ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಇ–ಮೇಲ್‌ ಸೃಷ್ಟಿಸಿ ವಂಚನೆ: ಅಂತರರಾಜ್ಯ ವಂಚಕಿ ಸೆರೆ

Last Updated 27 ಅಕ್ಟೋಬರ್ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಇ–ಮೇಲ್‌ ಐಡಿಗಳನ್ನು ಸೃಷ್ಟಿಸಿ, ಅವರ ಹೆಸರಿನಲ್ಲಿ ಹಣ ಪಡೆದು ವಂಚಿಸಿದ್ದ ಆರೋಪದಡಿ ಆಂಡ್ರಿಲಾದಾಸ್‌ ಗುಪ್ತ (29) ಎಂಬುವರನ್ನು ನಗರದ ಸಿಸಿಬಿ ಸೈಬರ್‌ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

‘ಆರೋಪಿಯ ವಿರುದ್ಧ ಅವರ ಪತಿ ಉತ್ತರ ಪ್ರದೇಶದ ಶಯಕ್‌ ಸೇನ್‌ ಅವರೇ ದೂರು ನೀಡಿದ್ದರು. ಹರಿಯಾಣ ಪೊಲೀಸರ ವಶದಲ್ಲಿದ್ದ ಆರೋಪಿಯನ್ನು ಬಾಡಿ ವಾರಂಟ್‌ ಮೂಲಕ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದೆವು. ಈ ವೇಳೆ ಅವರು ತಪ್ಪೊಪ್ಪಿಕೊಂಡರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ದೆಹಲಿಯ ಆಂಡ್ರಿಲಾದಾಸ್‌ ಬೆಂಗಳೂರಿನಲ್ಲಿ ಕೆಲ ವರ್ಷ ನೆಲೆಸಿ, ನಂತರ ದೆಹಲಿಗೆ ಹೋಗಿದ್ದರು. ಈ ಎರಡೂ ನಗರಗಳಲ್ಲಿ ವಾಸವಿದ್ದ ಸ್ನೇಹಿತರು ಹಾಗೂ ಸಂಬಂಧಿಕರನ್ನು ಅವರು ವಂಚಿಸಿದ್ದಾರೆ.’

‘ಪತಿ ಶಯಕ್‌ ಅವರ ಬ್ಯಾಂಕ್‌ ಖಾತೆಗಳ ಮಾಹಿತಿ ತಿಳಿದುಕೊಂಡಿದ್ದ ಆರೋಪಿ, ಆ ಖಾತೆಯಲ್ಲಿದ್ದ ಹಣವನ್ನೆಲ್ಲ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದರು. ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಇ–ಮೇಲ್‌ ಐಡಿ ಸೃಷ್ಟಿಸುತ್ತಿದ್ದ ಅವರು, ಅದರಿಂದ ಅವರ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಸಂದೇಶ ಕಳುಹಿಸುತ್ತಿದ್ದರು. ಹುಷಾರಿಲ್ಲ, ಅಪಘಾತ ಉಂಟಾಗಿದೆ ಹಾಗೂ ತುರ್ತಾಗಿ ಹಣ ಬೇಕಾಗಿದೆ ಎಂದು ಹೇಳಿ ಹಣವನ್ನು ಖಾತೆಗೆ ಜಮೆ ಮಾಡಿಸಿಕೊಳ್ಳುತ್ತಿದ್ದರು’ ಎಂದು ಅಧಿಕಾರಿ ವಿವರಿಸಿದರು.

‘ಕೆಲವರೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹ ಬೆಳೆಸಿದ್ದ ಆರೋಪಿ, ಕಂಪೆನಿಯ ಒಡತಿ ಎಂದು ಪರಿಚಯಿಸಿಕೊಂಡಿದ್ದರು. ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ, ಕೆಲ ತಿಂಗಳು ಬಿಟ್ಟು ದುಪ್ಪಟ್ಟು ಹಣ ವಾಪಸ್‌ ನೀಡುವುದಾಗಿ ನಂಬಿಸಿದ್ದರು. ಅದನ್ನು ನಂಬಿದ್ದ ಜನರಿಂದ ಬ್ಯಾಂಕ್‌ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದರು’ ಎಂದರು.

ಬಿಲ್ ಪಾವತಿಸದೆ ಪರಾರಿ:

‘ವಂಚನೆ ಬಳಿಕ ಊರೂರು ಸುತ್ತುತ್ತಿದ್ದ ಆರೋಪಿಯು ಕೆಲ ದಿನಗಳವರೆಗೆ ಫರೀದಾಬಾದ್‌ನ ಸೂರಜ್‌ಕುಂಡ್‌ನ ವಿವಾಂತ್‌ ಹೋಟೆಲ್‌ನಲ್ಲಿ ತಂಗಿದ್ದರು. ಅಲ್ಲಿ ಬಿಲ್ ಪಾವತಿಸದೆ ಪರಾರಿಯಾಗಿದ್ದರು. ಆ ಬಗ್ಗೆ ಹೋಟೆಲ್‌ ವ್ಯವಸ್ಥಾಪಕರು ದೂರು ನೀಡಿದ್ದರಿಂದ ಹರಿಯಾಣ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು’ ಎಂದು ಅಧಿಕಾರಿ ತಿಳಿಸಿದರು.

‘ಹೆಣ್ಣೂರಿನಲ್ಲಿ ನೆಲೆಸಿದ್ದ ಸ್ನೇಹಿತೆ ದಟಿಯಾರ್‌ ಐನಾ ಅವರಿಂದ ₹64,000, ಭಾರತಿನಗರದ ರಂಜಿನಿ ಎಂಬುವರಿಂದ ₹2.5 ಲಕ್ಷ ಪಡೆದು ವಾಪಸ್‌ ಕೊಡದೆ ವಂಚಿಸಿದ್ದರು. ಕಾಂತರಾಜು ಹಾಗೂ ಸಂಗೀತಾ ಜೆರಿಯನ್ ಎಂಬುವರಿಂದ ವಿಮಾನ ಟಿಕೆಟ್‌ ಕಾಯ್ದಿರಿಕೊಂಡು ಹಣ ವಾಪಸ್‌ ಕೊಟ್ಟಿರಲಿಲ್ಲ. ಅಥಮಸ್‌ ಕಂಪೆನಿಗೆ ಖೊಟ್ಟಿ ದಾಖಲೆಗಳನ್ನು ಕೊಟ್ಟು ವಂಚಿಸಿದ್ದರು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT