ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ: ಸಂಶೋಧನಾ ಕಾರ್ಯಕ್ಕೆ ಹಿನ್ನಡೆ

Last Updated 28 ಅಕ್ಟೋಬರ್ 2017, 5:45 IST
ಅಕ್ಷರ ಗಾತ್ರ

ಬೀದರ್‌: ಸಿಬ್ಬಂದಿ ಕೊರತೆಯಿಂದಾಗಿ ಇಲ್ಲಿಯ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಂಶೋಧನಾ ಕಾರ್ಯಕ್ಕೆ ಹಿನ್ನಡೆಯಾಗಿದೆ. ಪಶು ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಅವುಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಕಳೆದ 10 ವರ್ಷಗಳ ಅವಧಿಯಲ್ಲಿ ಸಿಬ್ಬಂದಿಯನ್ನು ನೇಮಕ ಮಾಡದ ಕಾರಣ ಸಂಶೋಧನಾ ಕಾರ್ಯಗಳಿಗೆ ತೊಡಕು ಉಂಟಾಗಿದೆ.

ವಿಶ್ವವಿದ್ಯಾಲಯ ದಲ್ಲಿ 300 ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾಲಯದ ಸಿಬ್ಬಂದಿ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಶು ವೈದ್ಯಕೀಯ ಕ್ಷೇತ್ರಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳು ಬರುತ್ತಿದ್ದರೂ ರಾಜ್ಯ ಸರ್ಕಾರ ನೇಮಕಾತಿಗೆ ಮುಂದಾಗದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ವಿಶ್ವವಿದ್ಯಾಲಯವು ಹೆಚ್ಚು ಮೊಟ್ಟೆ ಇಡುವ ನಾಟಿ ಕೋಳಿಯನ್ನು ಹೋಲುವ ಗಿರಿರಾಜ ಕೋಳಿ ತಳಿ ಅಭಿವೃದ್ಧಿಪಡಿಸಿ ರಾಜ್ಯದ ಗಮನ ಸೆಳೆದಿತ್ತು. ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು ಮೀನಿನ ಆಹಾರ ಸಂಶೋಧನೆಯ ಯೋಜನೆಯನ್ನು ವಿಶ್ವವಿದ್ಯಾಲಯಕ್ಕೆ ಕೊಟ್ಟಿತ್ತು. ಮಂಗಳೂರು ಮೀನುಗಾರಿಕೆ ಕಾಲೇಜಿನ ಪ್ರಾಧ್ಯಾಪಕರು ಮೀನಿನ ವಂಶವಾಹಿನಿಯ ಸಂಶೋಧನೆ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ 10 ವರ್ಷಗಳ ನಂತರದಲ್ಲಿ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಪ್ರಮುಖ ಸಂಶೋಧನೆಗಳು ನಡೆದಿಲ್ಲ.

ರಾಜ್ಯದಲ್ಲಿ 40 ಸಂಶೋಧನಾ ಕೇಂದ್ರಗಳಿವೆ. ದೇವಣಿ ಹಸು ತಳಿ ಅಭಿವೃದ್ಧಿಗೆ ಸಂಶೋಧನಾ ಘಟಕ ಸ್ಥಾಪಿಸಿದ್ದು, ಅದರ ನಿರ್ವಹಣೆಗೆ ₹ 16 ಲಕ್ಷ ಖರ್ಚಾಗುತ್ತಿದೆ. ಮುಧೋಳ ನಾಯಿ ತಳಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಘಟಕ ಯೋಜನೆ ಅಡಿಯಲ್ಲಿ ₹ 3 ಕೋಟಿ ಬಿಡುಗಡೆ ಮಾಡಿತ್ತು. ಅದರಲ್ಲಿನ ₹ 1 ಕೋಟಿ ಕಟ್ಟಡಕ್ಕೆ ಹಾಗೂ ₹ 50 ಲಕ್ಷ ಸಿಬ್ಬಂದಿ ವೇತನಕ್ಕೆ ಖರ್ಚಾಗಿದೆ. ಬೀದರ್‌ ತಾಲ್ಲೂಕಿನ ಗೋರನಳ್ಳಿಯಲ್ಲಿ ಎಮ್ಮೆ ತಳಿ ಅಭಿವೃದ್ಧಿಗೆ ಯೋಜನೆ ರೂಪಿಸಿದೆಯಾದರೂ ಒಬ್ಬರನ್ನೂ ನೇಮಕ ಮಾಡಿಲ್ಲ. ಹೀಗಾಗಿ ಯೋಜನೆ ಮೂಲೆ ಗುಂಪಾಗಿದೆ.

ಹಾವು ಕಚ್ಚಿದವರಿಗೆ ಚಿಕಿತ್ಸೆ ನೀಡಲು ರೋಗ ನಿರೋಧಕ ಔಷಧಿಯ ಸಂಶೋಧನೆಗೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯಕ್ಕೆ ₹2 ಕೋಟಿ ಬಿಡುಗಡೆ ಮಾಡಿದೆ. ಆದರೆ ಸಂಶೋಧನೆ ನಿಧಾನಗತಿಯಲ್ಲಿ ಸಾಗಿದೆ. ‘ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳೇ ವಿಶ್ವವಿದ್ಯಾಲಯದಲ್ಲಿ ಇದ್ದಾರೆ.

ಪಶು ತಳಿ ಅಭಿವೃದ್ಧಿ ಹಾಗೂ ಸಂಶೋಧನೆಗೆ ಪ್ರತ್ಯೇಕ ಅನುದಾನ ಇಲ್ಲ. ಮೀನು, ಆಹಾರವಾಗಿರುವ ಕಾರಣ ಅದಕ್ಕೆ ರಾಷ್ಟ್ರಮಟ್ಟದ ಸಂಸ್ಥೆಗಳು ಅನುದಾನ ಒದಗಿಸಲು ಆಸಕ್ತಿ ತೋರುತ್ತವೆ. ಎಮ್ಮೆ, ಎತ್ತುಗಳ ಕಾಲು ಮುರಿದರೆ ಶಸ್ತ್ರಚಿಕಿತ್ಸೆಗೆ ಐದು ರೂಪಾಯಿ ಅನುದಾನ ಕೂಡ ಬರುವುದಿಲ್ಲ’ ಎಂದು ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ.

‘ಸಿಬ್ಬಂದಿ ಕೊರತೆ ಇರುವುದು ನಿಜ. ಸಂಶೋಧನೆ ಕಾರ್ಯ ಸ್ಥಗಿತಗೊಂಡಿಲ್ಲ. ದೇಶದಲ್ಲಿ ಮೊದಲ ಬಾರಿಗೆ ಫೈಬರ್‌ ಗ್ಲಾಸ್ ಹಾಕಿ ಎತ್ತುಗಳ ಕಾಲು ಜೋಡಿಸಿದ್ದೇವೆ. ಶಸ್ತ್ರ ಚಿಕಿತ್ಸಾ ವಿಧಾನದಲ್ಲಿ ಸಂಶೋಧನೆ ಮಾಡಿದ್ದೇವೆ. ಅವು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಸಂಶೋಧನೆಗೆ ಪ್ರಚಾರ ದೊರೆತಿಲ್ಲ ಅಷ್ಟೇ’ ಎಂದು ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ವಿ. ಶಿವಪ್ರಕಾಶ ವಿವರಿಸುತ್ತಾರೆ.

‘ಒಂದು ವಿಭಾಗಕ್ಕೂ ಕಾಯಂ ಮುಖ್ಯಸ್ಥರು ಇಲ್ಲ. ಪ್ರಾಧ್ಯಾಪಕರ ಮೇಲೆ ಹೆಚ್ಚಿನ ಒತ್ತಡ ಇದೆ. ಬೋಧನೆ, ಕಚೇರಿ ಕೆಲಸ ಮಾಡಿಕೊಂಡು ಸಂಶೋಧನೆಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಶೋಧನಾ ಕಾರ್ಯ ನಿಧಾನವಾಗಿದೆ’ ಎಂದು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಸಹ ಸಂಶೋಧನಾ ನಿರ್ದೇಶಕ ಡಾ.ಬಸವರಾಜ ಅವಟಿ ಹೇಳುತ್ತಾರೆ.

‘ಅಧಿಕಾರದಲ್ಲಿ ಇರುವವರು ಕಾಲೇಜುಗಳನ್ನು ಉದ್ಘಾಟನೆ ಮಾಡಿ ಹೋಗುತ್ತಾರೆ. ಆದರೆ ಅಗತ್ಯವಿರುವ ಸೌಕರ್ಯಗಳನ್ನು ಒದಗಿಸಲು ಆಸಕ್ತಿ ವಹಿಸುವುದಿಲ್ಲ. ಸಿಬ್ಬಂದಿಯನ್ನೂ ನೇಮಕ ಮಾಡುವುದಿಲ್ಲ. ಕಟ್ಟಡಗಳ ಸಂಖ್ಯೆಯನ್ನು ಹೆಚ್ಚಿಸುತ್ತ ಹೋದರೆ ಪ್ರಯೋಜನ ಇಲ್ಲ. ಎಲ್ಲ ರೀತಿಯ ಸೌಲಭ್ಯ ಒದಗಿಸಬೇಕು. ಆಗ ಸಂಶೋಧನೆಗಳೂ ನಡೆಯುತ್ತವೆ’ ಎಂದು ಹೇಳುತ್ತಾರೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯೆ ಲುಂಬಿಣಿ ಗೌತಮ.

‘ಬೀದರ್‌ನಲ್ಲೇ ಮೊದಲು ಪಶು ವೈದ್ಯಕೀಯ ಕಾಲೇಜು ಆರಂಭವಾಗಿದೆ. ಶಿವಮೊಗ್ಗ, ಹಾಸನದಲ್ಲಿ ಕಾಲೇಜು ಆರಂಭಿಸಿದ ಮೇಲೆ ಇಲ್ಲಿಯ ಬಹುತೇಕ ಪ್ರಾಧ್ಯಾಪಕರು ಅಲ್ಲಿಗೆ ವರ್ಗ ಮಾಡಿಸಿಕೊಂಡು ಹೋಗಿದ್ದಾರೆ. ಪ್ರಾಧ್ಯಾಪಕರ ಮೇಲೆ ಒತ್ತಡ ಹೆಚ್ಚಾಗಿದೆ. ಹೀಗಾಗಿ ಪ್ರಾಧ್ಯಾಪಕರಿಗೆ ಸಂಶೋಧನಾ ಕಾರ್ಯಕ್ಕೆ ಹೆಚ್ಚು ಒತ್ತು ಕೊಡಲು ಸಾಧ್ಯವಾಗುತ್ತಿಲ್ಲ’ ಎಂದು ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಬಿರಾದಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT