕು? ದೇವರು ಇದ್ದಾನೆ ಅಂತ ಶಪಥ ಮಾಡಿ ಕ್ಯಾನ್ವಾಸ್‌ ಮಾಡಲಿಕ್ಕೆ ಉಂಟಾ. ನಿಮಗೆ ನಂಬಿಕೆ ಇದ್ದರೆ ಇದ್ದಾನೆ. ಇಲ್ಲ ಅಂದರೆ ಇಲ್ಲ ಅಷ್ಟೇ. ನಮ್ಮ ನಂಬಿಕೆಯೇ ಮಾನದಂಡ. ನೀವು ನಂಬಲಿಲ್ಲ ಅಂದರೆ ದೇವರು ಇಲ್ಲ. ಯಾವುದಾದರೂ ಅಷ್ಟೇ ತಾನೆ. ನಿಮ್ಮ ಕಿಸೆಯಲ್ಲಿ ನೂರು ರೂಪಾಯಿ ಇದೆ. ಆದ್ರೆ ನಿಮಗೆ ಆ ಸಂಗತಿ ಗೊತ್ತಿಲ್ಲ ಅಂದುಕೊಳ್ಳಿ. ಆಗ ನೀವು ಶ್ರೀಮಂತರಲ್ಲ. ವಸ್ತುವೊಂದು ಇದೆ ಎನ್ನುವುದು ಸಂಪತ್ತು ಆಗಲಾರದು. ಅದು ಇದೆ ಎಂಬ ಅರಿವು ನಮಗೆ ಇದ್ದಾಗ ಮಾತ್ರ ಅದು ಸಂಪತ್ತು ಆಗಲು ಸಾಧ್ಯ.

* ವೇದದಲ್ಲಿ ನಿಮಗೆ ಇಷ್ಟವಾದ ಹಾಸ್ಯ ಪ್ರಸಂಗ...
ವೇದ ಅಂದ್ರೆ ಪ್ರಸಹನ ಅಂದ್ಕೊಂಡ್ರಾ? ಅದು ಹಾಸ್ಯಕ್ಕೋಸ್ಕರ ಇಲ್ಲ. ವೇದ ಸೂಕ್ತಿಗಳು ತುಂಬಾ ಗಂಭೀರ ತತ್ವಗಳನ್ನು ಹೇಳುತ್ತವೆ. ಅದರಲ್ಲಿ ಹಾಸ್ಯ ಪ್ರಸಂಗಗಳು ಇಲ್ಲ ಅಂತಲ್ಲ. ಕೆಲವು ಯಜ್ಞಗಳಿಗೆ ಸಂಬಂಧಿಸಿದ ಮಂತ್ರಗಳಲ್ಲಿ ಇಂಥ ಪ್ರಸಂಗಗಳು ಇವೆ. ಯಜ್ಞಮಂತ್ರಗಳನ್ನು ಮಧ್ಯಾಹ್ನದ ತನಕ ಹೇಳಿ, ನಂತರ ಮನೆ ಹೆಂಗಸರೊಡನೆ ಸಲ್ಲಾಪ ನಡೆಸುವಂಥ ಸಂಗತಿಗಳು ಅದರಲ್ಲಿವೆ. ಅದು ತುಸು ಹಾಸ್ಯ ಎನಿಸಿಕೊಳ್ಳುತ್ತದೆ. ಅಷ್ಟು ಬಿಟ್ಟರೆ ಬೇರೆಲ್ಲೂ ಬರುವುದಿಲ್ಲ.

* ನಿಮ್ಮ ಪ್ರಕಾರ ಹಾಸ್ಯಕ್ಕೆ ಯಾರು ಅಭಿಮಾನಿ ದೇವತೆ?
ಹಾಸ್ಯಕ್ಕಾಗಿಯೇ ಒಂದು ದೇವತೆ ಇದೆ ಅಂತ ಶಾಸ್ತ್ರದಲ್ಲಿ ಇಲ್ಲ. ಆದರೆ, ಹಾಸ್ಯವು ನವರಸಗಳಲ್ಲಿ ಒಂದು. ನವರಸದ ಅಭಿಮಾನಿ ದೇವತೆಯೇ ಹಾಸ್ಯಕ್ಕೂ ದೇವತೆ. ನಿಮ್ಮ ನೆನಪಿನ ಶಕ್ತಿ ಹೆಸರುವಾಸಿ. ಘನ ವಿದ್ವಾಂಸರಾದ ನಿಮಗೆ ‘ಅಯ್ಯೋ ಇದು ಮರೆತು ಹೋಯಿತಲ್ಲ, ನೆನಪಿದ್ದಿದ್ರೆ ಚೆನ್ನಾಗಿರೋದು’ ಅಂತ ಅನಿಸಿದ್ದು ಇದೆಯೇ?

ಎಷ್ಟೊಂದು ಸಲ ಅನಿಸುತ್ತೆ. ಕೆಲವು ನೆನಪಿರುತ್ತೆ, ಕೆಲವು ಮರೆತು ಹೋಗಿರುತ್ತೆ. ಈಗ ನಾನು- ನೀವು ಎಷ್ಟೊಂದು ಮಾತನಾಡಿದ್ವಿ. ನಾಳೆ ಹೊತ್ತಿಗೆ ನನಗೆ ‘ಪ್ರಜಾವಾಣಿ’ ಅವರ ಜೊತೆಗೆ ಮಾತಾಡಿದ್ದು ಅಂತ ನೆನಪಿರುತ್ತೆ. ಏನು ಮಾತನಾಡಿದೆ ಅಂತ ಮರೆತು ಹೋಗಿರುತ್ತೆ. ಲೌಕಿಕವಾದ ಮಾತು ಎಷ್ಟೇ ಹರಟೆ ಹೊಡೆದರೂ ಅನೇಕ ಸಲ ನೆನಪಿರಲ್ಲ. ನನ್ನ ಪ್ರಕಾರ ವಿಂಗಡನೆ ಬಹಳ ಮುಖ್ಯ. ಯಾವುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕಾಗುತ್ತೋ ಅದನ್ನು ಮನಸಿಗೆ ಸ್ಪಷ್ಟವಾಗಿ ಹೇಳಬೇಕು. ಇಲ್ಲದಿದ್ದರೆ ಎಲ್ಲವೂ ಮರೆತುಹೋಗುತ್ತೆ. ನನಗೆ ಇದು ಮುಖ್ಯ ವಿಷಯ ಅನಿಸದಿದ್ದರೆ ಮಾರನೇ ದಿನವೇ ಮರೆತು ಹೋಗಿರುತ್ತೆ.

* ಬೆಂಗಳೂರಿನ ಬಗ್ಗೆ ನಿಮ್ಮ ಅನಿಸಿಕೆ...
ಬೆಂಗಳೂರಿನ ಜನರು ಇನ್ನೂ ನಾಗರಿಕತೆ ಕಲಿಯಬೇಕಿದೆ. ಹಳ್ಳಿಗಳಲ್ಲಿ ಹುಟ್ಟಿದವರು ಬೆಂಗಳೂರಿಗೆ ಬಂದ ಮೇಲೆ ಏಕೆ ಹೀಗಾಗ್ತಾರೋ.

* ನಿಮಗೆ ತುಂಬಾ ಖುಷಿ ಕೊಟ್ಟವರು ಯಾರು ಮತ್ತು ಯಾಕೆ?
ಇಬ್ಬರು ಅಥವಾ ಮೂವರು ಅವಧೂತರ ಬದುಕು ನನಗೆ ತುಂಬಾ ಖುಷಿ ಎನಿಸಿತು. ಉಡುಪಿಯಲ್ಲಿ ಹಿಂದೆ, ನಾನು ಸಣ್ಣವನಿದ್ದಾಗ ಒಬ್ಬರು ಸ್ವಾಮೀಜಿ ಇದ್ದರು. ವಿದ್ಯಾಸಮುದ್ರರು ಅಂತ ಅವರ ಹೆಸರು. ಮತ್ತೊಬ್ಬರು ಸುಮಾರು ನೂರು ವರ್ಷ ಬದುಕಿದ್ದರು. ಅವರೂ ಸನ್ಯಾಸಿಗಳೇ. ಅವರಿಬ್ಬರ ಸಂಪರ್ಕ ನನಗೆ ಸಾಕಷ್ಟು ಅನುಭವಗಳನ್ನು ದಕ್ಕಿಸಿಕೊಟ್ಟಿತು. ಅವರಿಬ್ಬರನ್ನೂ ನಾನು ತುಂಬಾ ಗೌರವಿಸುತ್ತೇನೆ.

ನನ್ನ ಮೇಲೆ ಬಹಳ ಪ್ರಭಾವ ಬೀರಿದವರು ನನ್ನ ತಂದೆ. ನಾನು ಸಣ್ಣವನಿದ್ದಾಗಲೂ ನನ್ನೊಡನೆ ಅಧ್ಯಾತ್ಮದ ಬಗ್ಗೆ ಚರ್ಚಿಸುತ್ತಿದ್ದರು. ನನ್ನೊಳಗಿನ ಬೆಳವಣಿಗೆಯನ್ನು ಬಾಲ್ಯದಲ್ಲಿಯೇ ಗುರುತಿಸಿದವರು ಈ ಮೂವರು. ನನಗೆ ಖುಷಿ ಕೊಟ್ಟ ಇನ್ನೊಂದು ವ್ಯಕ್ತಿತ್ವ ಇದೆ, ಅದು ವಿದ್ಯಾಮಾನ್ಯ ತೀರ್ಥರದ್ದು. ನಾನು ಯಾರನ್ನೂ ಅಖಂಡವಾಗಿ ಗುರುಗಳು ಅಂತ ಒಪ್ಪೋದಿಲ್ಲ. ಯಾರ ಹತ್ತಿರವೂ ಅಖಂಡವಾಗಿ ಪಾಠ ಕೇಳಿಯೂ ಇಲ್ಲ. ಇನ್ನೊಬ್ಬರು ಹೇಳಿದ್ದನ್ನು ಉಗುಳೋ ಅಭ್ಯಾಸವೋ ನನಗಿಲ್ಲ. ನನಗೆ ಏನು ಕಾಣುವುದೋ ಅದನ್ನೇ ಹೇಳುವವನು ನಾನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT